ರಾಮನಗರ: ತಮ್ಮ ಆರೋಗ್ಯ ಹಾಗೂ ನಿಖಿಲ್ ಅವರ ಕಣ್ಣೀರಿನ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ಕಟುಕರಿಗೆ ಕಣ್ಣೀರು ಬರುವುದಿಲ್ಲ, ಹೃದಯವಿರುವ ಭಾವುಕ ಜೀವಿಗಳಿಗೆ ಮಾತ್ರ ಕಣ್ಣೀರು ಬರುತ್ತದೆ ಎಂದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ವಿರೂಪಾಕ್ಷಪುರ, ಕೊಡಂಬಹಳ್ಳಿ ಗ್ರಾಮಗಳಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು; ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ಆಂಬುಲೆನ್ಸ್ ನಲ್ಲಿ ಬಂದಿಲ್ಲ
ನನ್ನ ಆರೋಗ್ಯ ಚೆನ್ನಾಗಿದೆ. ನಾನು ಆಂಬುಲೆನ್ಸ್ ನಲ್ಲಿ ಬಂದಿಲ್ಲ, ವ್ಹೀಲ್ ಚೇರ್ ಮೇಲೆ ಬಂದಿಲ್ಲ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ. ಆರೋಗ್ಯವಾಗಿದ್ದೇನೆ. ಅದನ್ನು ತೋರಿಸಲು ಇಲ್ಲಿಗೆ ಬಂದಿದ್ದೇನೆ. ನೀವೇ ನನ್ನನ್ನು ನೋಡುತ್ತಿದ್ದೀರಿ, ಹೇಗೆ ಇದ್ದೇನೆ ಎಂದು ಗಮನಿಸುತ್ತಿದ್ದೀರಿ ಅಲ್ಲವೇ? ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಕಾಂಗ್ರೆಸ್ ನಾಯಕರು ನನ್ನ ಹೊರಗಿನವರು ಎನ್ನುತ್ತಿದ್ದಾರೆ. ನಾನು ಅವರಿಗೆ ಹೊರಗಿನವನು ಎಂದು ಈಗ ಅನ್ನಿಸುತ್ತಿದೆ. ಆದರೆ, ನಾನು ಈ ತಾಲ್ಲೂಕಿಗೆ ಶಾಶ್ವತ ನೀರಾವರಿ ಒದಗಿಸಲು ಇಗ್ಗಳೂರು ಬ್ಯಾರೇಜ್ ಕಟ್ಟಿಸಿದಾಗ ಹಾಗೆಂದು ಅನಿಸಲಿಲ್ಲವೇ? ರಾಜಕೀಯಕ್ಕಾಗಿ ಕಾಂಗ್ರೆಸ್ ನಾಯಕರು ಜನರಿಗೆ ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಮಂಡಿ ನೋವು, ನಿಂತುಕೊಂಡು ಮಾತಾಡೋಕೆ ಆಗಲ್ಲ. ನನಗೀಗ 92 ವರ್ಷ, ಎಸ್.ಎಂ.ಕೃಷ್ಣ ಮತ್ತು ನಾನು ಒಂದೇ ವಯಸ್ಸಿನವರು. ಆದರೆ ನಾವು ಈಗಲೂ ಕೆಲಸ ಮಾಡುತ್ತಿದ್ದೇವೆ. ದೇಹಕ್ಕೆ ವಯಸ್ಸಾಗುತ್ತದೆ, ಇಚ್ಛಾಶಕ್ತಿಗೆ ಅಲ್ಲ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಮುದ್ದೆ ಸೊಪ್ಪಿನ ಸಾಂಬಾರು ಹಾಕಿ ಅಡುಗೆ ಮಾಡಿ ಬಡಿಸಿದ ತಾಯಂದಿರು ಇಲ್ಲಿದ್ದೀರಿ. ನಿಮ್ಮನ್ನು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ನಿಮ್ಮ ಪಾದಕ್ಕೆ ನಾನು ನಮಸ್ಕಾರ ಮಾಡ್ತೀನಿ. ನಾನು ಈ ತಾಲೂಕಿಗೆ ಏನೇನು ಮಾಡಿದ್ದೇನೆ, ಹೇಗೆಲ್ಲಾ ಶ್ರಮಪಟ್ಟು ಇಗ್ಗಲೂರು ಅಣೆಕಟ್ಟು ಕಟ್ಟಿದ್ದೇನೆ, ಆ ಬಗ್ಗೆ ನಾನು ಚರ್ಚೆ ಮಾಡಲ್ಲ, ಆದರೆ ಇಗ್ಗಲೂರು ಅಣೆಕಟ್ಟು ನಿಮ್ಮ ಮುಂದೆ ಇದೆ ಎಂದರು ಅವರು.
ನಿಮ್ಮ ಆಶೀರ್ವಾದ ಇದ್ದರೆ ನೂರು ವರ್ಷ ಬದುಕುತ್ತೇನೆ
ನನಗೆ ನಿಮ್ಮ ಆಶೀರ್ವಾದ ಇದೆ. ನಾನು ಶತಾಯು ಆಗುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಬದುಕಿರುತ್ತೇನೆ ಎನ್ನುವ ಭರವಸೆ ಹೊಂದಿದ್ದೇನೆ. ದೇವರ, ನಿಮ್ಮೆಲ್ಲರ ಆಶೀರ್ವಾದ ಇದ್ದರೆ ನೂರು ವರ್ಷ ಬದುಕುತ್ತೇನೆ. ಆದರೆ, ಕಾಂಗ್ರೆಸ್ ನಾಯಕರಿಗೆ ನನ್ನ ಆರೋಗ್ಯದ ಬಗ್ಗೆಯೇ ಚಿಂತೆಯಾಗಿದೆ ಎಂದು ಮಾಜಿ ಪ್ರಧಾನಿಗಳು ಅತೀವ ನೋವು ವ್ಯಕ್ತಪಡಿಸಿದರು.
ನನ್ನ ಮೊಮ್ಮಗ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾನೆ. ಅವರ ತಂದೆ ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ನನ್ನ ಅರವತ್ತು ವರ್ಷದ ರಾಜಕಾರಣದಲ್ಲಿ ಇಂತಹ ಕೆಟ್ಟ ರಾಜಕಾರಣವನ್ನು ನಾನು ನೋಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು ಮಾಜಿ ಪ್ರಧಾನಿಗಳು.
ನಿಮ್ಮ ಮುಂದೆ ಎದೆ ಚಾಚಿ ಮಾತನಾಡುತ್ತಿದ್ದೇನೆ
ಇಂತಹ ಕೆಟ್ಟ ರಾಜಕಾರಣ ಮತ್ತೆ ಈ ರಾಜ್ಯದಲ್ಲಿ ಇರಬಾರದು. ನಾನು ಇದನ್ನು ಅಸೂಯೆ ದ್ವೇಷದಿಂದ ಹೇಳುತ್ತಿಲ್ಲ. ವೈಯಕ್ತಿಕವಾಗಿ ನಾನು ಯಾರ ಬಗ್ಗೆಯೂ ಮಾತಾಡಲ್ಲ ಎಂದ ಅವರು; ನಾನು 11ನೇ ತಾರೀಕಿನ ವರೆಗೂ ಬರುತ್ತೇನೆ. ಮೊಮ್ಮಗನ ಗೆಲ್ಲಿಸೋಕೆ ಬರುತ್ತಿಲ್ಲ. ನನಗೆ ಜೀವನದಲ್ಲಿ ಒಂದೇ ಒಂದು ಗುರಿ ಇದೆ. ಋಣಾನುಬಂಧವೋ ಏನೋ, ಈಗ ಯಾರ ಮನೆ ಅನ್ನ ತಿನ್ನುತ್ತೇನೆಯೋ ಗೊತ್ತಿಲ್ಲ. ಅನ್ನದ ಋಣ ಯಾರ ಮನೆಗೆ ಕರೆದುಕೊಂಡು ಹೋಗುತ್ತದೊ ಗೊತ್ತಿಲ್ಲ. ಮಾಧ್ಯಮದವರು ದೇವೇಗೌಡರು ಮಾತಾಡ್ತಾರಾ ಎಂದು ಕೇಳುತ್ತಿದ್ದರು. ದೇವೇಗೌಡ್ರು ಏನು ಇಂಟರ್ ನ್ಯಾಶನಲ್ ಅಪರಾಧಿ ಆಗಿದ್ನಾ? ಮೂರು ತಿಂಗಳು ನನ್ನ ಮನೆ ಮುಂದೆ ಇದ್ದರಲ್ಲ. ಇವತ್ತು ನಿಮ್ಮ ಮುಂದೆ ಎದೆ ಚಾಚಿ ಮಾತನಾಡುತ್ತಿದ್ದೇನೆ. ಇನ್ನೂ ನಾಲ್ಕಾರು ವರ್ಷ ನಿಮ್ಮ ಆಶೀರ್ವಾದದಿಂದ ಇರುತ್ತೇನೆ. ನನ್ನ ಕೊನೆ ಉಸಿರು ಇರೋ ತನಕ ನನ್ನ ಶರೀರ ಇರೋ ತನಕ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಆಂಬ್ಯುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದಿದ್ದ ಡಿಕೆ ಸುರೇಶ್ ಮಾತಿಗೆ ತಿರುಗೇಟು ಕೊಟ್ಟರು ದೇವೇಗೌಡರು.
ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಅನೇಕರು ನಾಯಕರು ಸಭೆಯಲ್ಲಿ ಹಾಜರಿದ್ದರು.
ಹೆಣದ ಮೇಲೆ ಹಣ ಮಾಡಿದ ಬಿಜೆಪಿ ಆಡಳಿತದಲ್ಲಿ ಬಳ್ಳಾರಿ ಜನ ಭಯದಲ್ಲಿ ಬದುಕು ಸಾಗಿಸುತ್ತಿದ್ದರು: DKS