ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೈಲಿಗೆ ಹೋಗುವ ಕಾಲ ದೂರವಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಸಂಡೂರು ಕ್ಷೇತ್ರದಲ್ಲಿ ಇಂದು ರೋಡ್ ಷೋದಲ್ಲಿ ಭಾಗವಹಿಸಿದ್ದ ಅವರು, ಸಿದ್ದರಾಮಯ್ಯನವರು ಮತ್ತು ಅವರ ಪತ್ನಿ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಲೋಕಾಯುಕ್ತ ತನಿಖೆ ಎದುರಿಸಿದ್ದಾರೆ ಎಂದು ವಿವರಿಸಿದರು. ಮೈಸೂರು ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಾವು ಒತ್ತಾಯಿಸಿದ್ದೇವೆ. ಸಿಬಿಐ ತನಿಖೆಗೆ ವಹಿಸಿದ 24 ಗಂಟೆಗಳಲ್ಲಿ ಮುಖ್ಯಮಂತ್ರಿಯನ್ನು ಬಂಧನ ಮಾಡಿ ಜೈಲಿಗೆ ಕಳುಹಿಸುವುದು ನಿಶ್ಚಿತ ಎಂದು ಹೇಳಿದರು.
ಹಣ, ಹೆಂಡ, ಅಧಿಕಾರದ ಬಲದಿಂದ ಹಾಗೂ ಜಾತಿ ವಿಷಬೀಜ ಬಿತ್ತಿ ರಾಜಕಾರಣ ಮಾಡುವ ಕಾಲ ಹೋಗಿದೆ. ಸಿದ್ದರಾಮಯ್ಯನವರೇ, ಇವತ್ತು ಜನ ಜಾಗೃತರಾಗಿದ್ದಾರೆ. ನಿಮ್ಮ ಮೋಸಕ್ಕೆ ಬಲಿ ಆಗುವುದಿಲ್ಲ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುವ 3ಕ್ಕೆ 3 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಗಾರು ಹನುಮಂತು ಅವರ ಚಿಹ್ನೆ ಕಮಲದ ಹೂವಿನ ಗುರುತಿಗೆ ಮತ ಕೊಡಿ. ಹಳ್ಳಿಗಳಿಗೆ ತೆರಳಿ ಬಿಜೆಪಿ ಪರವಾಗಿ ಪ್ರಚಾರ ಮಾಡಬೇಕೆಂದು ಮನವಿ ಮಾಡಿದರು.
ಬಂಗಾರು ಹನುಮಂತು ಅವರನ್ನು ಗೆಲ್ಲಿಸುವ ಉದ್ದೇಶದಿಂದ ಯಡಿಯೂರಪ್ಪ ಇಲ್ಲಿಗೆ ಬಂದಿದ್ದು, ಅದಕ್ಕಾಗಿ ನಮ್ಮೆಲ್ಲ ಬಂಧುಗಳು ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು ಎಂದು ವಿನಂತಿಸಿದರು.
ನರೇಂದ್ರ ಮೋದಿಯವರ ಗುರುತು, ಬಂಗಾರು ಹನುಮಂತು ಅವರ ಗುರುತು, ಬಿಜೆಪಿ ಗುರುತು ಕಮಲ -ಕಮಲ-ಕಮಲ ಎಂದು ನೆನಪಿಸಿದರು. ಸಂಡೂರು ಕ್ಷೇತ್ರದಲ್ಲಿ ತಾತ, ಮುತ್ತಾತಂದಿರ ಕಾಲದಿಂದ ಉಳುಮೆ ಮಾಡಿಕೊಂಡು ಬಂದ ರೈತರ ಭೂಮಿಯ ವಿಚಾರದಲ್ಲಿ ಸಮಸ್ಯೆ ಆಗಿದೆ. ಅದನ್ನು ಸರಿಪಡಿಸುವ ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಅಭ್ಯರ್ಥಿ ಬಂಗಾರು ಹನುಮಂತು, ಪಕ್ಷದ ಪ್ರಮುಖರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
‘ಸಾಗರ ಟೌನ್’ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ‘ದನ ಕಳ್ಳ’ರ ಬಂಧನ, ಕಾರ್ ಜಪ್ತಿ
ಪಂಢರಾಪುರಕ್ಕೆ ತೆರಳೋರಿಗೆ ಗುಡ್ ನ್ಯೂಸ್: ಕಾರ್ತಿಕ ಏಕಾದಶಿ ಪ್ರಯುಕ್ತ ‘ವಿಶೇಷ ರೈಲು ಸಂಚಾರ’ದ ವ್ಯವಸ್ಥೆ