ಬೆಂಗಳೂರು: ಮೈಸೂರಿನ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬದ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳು ದೇಶದಲ್ಲಿ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ – ಎನ್.ಬಿ.ಎಸ್.ಎಸ್ ನಡಿ ಸೂಕ್ತ ತನಿಖಾ ವಿಧಾನಗಳನ್ನು ಅನುಸರಿಸಿಲ್ಲ. ಲೋಕಾಯುಕ್ತ ಪೊಲೀಸರು ಹೊಸ ಕಾನೂನು ಜಾರಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ದಿ ಹೆಲ್ಪಿಂಗ್ ಸಿಟಿಜ಼ನ್ ಅಂಡ್ ಪೀಪಲ್ಸ್ ಕೋರ್ಟ್ ನ ಸಂಸ್ಥಾಪಕರಾದ ಎ. ಆಲಂ ಪಾಷ ಆರೋಪಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಆಡಳಿತ ವ್ಯವಸ್ಥೆಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ನೀಡಬೇಕಾದ ಅಡ್ವೋಕೆಟ್ ಜನರಲ್, ಕಾನೂನು ಸಲಹೆಗಾರರು ಸಹ ತನ್ನ ಕರ್ತವ್ಯ ನಿರ್ಹಣೆಯಲ್ಲಿ ವಿಫಲರಾಗಿದ್ದಾರೆ. ಕಾನೂನು ವಿಭಾಗದ ಮುಖ್ಯಸ್ಥರನ್ನು ಪ್ರಾಸಿಕ್ಯೂಷನ್ ಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಲೋಕಾಯುಕ್ತ ಎಡಿಜಿಪಿ ಅವರಿಗೆ ದೂರು ಸಲ್ಲಿಸಿದ್ದು, ಕಾನೂನು ವೈಫಲ್ಯಕ್ಕೆ ಕಾರಣದಾದವರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ದೇಶಾದ್ಯಂತ ಜಾರಿಯಾಗಿದ್ದು, ಮುಖ್ಯಮಂತ್ರಿ ಒಳಗೊಂಡಂತೆ ಪ್ರತಿಯೊಬ್ಬರಿಗೂ ಈ ಕಾನೂನು ಅನ್ವಯವಾಗುತ್ತದೆ. ಜೊತೆಗೆ ಭ್ರಷ್ಷಾಚಾರ ಪ್ರಕರಣದಲ್ಲಿ 14 ದಿನಗಳ ಒಳಗಾಗಿ ಪ್ರಾಥಮಿಕ ತನಿಖೆ ನಡೆಸಬೇಕು ಎಂಬ ನಿಯಮವಿದ್ದು, ಮೈಸೂರು ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆಯನ್ನೇ ನಡೆಸುವ ಗೊಡವೆಗೆ ಹೋಗಿಲ್ಲ. ಅವರು ಬಿಎನ್ಎನ್ಎಸ್ ಕಾನೂನನ್ನು ಸಂಪೂರ್ಣವಾಗಿ ಬದಿಗೆ ಸರಿಸಿದ್ದಾರೆ. ಲೋಕಾಯುಕ್ತ ಎಡಿಜಿಪಿ ಅವರನ್ನು ಭೇಟಿ ಮಾಡಿ ಈ ಎಲ್ಲಾ ಲೋಪಗಳ ಕುರಿತು ಲಿಖಿತವಾಗಿ ದೂರು ನೀಡಲಾಗಿದೆ. ದೇಶದ ಪ್ರತಿಯೊಬ್ಬ ಪೊಲೀಸರು ಬಿಎನ್ಎಸ್ಎಸ್ ಕಾನೂನಿನ ನಿಯಮಗಳನ್ನು ಅನುಸರಿಸಲೇಬೇಕು ಎಂದು ಪ್ರತಿಪಾದಿಸಿದ್ದಾರೆ.
ಮೈಸೂರು ಲೋಕಾಯುಕ್ತ ಪೊಲೀಸರು ಬಿಎನ್ಎಸ್ಎಸ್ ಕಾನೂನು ಉಲ್ಲಂಘಿಸಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಭವಿಷ್ಯದಲ್ಲಿ ಕಾನೂನು ವಿಧಿ ವಿಧಾನಗಳ ಅನುಸರಣೆಯು ಹಾದಿ ತಪ್ಪುವ ಆತಂಕವಿದೆ. ಮುಡಾ ವಶಪಡಿಸಿಕೊಂಡಿರುವ ಕೆಸರೆ ಗ್ರಾಮದ 413 ಸರ್ವೆ ನಂಬರ್ ಪೋಡಿಯಾಗಿಲ್ಲ. ಹಿಸ್ಸಾ ಸಂಖ್ಯೆ ಕೊಡಲಾಗಿದೆಯೇ ಎಂಬೆಲ್ಲಾ ಮಾಹಿತಿ ಕಲೆ ಹಾಕಿ ಪ್ರಾಥಮಿಕ ತನಿಖೆ ಪೂರ್ಣಗೊಳಿಸಬೇಕಾಗಿತ್ತು. ಆದರೆ ಲೋಕಾಯುಕ್ತ ಪೊಲೀಸರು ಇದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಇಷ್ಟೆಲ್ಲಾ ಲೋಪಗಳಿಗೆ ಲೋಕಾಯುಕ್ತ ಎಡಿಜಿಪಿ ಅವರೇ ಹೊಣೆಯಾಗಿದ್ದು, ತಪ್ಪಿತಸ್ಥರ ಮೇಲೆ ಆಡಳಿತ ವೈಫಲ್ಯದ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನೂತನ ಬಿಎನ್ಎಸ್ಎಸ್ ಕಾನೂನಿನ ಬಗ್ಗೆ ಕನಿಷ್ಟ ತಿಳಿವಳಿಕೆ ಇಲ್ಲದ ರಾಜ್ಯದ ಅಡ್ವೋಕೆಟ್, ಹೆಚ್ಚುವರಿ ಅಡ್ವೋಕೆಟ್ ಜನರಲ್. ಎಸ್.ಪಿ.ಪಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರನ್ನು ಪ್ರಾಸಿಕ್ಯೂಷನ್ ಗೆ ಒಳಪಡಿಸಬೇಕು. ಭವಿಷ್ಯದಲ್ಲಿ ಇಂತಹ ಸೂಕ್ಷ್ಮ ಪ್ರಕರಣಗಳು ಎದುರಾದಲ್ಲಿ ಹೇಗೆ ನಿಭಾಯಿಸಬಹುದು ಎನ್ನುವ ಆತಂಕವಿದೆ. ಸರ್ಕಾರದಿಂದ ವೇತನ, ಭತ್ಯ ಪಡೆಯುವ ಕಾನೂನು ವಿಭಾಗ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಇವರ ವೈಫಲ್ಯದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು, ಇದಕ್ಕೆ ಅನುಮತಿ ನೀಡಿದ್ದು, ನ್ಯಾಯಾಲಯ ಮುಖ್ಯಮಂತ್ರಿ ಅವರ ಅರ್ಜಿಯನ್ನು ವಜಾ ಮಾಡಿದ್ದು ಸರಿಯಾಗಿದೆ. ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟ ನಂತರ ಪೊಲೀಸರು 14 ದಿನಗಳ ಒಳಗಾಗಿ ಪ್ರಾಥಮಿಕ ತನಿಖೆ ನಡೆಸಿ, ಆ ನಂತರ ಎಫ್.ಐ.ಆರ್ ಹಾಕಬೇಕಿತ್ತು. ಎಲ್ಲದಕ್ಕೂ ಮುನ್ನ ಎಫ್.ಐ.ಆರ್ ಹಾಕಿದ್ದು ತಪ್ಪು ಎಂದು ಆಲಂ ಪಾಷ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಖಾಸಗಿಯಾಗಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್