ಲಖನೌ : ಮಹಾರಾಷ್ಟ್ರದ ಮಾಜಿ ಸಚಿವ, ನಟ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಶಿವಕುಮಾರ್ ನನ್ನು ಪೊಲೀಸರು ಕೊನೆಗೆ ಬಂಧಿಸಿದ್ದಾರೆ.
ಉತ್ತರ ಪ್ರದೇಶದಿಂದ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಮುಂಬೈ ಅಪರಾಧ ವಿಭಾಗ ಹಾಗೂ ಉತ್ತರ ಪ್ರದೇಶದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶಿವಕುಮಾರ್ ನನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. ಬಹ್ರೈಚ್‌ನ ಗಂದಾರಾ ನಿವಾಸಿ ಶಿವ ಈ ಕೊಲೆಯಲ್ಲಿ ಭಾಗಿಯಾಗಿದ್ದ. ಕೊಲೆಯಾದ ನಂತರ ಆತ ತಲೆಮರೆಸಿಕೊಂಡಿದ್ದು, ಅಪರಾಧ ನಡೆದಾಗ ಹಾಜರಿದ್ದ. ಘಟನಾ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾದ ಆರೋಪಿ ಶಿವನಿಗೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇತ್ತು. ಈಗ ಈ ಪ್ರಕರಣದ ಮುಂದಿನ ತನಿಖೆಗೆ ಪ್ರಮುಖ ಕೊಂಡಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮೂವರು ಬಂದೂಕುಧಾರಿಗಳಿಂದ ಗುಂಡಿಕ್ಕಿ ಕೊಂದಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದಿಕ್(66) ಹತ್ಯೆಯ ಹಿಂದೆ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕೈವಾಡವಿದೆ ಎಂದು ಶಂಕಿಸಲಾಗಿದೆ.