ಬೆಂಗಳೂರು: ನಗರದ ಪಶ್ಚಿಮ ವಲಯ ಮತ್ತಿಕೆರೆ ಉಪವಿಭಾಗ ಯಶವಂತಪುರ ಆರ್.ಟಿ.ಒ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿ ಇಂದು BBMP ವಲಯ ಆಯುಕ್ತರಾದ ಅರ್ಚನಾ ರವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ 32 ಮಳಿಗೆಗಳಿಗೆ ಬೀಗ ಮುದ್ರೆ ಹಾಕಲಾಗಿರುತ್ತದೆ.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟೀಸ್ ಗಳನ್ನು ಜಾರಿ ಮಾಡಲಾಗಿದ್ದು, ಸಾಕಷ್ಟು ಸಮಯಾವಕಾಶವನ್ನು ನೀಡಿದ್ದರೂ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕಾರಣ ಬಿಬಿಎಂಪಿ ಕಾಯ್ದೆ 2020 ಹಾಗೂ ನಿಯಮಾವಳಿಗಳನ್ವಯ, ವಾಣಿಜ್ಯೇತರ ಆಸ್ತಿಗಳಿಗೆ ಬೀಗಮುದ್ರೆ ಹಾಕುವುದರ ಮೂಲಕ ಬಾಕಿ ಆಸ್ತಿತೆರಿಗೆ ವಸೂಲಿ ಮಾಡಲಾಗುತ್ತಿದೆ.
ಮತ್ತಿಕೆರೆ ಸಹಾಯಕ ಕಂದಾಯ ಅಧಿಕಾರಿ ಉಪವಿಭಾಗದಲ್ಲಿನ ಸ್ವತ್ತುಗಳಲ್ಲಿ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳಲ್ಲಿ ಅತೀ ಹೆಚ್ಚು ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದ ಸ್ವತ್ತಿಗೆ ಬೀಗಮುದ್ರೆ (Sealing) ಮಾಡಲಾಗಿರುತ್ತದೆ.
*ವಸತಿಯೇತರ ಉಪಯೋಗದ, ಪಿಐಡಿ ಸಂಖ್ಯೆ: 7-39-27 ಮತ್ತು 7-39-27/1, ಸುಬೇದಾರ್ ಛತ್ರಂ ರಸ್ತೆ, ಯಶವಂತಪುರ (ವಾರ್ಡ್ ಸಂಖ್ಯೆ 45 – ಮಲ್ಲೇಶ್ವರಂ) ರಲ್ಲಿ, ಮೆ|| ಮೊಹಮ್ಮದ್ ಷರೀಫ್ ಎಜುಕೇಷನ್ ಟ್ರಸ್ಟ್ ಸಂಸ್ಥೆಗೆ ಸೇರಿದ ಸ್ವತ್ತುಗಳನ್ನು(32 ವಸತಿಯೇತರ ಅಂಗಡಿಗಳು) ವಲಯ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಅಧಿಕಾರಿ (ಮಲ್ಲೇಶ್ವರಂ), ಸಹಾಯಕ ಕಂದಾಯ ಅಧಿಕಾರಿ (ಮತ್ತಿಕೆರೆ) ಹಾಗೂ ಕಂದಾಯ ವಿಭಾಗದ ನೌಕರರ ಹಾಗೂ ಸಾರ್ವಜನಿಕರ ಸಮಕ್ಷಮದಲ್ಲಿ ಬೀಗಮುದ್ರೆ (Sealing) ಮಾಡಲಾಗಿರುತ್ತದೆ.
*ಸದರಿ ಸ್ವತ್ತುಗಳಿಗೆ ಸ್ವಯಂ ಘೋಷಣಾ ಆಸ್ತಿತೆರಿಗೆ ಪದ್ಧತಿ ಅಡಿಯಲ್ಲಿ ಘೋಷಿಸಿಕೊಂಡಿದ್ದ ಸ್ವತ್ತಿನ ವಿವರಗಳನ್ನು ಪರಿಶೀಲಿಸಿ ವ್ಯತ್ಯಾಸ ಕಂಡುಬಂದ ಕಾರಣ 2016-17 ರಿಂದ 2023-24 ಸಾಲುಗಳಿಗೆ ಆಸ್ತಿತೆರಿಗೆ ಪರಿಷ್ಕರಿಸಿ ಜನವರಿ 2024 ರಲ್ಲಿ ನೋಟಿಸ್ ನೀಡಲಾಗಿರುತ್ತದೆ.
*ಕರ್ನಾಟಕ ಸರ್ಕಾರದಿಂದ ಪಾಲಿಕೆಯಲ್ಲಿನ ಸ್ವತ್ತುಗಳಿಗೆ ಬಾಕಿ ಆಸ್ತಿತೆರಿಗೆ ಪಾವತಿಗಾಗಿ ಒಂದು ಬಾರಿ ಪರಿಹಾರ ಯೋಜನೆಯನ್ನು(ಬಡ್ಡಿ ಹಾಗೂ ದಂಡವನ್ನು ಮನ್ನಾ ಮಾಡಿ) ಜಾರಿಗೊಳಿಸಲಾಗಿ, ಸದರಿ ಯೋಜನೆ ಅಡಿಯಲ್ಲಿ ಬಾಕಿ ಆಸ್ತಿತೆರಿಗೆ ಪಾವತಿಸಲು ಮಾರ್ಚ್ 2024 ರಂದು ತಿಳುವಳಿಕೆ ಪತ್ರ ನೀಡಲಾಗಿತ್ತು.
*ಸ್ವತ್ತಿನ ಮಾಲೀಕರು ಇಲ್ಲಿಯವರೆಗೆ 2016-17 ಮತ್ತು 2017-18 ನೇ ಸಾಲುಗಳಿಗೆ ಆಸ್ತಿತೆರಿಗೆ ಪಾವತಿಸಿ ಉಳಿದ ಸಾಲುಗಳಿಗೆ ಪರಿಷ್ಕರಿಸಿದ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುತ್ತಾರೆ (2018-19 ರಿಂದ 2023-2024 ರವರೆಗೆ ಒಟ್ಟು ರೂ. 1.51 ಕೋಟಿ ಪಾವತಿಸಬೇಕಿದೆ)
ಪಾಲಿಕೆಯ ಆರ್ಥಿಕ ಹಿತದೃಷ್ಟಿಯಿಂದ ಆಸ್ತಿತೆರಿಗೆ ಬಾಕಿ ವಸೂಲಾತಿಗಾಗಿ ಸದರಿ ಕಟ್ಟಡವನ್ನು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020ರ ಅಧಿನಿಯಮದಂತೆ ದಿನಾಂಕ: 04-11-2024ರಂದು ಅಪರಾಹ್ನ 1 ಗಂಟೆಗೆ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪೊಲೀಸ್ ಬಂದೋಬಸ್ತ್ ಸಹಾಯ ಪಡೆದು, ಸದರಿ ಕಟ್ಟಡದಲ್ಲಿನ 32 ಅಂಗಡಿಗಳ ಮುಖ್ಯ ದ್ವಾರಗಳನ್ನು ಬೀಗಮುದ್ರೆ ಮಾಡಲಾಗಿರುತ್ತದೆ.
ಈ ವೇಳೆ ಜಂಟಿ ಆಯುಕ್ತರಾದ ಸಂಗಪ್ಪ, ಉಪ ಆಯುಕ್ತರಾದ ಶ್ರೀನಿವಾಸ್, ಮಲ್ಲೇಶ್ವರಂನ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸೆನ್ಸೆಕ್ಸ್ 1,400 ಅಂಕಗಳ ಕುಸಿತ, ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟ | Share Market Updates