ಶಿವಮೊಗ್ಗ: ಜಿಲ್ಲೆಯ ಸಾಗರ ನಗರಸಭೆಯಲ್ಲಿ ಸೇಲ್ ಸರ್ಟಿಫಿಕೇಟ್ ಹಗರಣ ಇನ್ನೂ ಹಸಿಯಾಗೇ ಇದೆ. ಈ ನಡುವೆಯೂ ನಗರಸಭೆಯ ಕೋಟ್ಯಂತರ ಬೆಲೆ ಬಾಳುವ ಆಸ್ತಿಯೇ ಖಾಸಗಿ ಬಲಾಡ್ಯ ವ್ಯಕ್ತಿಯೊಬ್ಬರ ಪಾಲಾಗಿದೆ ಎನ್ನಲಾಗುತ್ತಿದೆ. ಇದರಲ್ಲಿ ನಗರಸಭೆಯ ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಸದಸ್ಯರೂ ಪಾಲುದಾರರು ಎಂದೇ ಹೇಳಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾಗರ ನಗರಸಭೆ ವ್ಯಾಪ್ತಿಯ 29ನೇ ವಾರ್ಡ್ ನಲ್ಲಿ ನಗರಸಭೆ ಖಾಲಿ ಜಾಗವಿತ್ತು. 2019ರಿಂದಲೂ ಈ ಜಾಗವನ್ನು ಅಂಗನವಾಡಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿ, ಬಳಕೆ ಮಾಡಲು ಅವಕಾಶ ಕೋರಿ ನಗರಸಭೆಯ ಸದಸ್ಯರು, ಸ್ಥಳೀಯ ನಿವಾಸಿಗಳು ಕೂಡ ನಗರಸಭೆಗೆ ಮನವಿ ಮಾಡಿದ್ದರು.
ದಿನಾಂಕ 07-08-2021ರಂದು ಕೂಡ 29ನೇ ವಾರ್ಡ್ ನಲ್ಲಿನ ಸರ್ವೆ ನಂಬರ್.02ರ ಸರ್ಕಾರಿ ಜಾಗವನ್ನು ಸಮುದಾಯ ಭವನ ಹಾಗೂ ಅಂಗನವಾಡಿ ಕೇಂದ್ರ ನಿರ್ಮಿಸಿಕೊಡಲು 29ನೇ ವಾರ್ಡಿನ ಸಾರ್ವಜನಿಕರು ಸಾಗರ ನಗರಸಭೆ ಅಧ್ಯಕ್ಷರಾಗಿರುವ ಮಧುರ ಶಿವಾನಂದ ಅವರಿಗೆ ಪತ್ರದಲ್ಲಿ ಕೋರಿದ್ದರು.
ಏನಿದೆ ಪತ್ರದಲ್ಲಿ.?
ಸಾಗರ ನಗರಸಭೆ ವ್ಯಾಪ್ತಿಯ 29ನೇ ವಾರ್ಡಿನ ಸಾರ್ವಜನಿಕರಿಗೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಯಾವುದೇ ರೀತಿಯ ಕಟ್ಟಡ ಇರುವುದಿಲ್ಲ. ಇದರಿಂದ ಈ ವಾರ್ಡಿನ ನಾಗರೀಕರು ರಸ್ತೆಯ ಬದಿಯಲ್ಲಿಯೇ ಕಾರ್ಯಕ್ರಮಗಳ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದಿದ್ದರು.
ಈ ಹಿನ್ನಲೆಯಲ್ಲಿ ಸಾಗರನ ನಗರದ 29ನೇ ವಾರ್ಡಿನ ಆವಿನಹಳ್ಳಿ ರಸ್ತೆ, ಸರ್ವೆ ನಂಬರ್.02ರಲ್ಲಿ ಸರ್ಕಾರಿ ಜಾಗವಿದ್ದು, ಅದರ ಅಳತೆ ಅಂದಾಡು 80×150 ಅಡಿಗಳಷ್ಟು ಖಾಲಿ ನಿವೇಶನವಾಗಿರುತ್ತದೆ. ಇದರಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸಮುದಾಯ ಭವನ ಹಾಗೂ ಅಂಗನವಾಡಿ ಕೇಂದ್ರವನ್ನು ನಿರ್ಮಿಸಿಕೊಡಬೇಕಾಗಿ ವಿನಂತಿಸಿದ್ದಾರೆ.
ಈ ಪತ್ರದಲ್ಲಿ ಸಾರ್ವಜನಿಕರಾದಂತ ನವ್ಯ.ಆರ್, ಲಲಿತಾ, ಸೌಮ್ಯ.ಆರ್, ರಾಘವೇಂದ್ರ, ಲತಾ, ರವಿಚಂತ್ರ, ಮಂಜುನಾಥ್ ಸೇರಿದಂತೆ ಇತರರ ಸಹಿ ಕೂಡ ಇದೆ. ಇದನ್ನು ಸಾಗರ ನಗರಸಭೆಯ ಟಪಾಲು ವಿಭಾಗಕ್ಕೆ ನೀಡಲಾಗಿದ್ದು ದಿನಾಂಕ 07-08-2021ರಂದು ಸ್ವೀಕರಿಸಿರುವುದಾಗಿ ಸೀಲ್ ನೊಂದಿಗೆ ಹಿಂದಿರುಗಿಸಲಾಗಿದೆ.
ಅಂದು ಇದೇ ಬೇಡಿಕೆ ಇಟ್ಟಿದ್ದ ಕಾಂಗ್ರೆಸ್ ಕಾರ್ಪೋರೇಟರ್, ಇಂದು ಸೈಲೆಂಟ್
2019, 2020ರ ವೇಳೆಯಲ್ಲಿ ಸಾಗರ ನಗರಸಭೆಯ ವಾರ್ಡ್ ನಂಬರ್.29ರ ನಗರಸಭೆ ಸದಸ್ಯ ಉಮೇಶ್ ಅವರು ಕೂಡ ವಾರ್ಡಿನ ಸಾರ್ವಜನಿಕರೊಂದಿಗೆ ಸರ್ವೆ ನಂ.2ರಲ್ಲಿನ ಸರ್ಕಾರಿ ಖಾಲಿ ಜಾಗದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಅವಕಾಶ ನೀಡಬೇಕು. ಸರ್ಕಾರಿ ಖಾಲಿ ಜಾಗವೊಂದು ಸರ್ಕಾರಿ ಕಚೇರಿ ನಿರ್ಮಾಣಕ್ಕೆ ಬಳಕೆಯಾಗಲಿ ಅಂತ ಧ್ವನಿ ಗೂಡಿಸಿದ್ದರು. ಆದರೇ ಈಗ ಅವರೇ ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಈ ಜಾಗ ಉಳಿಸಲು ಮುಂದಾಗಬೇಕು. ಈಗ ಹೋರಾಟಕ್ಕೆ ಇಳಿಯಬೇಕು. ಸರ್ಕಾರಿ ಜಾಗವೊಂದು ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗಲು ಮಾಡಬೇಕು ಅಂತ ಸ್ಥಳೀಯರ ಆಗ್ರಹವಾಗಿದೆ.
ನಗರಸಭೆ ಪೌರಾಯುಕ್ತರನ್ನು ಕೇಳಿದ್ರೆ ಉತ್ತರವಿಲ್ಲ
ಈ ಕುರಿತಂತೆ ಕನ್ನಡ ನ್ಯೂಸ್ ನೌ ಸಾಗರ ನಗರಸಭೆಯ ಪೌರಾಯುಕ್ತರಾದಂತ ಹೆಚ್.ಕೆ ನಾಗಪ್ಪ ಅವರಿಗೆ ಕರೆ ಮಾಡಿ, ಶಿವಪ್ಪ ನಾಯಕ ನಗರದ ಗ್ಯಾಸ್ ಗೋಡೌನ್ ಹಿಂಭಾಗದಲ್ಲಿನ ಕೋಟ್ಯಂತರ ರೂ ಬೆಲೆ ಬಾಳುವಂತ ನಗರಸಭೆ ಆಸ್ತಿಯನ್ನು ಕಬಳಿಸಿರೋದಾಗಿ ಹೇಳಲಾಗುತ್ತಿದೆ. ಇದು ನಿಜವೇ.? ಅಂತ ಪ್ರಶ್ನಿಸಿದ್ರೆ ಅದಕ್ಕೆ ಸರಿಯಾಗಿ ಉತ್ತರವಿಲ್ಲ. ವಿಚಾರಿಸುತ್ತೇನೆ, ಮಾಹಿತಿ ತಿಳಿದು ಹೇಳುತ್ತೇನೆ ಅನ್ನೋ ಉತ್ತರ ನೀಡಿದ್ದಾರೆ. ಹಾಗಾದರೆ ಸರಿಯಾದ ಮಾಹಿತಿ ಕೊಡಬೇಕಾದವರು ಯಾರು.? ಆಯುಕ್ತರಿಗೆ ಈ ಹಗರಣದಲ್ಲಿ ಪಾಲಿದ್ಯಾ.? ಇವರು ಶಾಮೀಲಾಗಿದ್ದಾರಾ? ಅನ್ನೋದು ಸಾಗರ ಜನತೆಯ ಪ್ರಶ್ನೆಯಾಗಿದೆ.
ಇದು ನಗರಸಭೆ ಜಾಗವೆಂದು ಬೋರ್ಡ್ ಹಾಕಿದ್ದೇ ಮಾಯ
ಕಳೆದ ಕೆಲ ವರ್ಷಗಳಿಂದ ವಾರ್ಡ್ ನಂ.29ರ ಸರ್ವೆ ನಂ.02ರಲ್ಲಿನ ಖಾಲಿ ಜಾಗಕ್ಕೆ ಇದು ನಗರಸಭೆ ಜಾಗ. ಒತ್ತುವರಿ ಮಾಡುವಂತಿಲ್ಲ. ಒತ್ತುವರಿ ಮಾಡಿದ್ರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಬೋರ್ಡ್ ಹಾಕಲಾಗಿತ್ತು ಎಂಬುದು ಸ್ಥಳೀಯ ನಿವಾಸಿಗಳ ಮಾತು. ಆದರೇ ಅದೇ ಖಾಲಿ ಜಾಗಕ್ಕೆ ಇದೀಗ ಖಾಸಗಿ ವ್ಯಕ್ತಿಯೊಬ್ಬರು ಇದು ತಮ್ಮ ಜಾಗ ಅಂತ ಬೇಲಿ ಹಾಕಿದ್ದಾರೆ. ಹಾಗಾದ್ರೇ ಸಾಗರ ನಗರಸಭೆಯ ಖಾಲಿ ಜಾಗಕ್ಕೆ ಖಾಸಗಿ ವ್ಯಕ್ತಿಗಳು ಕಾಂಪೌಂಡ್ ಹಾಕಿರೋದು ಯಾಕೆ ಎನ್ನುವುದೇ ಅನುಮಾನಗಳಿಗೆ ಕಾರಣವಾಗಿದೆ.
ಈ ಹಿಂದೆ ನಗರಸಭೆಯ ಜಾಗವಾಗಿದ್ದು, ಈಗ ಖಾಸಗಿಯವರು ತಮ್ಮದು ಅಂತ ಕಾಂಪೌಂಡ್ ಹಾಕಿರೋದರ ಹಿಂದಿನ ಕಾರಣವೇನು.? ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ, ಪ್ರಭಾವಿ ವ್ಯಕ್ತಿಗಳ ಕೈವಾಡ ಇದ್ಯಾ.? ಆ ಬಗ್ಗೆ ಸಂಬಂಧಿಸಿದಂತವರೇ ಉತ್ತರಿಸಿದಾಗಲೇ ಖಚಿತ ಆಗಬೇಕಿದೆ.
ಶಾಸಕರ ನಡೆ ಏನು?
ಒಟ್ಟಾರೆ ಸಾಗರ ನಗರಸಭೆಗೆ ಸೇರಿದ್ದಂತ ಕೋಟ್ಯಂತರ ಬೆಲೆ ಬಾಳುವಂತ ಸರ್ಕಾರಿ ಜಾಗವೊಂದು ಬಲಾಡ್ಯರ ಪಾಲಾಗುತ್ತಿರುವುದು, ಪಾಲಾಗಿದ್ದರ ಹಿಂದೆ ಹಗರಣದ ವಾಸನೆ ಎದ್ದಿದೆ. ಈ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗಮನಿಸಿ, ಸರ್ಕಾರಿ ಜಾಗವೊಂದು ಖಾಸಗಿ ಪಾಲಾಗಿರುವ ಬಗ್ಗೆ ತನಿಖೆಗೆ ಸೂಚಿಸಿ, ಸರ್ಕಾರಕ್ಕೆ ವಾಪಾಸು ಪಡೆಯುವ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆ ನಿಟ್ಟಿನಲ್ಲಿ ಕೆಲಸ ವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ