ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಹಳ್ಳಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅಲ್ಲದೇ ರಕ್ತದಾನ ಮಾಡುವ ಮೂಲಕ ಸದೃಢ ನಾಡಿನ ನಿರ್ಮಾಣಕ್ಕಾಗಿ ಕನ್ನಡಾಭಿಮಾನವನ್ನು ಪ್ರದರ್ಶಿಸಲಾಯಿತು.
ಗ್ರಾಮ ಪಂಚಾಯ್ತಿ ಉಳವಿ ಹಾಗೂ ದೂಗೂರು ಇವರ ಸಂಯುಕ್ತ ಆಶ್ರಯದೊಂದಿಗೆ ಕಾನಹಳ್ಳಿಯ ಕುವೆಂಪು ಕನ್ನಡ ಯುವಕರ ಸಂಘದಿಂದ ಗಡೆಗದ್ದೆಯ ಕುವೆಂಪು ಬಯಲು ರಂಗಮಂದಿರದಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಯುವಕ, ಯುವತಿಯರು ರಕ್ತದಾನ ಮಾಡುವ ಮೂಲಕ ಈ ನಾಡಿನ ಸದೃಢ ನಿರ್ಮಾಣಕ್ಕಾಗಿ ಕನ್ನಡಾಭಿಮಾನವನ್ನು ಮರೆಯಲಾಯಿತು.
ಈ ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ಮಹಿಳೆಯರು ಪೂರ್ಣಕುಂಭದ ಸ್ವಾಗತವನ್ನು ಗಣ್ಯರಿಗೆ ನೀಡಿದರು. ಗ್ರಾಮದ ಶ್ರೀನವದುರ್ಗೇಶ್ವರಿಯ ಸನ್ನಿಧಿಯವರೆಗೆ ಭುವನೇಶ್ವರಿ ದೇವಿಯ ಮೆರವಣಿಗೆ ಸಾಗಿತು.
ಶ್ರೀನವದುರ್ಗೇಶ್ವರಿಯ ಸನ್ನಿಧಿಯಲ್ಲಿ ಪ್ರಾರ್ಥನೆಯ ನಂತ್ರ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ.ಕೆ.ಇ ಅವರು ಧ್ವಜಾರೋಹಣ ನೆರವೇರಿಸಿದರು. ನಂತ್ರ ಗ್ರಾಮ ಪಂಚಾಯ್ತಿ ಉಳವಿ ಅಧ್ಯಕ್ಷೆ ಸರಸ್ವತಿ ಗಣಪತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.
ಇನ್ನೂ ದೂಗೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಂಗಮ್ಮ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹದೇವ್ ಪವಾರ್ ಅವರು ರಕ್ತ ದಾನವನ್ನು ಯಾರು ಮಾಡಬಹುದು. ಯಾರು ಮಾಡಬಾರದು ಎಂಬುದನ್ನು ತಿಳಿಸಿದರು. ಅಲ್ಲದೇ ರಕ್ತದಾನದ ಮಹತ್ವ, ಪ್ರಯೋಜವನ್ನು ತಿಳಿಸಿಕೊಟ್ಟರು.
ಉಳವಿಯ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ವಿರೂಪಾಕ್ಷಪ್ಪ ಅವರು ಮಾತನಾಡಿ ಈ ಗ್ರಾಮದಲ್ಲಿ ಕನ್ನಡಿಗರ ಸಂಸ್ಕಾರ ಮತ್ತು ಸಂಸ್ಕೃತಿಗಳು ಮೇಳೈಸಿದ್ದಾವೆ. ಇದು ಮುಂದುವರೆಯಲಿ ಎಂದರು.
ಬೆಂಗಳೂರಿನ ಉದ್ಯಮಿ ಮಂಜುನಾಥ್.ಡಿ ಅವರು ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಮಾತನಾಡಿ ಕುವೆಂಪು ಕನ್ನಡ ಯುವಕರ ಸಂಘವು ಸಮಾಜ ಮುಖಿ ಚಟುವಟಿಕೆಯನ್ನು ಮುಂದುವರೆಸಿದೆ. ಈ ಮೂಲಕ ಅಪ್ಪಟ ಕನ್ನಡಾಭಿಮಾನವನ್ನು ಹೊರಹೊಮ್ಮಿಸುತ್ತಿರುವುದನ್ನು ಶ್ಲಾಘನೀಯವೆಂದರು.
ಗ್ರಾಮ ಪಂಚಾಯ್ತಿ ಸದಸ್ಯರಾದಂತ ವಿನಾಯಕ.ಬಿ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಇದೇ ವೇಳೆಯಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ಕನ್ನಡ ಯುವಕರ ಸಂಘದ ಅಧ್ಯಕ್ಷರಾದ ಮಂಜಪ್ಪ.ಕೆ.ಪಿ ವಹಿಸಿದ್ದರು.
ರಾತ್ರಿ 8.30ರಿಂದ ಗ್ರಾಮದಲ್ಲಿ ಅತಿಥಿ ಕಲಾವಿದರು ಹಾಗೂ ಹಿರಿಯ ಯಕ್ಷಗಾನ ಕಲಾವಿದರಿಂದ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ಧಳೆ ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದ ವೇಳೆ ಉಳವಿ ಪ್ರೌಢ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷರಾದಂತ ಮಂಜುನಾಥ.ಬಿ, ಕಾನಹಳ್ಳಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರಾದಂತ ಸೋಮೇಶ.ಎಂ, ಗ್ರಾಮ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ.ಎಂ ಉಪಸ್ಥಿತರಿದ್ದರು.
ಈ ವೇಳೆ ಕುಮಾರಿ ಸುಮನ್ವಿತಾ.ಪಿ ಮತ್ತು ಕುಮಾರಿ ಶ್ರದ್ಧಾ.ಪಿ ಪ್ರಾರ್ಥಿಸಿದರೇ, ಶಿಕ್ಷಕಿ ನಂದಿನಿ ಸ್ವಾಗತಿಸಿದರು. ಪ್ರೇಮ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರೇ, ಕುವೆಂಪು ಕನ್ನಡ ಯುವಕ ಸಂಘದ ಸದಸ್ಯ ನಿಂಗರಾಜ ವಂದಿಸಿದರು. ಕಾನಹಳ್ಳಿ, ಗಡೆಗದ್ದೆ ಗ್ರಾಮದ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮ ಯಶಸ್ವಿಯಾಗೋದಕ್ಕೆ ಸಾಥ್ ನೀಡಿದ್ದು ಕುವೆಂಪು ಕನ್ನಡ ಯುವಕ ಸಂಘದ ಉಪಾಧ್ಯಕ್ಷ ಅಶೋಕ್, ಕಾರ್ಯದರ್ಶಿ ಆದರ್ಶ, ಸದಸ್ಯರಾದಂತ ಪುಟ್ಟಸ್ವಾಮಿ.ಎಲ್. ಇವರೆಲ್ಲರಿಗೂ ಅಧ್ಯಕ್ಷರಾದಂತ ಮಂಜಪ್ಪ.ಕೆ.ಪಿ ಅವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯದ ಆತಿಥ್ಯ ನೆನೆಯಬೇಕು: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ
‘ಒಂದೇ ದಿನದಲ್ಲಿ 5 ಲಕ್ಷ ನಾಗರಿಕರು ಪ್ರಯಾಣ’ : ಇತಿಹಾಸ ನಿರ್ಮಿಸಿದ ‘ಭಾರತೀಯ ವಾಯುಯಾನ’