ಬಾಗಲಕೋಟೆ : ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ವಾಪಾಸ್ ಪಡೆಯಬಹುದು. ಅರ್ಹರ ಕಾರ್ಡ್ ಗಳಿಗೆ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿವೆ ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಪತ್ರಕರ್ತರು ಸರಿಯಾಗಿ ತಿಳಿದುಕೊಂಡು ಬರಬೇಕು. ಅನರ್ಹರ ಕಾರ್ಡ್ ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಇದಿನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಆದಾಯ ತೆರಿಗೆ ಪಾವತಿಸುವವರಿಗೂ, ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ ಎಂದು ಮರು ಪ್ರಶ್ನಿಸಿದ ಸಿಎಂ, ಯಾವ ಕಾರ್ಡ್ ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಾಸ್ ಪಡೆಯಬಹುದು. ಅರ್ಹರು ವಂಚಿತರಾಗಬಾರದು ಎಂದರು.
40% ಕಮಿಷನ್ ಆರೋಪದಿಂದ ಮುಕ್ತರಾಗಿದ್ದೇವೆ ಎನ್ನುವ ಆರ್.ಅಶೋಕ್ ಮಾತಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಕೊಟ್ಟ ದೂರಿನ ಆಧಾರದಲ್ಲಿ ನಾವು ತನಿಖೆಗೆ ಸೂಚಿಸಿದ್ದೆವು. ಸಾಕ್ಷ್ಯಾಧಾರಗಳ ಕೊರತೆಯಿಂದ ಕೊಲೆ ಆರೋಪಿಗಳು ಬಿಡುಗಡೆ ಆಗುತ್ತಾರೆ. ಹಾಗಂತ ಕೊಲೆಯೇ ಆಗಿಲ್ಲ ಅಂದರೆ ಅದರಲ್ಲಿ ಅರ್ಥ ಇಲ್ಲ. ಕೊಲೆ ನಡೆದಿರುತ್ತದೆ. ಸಾಕ್ಷಿಗಳು ಸಾಕ್ಷ್ಯ ಹೇಳಿರುವುದಿಲ್ಲ ಅಷ್ಟೆ ಅಂದರು.
ಆಪರೇಷನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಲಾಗಿತ್ತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ” ಬಿಜೆಪಿಯವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದರು, ವಿಫಲರಾದರು ಎಂದರು.