ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ನಗರಾಭೀವೃದ್ಧಿ ಇಲಾಖೆ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆಗಳ ನಡುವೆ ಸಮನ್ವಯದಿಂದ ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸ ಸುಗಮವಾಗಿ ವಿತರಿಸಲು ಅನುಕೂಲವಾಗುವಂತೆ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರೂ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಜಂಟಿ ಕಾರ್ಯಪಡೆಯೊಂದನ್ನು ರಚಿಸಲು ಇಂದು ನಡೆದ ಸಚಿವರುಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಳಿಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರುಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಖಾತಾ ರಹಿತ ಆಸ್ತಿಗಳ ನೋಂದಣಿ ನಿಲ್ಲಿಸಲಾಗಿರುವುದರಿಂದ ಉದ್ಭವಿಸಿರುವ ಸಮಸ್ಯೆಗಳ ಕುರಿತಂತೆ ದೀರ್ಘವಾಗಿ ಚರ್ಚಿಸಲಾಯಿತು.
ಜಂಟಿ ಕಾರ್ಯಪಡೆ ಅಧ್ಯಕ್ಷತೆವಹಿಸಿರುವ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಅವರು ಖಾತಾ ವಿತರಿಸುವ ಸಂಬಂಧ ತಕ್ಷಣದ ಪರಿಹಾರೋಪಾಯಗಳನ್ನು ಸೂಚಿಸುವುದು ಸೇರಿದಂತೆ ಎರಡು ತಿಂಗಳ ಒಳಗೆ ಅಂತಿಮ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ತಿಳಿಸಲಾಯಿತು.
ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಠಾಣ ವ್ಯಾಪ್ತಿಯ ವಿಸ್ತರಣೆ ಮುಂತಾದ ಸಮಸ್ಯೆಗಳಿಗೂ ಪರಿಹಾರೋಪಾಯಗಳನ್ನು ಶಿಫಾರಸು ಮಾಡುವಂತೆ ಕಾರ್ಯಪಡೆ ಅಧ್ಯಕ್ಷರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರಲ್ಲದೆ, ಖಾತಾ ವಿತರಿಸುವಲ್ಲಿ ಭವಿಷ್ಯದಲ್ಲಿ ಎದರಾಗುವ ಸಮಸ್ಯೆಗಳೂ ಸೇರಿದಂತೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವಂತೆ ನಿರ್ದೇಶನ ನೀಡಿದರು.
ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಖಾತಾ ವಿತರಣೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತಂತೆ ವ್ಯಾಪಕವಾಗಿ ಚರ್ಚಿಸಲಾಯಿತು.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಮೊದಲ ಹಂತದಲ್ಲಿ 833 ವಸತಿ ಶಾಲೆಗಳಿಗೆ ಟೆಲಿಸ್ಕೋಪ್ ಪೂರೈಕೆ