ಬಾಕು : 29 ನೇ ಕಾಪ್ ಶೃಂಗ ಸಭೆಯಲ್ಲಿ ಭಾರತವು ಇವಿ ಕಡೆಗಿನ ತನ್ನ ಪಯಾಣವನ್ನು ಜಾಗತಿಕ ವೇದಿಕೆಯ ಮುಂದೆ ಪ್ರಸ್ತುತಪಡಿಸಿತು. ಗ್ಲೋಬಲ್ ಸೌತ್‌ನಲ್ಲಿ ಭಾರತವು ಇವಿ ಸಾರಿಗೆ ಕ್ಷೇತ್ರದ ಕಡೆಗೆ ಹೊರಳುವ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಹವಾಮಾನ ಬದಲಾವಣೆಗೆ ಪ್ರೇರಣೆ ನೀಡಬೇಕಾದ ‘ಸಿಒಪಿ 29’ ಶೃಂಗಸಭೆಯು ನಿಧಾನಗತಿಯ ಮಾತುಕತೆ ಮತ್ತು ಕಡಿಮೆ ನಿರೀಕ್ಷೆಗಳಿಂದ ಸೊರಗುತ್ತಿರುವ ನಡುವೆಯೂ ಭಾರತದ ಉಪಕ್ರಮಗಳು ಆಶಾದಾಯಕ ಸಂಗತಿ ಎನಿಸಿತು.
ಅಜೆರ್‌ಬೈಜಾನ್ ರಾಜಧಾನಿಯಲ್ಲಿ ಇತ್ತೀಚೆಗೆ ಹವಾಮಾಣ ಬದಲಾವಣೆ ಕುರಿತ ಚರ್ಚಗಾಗಿ ಸದಸ್ಯ ರಾಷ್ಟ್ರಗಳ ʼಕಾಪ್ 29ʼ ಶೃಂಗಸಭೆಯ ನಡೆಯಿತು. ಅಲ್ಲಿನ ʼವಿ ಮೀನ್ ಬಿಸಿನೆಸ್ ಪೆವಿಲಿಯನ್‌ನಲ್ಲಿ ನಡೆದ “ಇಂಡಿಯಾಸ್ ಎಲೆಕ್ಟ್ರಿಕ್ ಮೊಬಿಲಿಟಿ ಲೀಡರ್‌ಶಿಪ್ : ಸ್ಪಾಟ್‌ಲೈಟಿಂಗ್ ಇವಿ ಟ್ರಾನ್ಸಿಷನ್ ಪಾಥ್‌ವೇಸ್ ಫಾರ್ ದ ಗ್ಲೋಬಲ್ ಸೌತ್ʼ ಎಂಬ ಗೋಷ್ಠಿಯಲ್ಲಿ ಭಾರತದ ಸುಸ್ಥಿರ ಸಾರಿಗೆ ಹವಾಮಾನ ಬದಲಾವಣೆಯಲ್ಲಿ ಭಾರತದ ನೀತಿಗಳು, ಉಪಕ್ರಮಗಳು ಹಾಗೂ ಸಹಭಾಗಿತ್ವವನ್ನು ವಿವರಿಸಲಾಯಿತು.
ಸಂವಾದ ಗೋಷ್ಠಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಪರಿವರ್ತನೆಗೊಳ್ಳುವಲ್ಲಿ ಭಾರತದ ಪ್ರವರ್ತಕ ಪ್ರಯತ್ನಗಳನ್ನು ಬೆಳಕು ಚೆಲ್ಲಲಾಯಿತು. ಇದು ಸಾರಿಗೆ ಕ್ಷೇತ್ರವನ್ನು ಇಂಗಾಲ ಮುಕ್ತ ಮಾಡಲು ನಿರ್ಣಾಯಕ ಪರಿಹಾರವಾಗಿದೆ. ಸರ್ಕಾರದ ನೀತಿಗಳು, ಖಾಸಗಿ ವಲಯದ ಬೆಂಬಲ ಮತ್ತು ಆವಿಷ್ಕಾರಗಳ ಮೂಲಕ ಭಾರತವು ಜಾಗತಿಕ ದಕ್ಷಿಣದಲ್ಲಿ (ಭೂಮಿಯ ದಕ್ಷಿಣಾರ್ಧದಲ್ಲಿರುವ ದೇಶಗಳು) ಪರಿವರ್ತಕ ಮಾರ್ಗವನ್ನು ರೂಪಿಸುತ್ತಿರುವುದು ಸಾಬೀತಾಯಿತು. ಯಾಕೆಂದರೆ ಈ ಪ್ರದೇಶಗಳು ಅಪಾರ ಅಭಿವೃದ್ಧಿ ಕಾರ್ಯಗಳು ಮತ್ತು ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸುತ್ತಿವೆ.
ಗೋಷ್ಠಿಯ ಗಮನ ಸೆಳೆದ ವಿಷಯಗಳು
1) ಇವಿ ಸಾರಿಗೆ ಕ್ಷೇತ್ರಕ್ಕೆ ತೆಲಂಗಾಣದ ಬೆಂಬಲ
ಎಲೆಕ್ಟ್ರಿಕ್ ಬಸ್‌ಗಳು ಮತ್ತು ತ್ರಿಚಕ್ರ ವಾಹನಗಳ ತಯಾರಿಕೆಯ ಕೇಂದ್ರವಾಗಿರುವ ತೆಲಂಗಾಣವು ಈಗಾಗಲೇ ಮಹತ್ವಾಕಾಂಕ್ಷೆಯ ʼಮೊಬಿಲಿಟಿ ವ್ಯಾಲಿʼ ಯೋಜನೆಗಳನ್ನು ಆರಂಭಿಸಿದೆ. ಅದನ್ನು ಸಿಒಪಿ29 ರಲ್ಲಿ ಹಂಚಿಕೊಂಡಿತು. ಈ ರಾಜ್ಯವು ಕೈಗೊಂಡಿರುವ ಯೋಜನೆಗಳು ಕೌಶಲ ಅಭಿವೃದ್ಧಿಗೆ ಒತ್ತು ನೀಡಿದ್ದು, ಸಾರ್ವಜನಿಕ ಸಾರಿಗೆ ಮತ್ತು ಕೊನೆಯ ಮೈಲಿ ವಿತರಣಾ ವ್ಯವಸ್ಥೆಗಳನ್ನೂ ಇವಿಗೆ ಪರಿವರ್ತಿಸುವತ್ತಾ ಸಾಗಿದೆ.
“ಕ್ಷಿಪ್ರವಾಗಿ ನಡೆಯುತ್ತಿರವ ಇವಿ ಪರಿವರ್ತನೆ ಯೋಜನೆಗಳನ್ನು ಹೆಚ್ಚಿಸುವ ಗುರಿಯನ್ನು ನಮ್ಮ ರಾಜ್ಯದ ನೀತಿಗಳು ಹೊಂದಿವೆ. ತೆಲಂಗಾಣವು ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಹೆಮ್ಮೆಯಾಗುತ್ತಿದೆ” ಎಂದು ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಟೋಮೋಟಿವ್ ಮತ್ತು ಇವಿ ನಿರ್ದೇಶಕ ಗೋಪಾಲಕೃಷ್ಣನ್ ವಿಸಿ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
2. ಎಲೆಕ್ಟ್ರಿಕ್ ಮೊಬಿಲಿಟಿ ಪರಿವರ್ತನೆಯ ಚಾಂಪಿಯನ್ ಕರ್ನಾಟಕ
ವಿದ್ಯುತ್ ಚಾಲಿತ ಸಾರಿಗೆ ಕ್ಷೇತ್ರವನ್ನು ಮುನ್ನಡೆಸುವುದು ಮಾತ್ರವಲ್ಲದೆ ಕಾರ್ಮಿಕರ ಪರಿವರ್ತನೆಗೆ ಆದ್ಯತೆ ಕೊಟ್ಟಿರುವುದರಲ್ಲಿ ಕರ್ನಾಟಕವು ಆದ್ಯ ಸ್ಥಾನದಲ್ಲಿ ನಿಲ್ಲುತ್ತದೆ. 2017ರಲ್ಲಿಯೇ ಇವಿ ನೀತಿಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಕರ್ನಾಟಕ. ಇದು ದೇಶದ ಅತಿದೊಡ್ಡ ಇವಿ ಚಾಲಿತ ಸಾರ್ವಜನಿಕ ಬಸ್ ಸೇವೆಗಳನ್ನು ಹೊಂದಿರುವ ರಾಜ್ಯ. ಜತೆಗೆ ವ್ಯಾಪಕ ಇವಿ ಚಾರ್ಜಿಂಗ್ ನೆಟ್ವರ್ಕ್ ಕೂಡ ರಚಿಸಿದೆ. ʼಗಿಗ್ ಕಾರ್ಮಿಕರಿಗೆ (ಪ್ರಾಜೆಕ್ಟ್ ಆಧರಿತವಾಗಿ ಕೆಲಸ ಮಾಡುವವರು) ಗರಿಷ್ಠ ಬೆಂಬಲ ನೀಡುತ್ತಿದೆ.
ಭಾರತದ ವಿದ್ಯುತ್ ಚಾಲಿತ ಸಾರಿಗೆ ಕ್ರಾಂತಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಸುಸ್ಥಿರ ಮತ್ತು ಅಂತರ್ಗತ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ ಎಂದು ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್ ಹೇಳಿದರು. “ಇವಿಗೆ ಪರಿವರ್ತನೆಗೊಳ್ಳುವಲ್ಲಿ ನಮ್ಮ ಅಚಲ ಬದ್ಧತೆಯು ಸಮಾನ ಕಾರ್ಮಿಕ ಪರಿವರ್ತನೆಗೂ ಬೆಂಬಲ ನೀಡಿದೆ. ಇಂಗಾಲ ಮುಕ್ತ ಸಾರಿಗೆಗೆ ವೇಗ ನೀಡುವ ಜತೆಗೆ ಎಲ್ಲರ ನೆರವಿನೊಂದಿಗೆ ಅದನ್ನು ಸಬಲೀಕರಣಗೊಳಿಸುವ ಮಾನದಂಡ ನಿಗದಿಪಡಿಸಲಾಗಿದೆ ಎಂದು ಹೇಳಿದರು.
3. ಸಾರ್ವಜನಿಕ- ಖಾಸಗಿ ಸಹಭಾಗಿತ್ವ
ಭಾರತದ ಎಲೆಕ್ಟ್ರಿಕ್ ಚಲನಶೀಲತೆಯ ಕ್ರಾಂತಿಯು ʼಫೇಮ್ ಯೋಜನೆʼ ,ʼಪಿಎಂ-ಇಡ್ರೈವ್ ಉಪಕ್ರಮʼ ಮತ್ತು ಉತ್ಪಾದನೆ ಆಧಾರಿತ ಪ್ರೋತ್ಸಾಹಗಳು (ಪಿಎಲ್ಐ) ಸೇರಿದಂತೆ ಹಲವು ನೀತಿಗಳಿಂದ ಪ್ರೇರಣೆ ಪಡೆದಿದೆ. ಜತೆಗೆ ಉಕ್ಕಿನಂತಹ ಅಗತ್ಯ ಸಾಮಗ್ರಿಗಳ ಪೂರೈಕೆ ಕ್ಷೇತ್ರದಲ್ಲಿ ಅಸ್ತಿತ್ವ ಹೊಂದಿರುವ ಜೆಎಸ್‌ಡಬ್ಲ್ಯೂ ಬೆಂಬಲವೂ ನಿರ್ಣಾಯಕವಾಗಿದೆ.
ಜೆಎಸ್‌ಡಬ್ಲ್ಯು 2040 ರ ವೇಳೆಗೆ ತನ್ನ ಸಾಗಾಟ ವಾಹನಗಳನ್ನು ವಿದ್ಯುತ್‌ಚಾಲಿತವಾಗಿ ಮಾಡಲು ಪ್ರತಿಜ್ಞೆ ಮಾಡಿದೆ. ಪರಿವರ್ತನೆ ಸಾಧಿಸಲು ನಮಗೆ 15 ವರ್ಷಗಳನ್ನು ಬೇಕು. ನಮ್ಮ ವ್ಯವಹಾರಗಳಾದ್ಯಂತ ಎಲ್ಲಾ ಫ್ಲೀಟ್ ಕಾರ್ಯಾಚರಣೆಗಳನ್ನು ನಿಗದಿತ ಸಮಯದೊಳಗೆ ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತಿಸುವ ಗುರಿ ಹೊಂದಿದ್ದೇವೆ “ಎಂದು ಜೆಎಸ್‌ಡಬ್ಲ್ಯು ಗ್ರೂಪ್‌ನ ಉಪಾಧ್ಯಕ್ಷ ಸ್ವರೂಪ್ ಬ್ಯಾನರ್ಜಿ ಹೇಳಿದರು.
4. ಜಗತ್ತಿಗೆ ಭಾರತದ ಪಾಠ
ಭಾರತದ ನೂತನ ನೀತಿಗಳು. ಜಾಗತಿಕ ಇವಿ ಪರಿವರ್ತನೆಗೆ ಮಾನದಂಡಗಳನ್ನು ನಿಗದಿಪಡಿಸುತ್ತಿವೆ ಎಂದು ಸಿಒಪಿ 29ರಲ್ಲಿ ಕ್ಲೀನ್ ಮೊಬಿಲಿಟಿ ಕಲೆಕ್ಟಿವ್ (ಸಿಎಂಸಿ) ಜಾಗತಿಕ ಸಂಯೋಜಕ ಅಸ್ಲಿಹಾನ್ ತುಮರ್ ಹೇಳಿದರು. ಫ್ಲಿಪ್‌ಕಾರ್ಟ್ ಮತ್ತು ಜೊಮಾಟೊದಂತಹ ಭಾರತೀಯ ಕಂಪನಿಗಳು 2030 ರವೇಳೆಗೆ ಮಹತ್ವಾಕಾಂಕ್ಷೆಯ 100% ಇವಿ ಗುರಿಗಳನ್ನು ನಿಗದಿಪಡಿಸುವುದು ಇದರಲ್ಲಿ ಸೇರಿದೆ.
ದಿಟ್ಟ ನೀತಿಗಳು ಮತ್ತು ಸಾಂಸ್ಥಿಕ ಮಹತ್ವಾಕಾಂಕ್ಷೆಗಳು ಜಾಗತಿಕ ದಕ್ಷಿಣ ಮತ್ತು ಅದರಾಚೆಗೆ ಹಸಿರು ಭವಿಷ್ಯವನ್ನು ಹೇಗೆ ರೂಪಿಸಬಹುದು ಎಂಬುದಕ್ಕೆ ಭಾರತ ಉತ್ತಮ ಉದಾಹರಣೆಯಾಗಿದೆ.
5. ಜಾಗತಿಕ ದಕ್ಷಿಣದಾಚೆಗಿನ ಸಹಭಾಗಿತ್ವ
ಈ ಗೋಷ್ಠಿಯು ಜಾಗತಿಕ ದೃಷ್ಟಿಕೋನ ಮುಂದಿಟ್ಟಿರು. ದಕ್ಷಿಣ ಆಸ್ಟ್ರೇಲಿಯಾದ ಜಲ ರಾಯಭಾರಿ ಕಾರ್ಲೀನ್ ಮೇವಾಲ್ಡ್ ನವೀಕರಿಸಬಹುದಾದ ಇಂಧನದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ಆಸ್ಟ್ರೇಲಿಯಾ-ಭಾರತ ದ್ವಿಪಕ್ಷೀಯ ಸಂಬಂಧಗಳು ಮತ್ತು ಸಹಕಾರವನ್ನು ಪ್ರಸ್ತುತಪಡಿಸಲಾಯಿತು.
ಡೊಮಿನಿಕನ್ ರಿಪಬ್ಲಿಕ್‌ನ ಹವಾಮಾನ ಬದಲಾವಣೆಯ ರಾಷ್ಟ್ರೀಯ ಮಂಡಳಿಯ ಪಮೇಲಾ ಅರ್ಬಿಯು ಅವರು, ಲ್ಯಾಟಿನ್ ಅಮೆರಿಕವನ್ನು ಪ್ರತಿನಿಧಿಸಿದರು
ಭಾರತದ ಇವಿ ಕಡೆಗಿನ ಪ್ರಯಾಣ: ಭರವಸೆಯ ಬೆಳಕು
ಅಸೋಸಿಯೇಷನ್ ಫಾರ್ ಸೈಂಟಿಫಿಕ್ ಅಂಡ್ ಅಕಾಡೆಮಿಕ್ ರಿಸರ್ಚ್ ಪರವಾಗಿ ಮಾತನಾಡಿದ ಕಾರ್ಯತಂತ್ರ ಮುಖ್ಯಸ್ಥ ಸಂಜೀವ್ ಗೋಪಾಲ್, “ಸಿಒಪಿ 29ರ ನಿಧಾನಗತಿಯ ಪ್ರಗತಿಯ ನಡುವೆ ಭಾರತದ ಎಲೆಕ್ಟ್ರಿಕ್ ಸಾರಿಗೆ ಕ್ಷೇತ್ರದ ಪಾಲುದಾರಿಕೆಗಳು, ಸಾರ್ವಜನಿಕ ಸಾರಿಗೆಯಲ್ಲಿ ಪರಿವರ್ತನೆಗಳು, ಕೊನೆಯ ಮೈಲಿ ಸಂಪರ್ಕ ಮತ್ತು ವಿತರಣೆ ವ್ಯವಸ್ಥೆ ಮತ್ತು ಗ್ರಾಹಕರ ಜಾಗೃತಿ ಮೂಲಕ ಭರವಸೆ ಮೂಡಿಸಿದೆ ” ಎಂದು ಹೇಳಿದರು.
ಬಲವಾದ ನೀತಿಗಳು, ನವೀನ ಪಾಲುದಾರಿಕೆಗಳು ಮತ್ತು ಸ್ಥಿರ ಗಮನದೊಂದಿಗೆ, ಚಲನಶೀಲತೆ ವ್ಯವಸ್ಥೆಗಳನ್ನು ರಚಿಸುವಲ್ಲಿ ಭಾರತ ಮುಂದಾಳತ್ವ ವಹಿಸಬಹುದು ಎಂಬುದು ಖಚಿತವಾಗಿದೆ. ನಮ್ಮ ಇವಿ 100 ಯೋಜನೆ 2030 ರ ವೇಳೆಗೆ 100% ಇವಿ ಪರಿವರ್ತನೆಗೆ ಉದ್ಯಮ ನಾಯಕರ ಬೆಂಬಲ ದೊರಕಿದೆ. “ಎಂದು ಕ್ಲೈಮೇಟ್ ಗ್ರೂಪ್(ಭಾರತ) ಸಿಸ್ಟಮ್ಸ್ ನಿರ್ದೇಶಕ ಅತುಲ್ ಮೊದಲಿಯಾರ್ ಹೇಳಿದರು.