ಚನ್ನಪಟ್ಟಣ : “ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಎಂಟೂವರೆ ವರ್ಷಗಳ ಕಾಲ ಯಾರೂ ಅಲುಗಾಡಿಸಲು ಆಗುವುದಿಲ್ಲ. ಕುಮಾರಸ್ವಾಮಿ ಮತ್ತೊಂದು ಜನ್ಮ ಎತ್ತಿ ಬಂದರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎಲೆ ತೋಟದ ಹಳ್ಳಿ, ಅಕ್ಕೂರು ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.
“ಚುನಾವಣೆಗೆ ನಾಲ್ಕೈದು ದಿನವಿರುವಾಗ ಜನರ ಬಳಿಗೆ ಬರುವ ಕುಮಾರಸ್ವಾಮಿ ಅವರೇ ನಿಮ್ಮ ಈ ಧೋರಣೆಯನ್ನು ಇನ್ನೆಷ್ಟು ದಿನ ಮುಂದುವರಿಸಿಕೊಂಡು ಹೋಗುತ್ತೀರಿ” ಎಂದರು.
ಕುಮಾರಸ್ವಾಮಿ ಸಹವಾಸ ಮಾಡಿ ಸಾಕಾಗಿದೆ
“18 ಸೀಟು ಇಟ್ಟುಕೊಂಡು ಸರ್ಕಾರ ಮಾಡಲು ಸಾಧ್ಯವೇ? ಬಿಜೆಪಿಯವರು ದಡ್ಡರು, ಕೇವಲ ಎರಡು ಕ್ಷೇತ್ರ ಗೆದ್ದಿರುವುದಕ್ಕೆ ಕೇಂದ್ರದಲ್ಲಿ ಮಂತ್ರಿ ಮಾಡಿದ್ದಾರೆ. ಕಾಂಗ್ರೆಸ್ ನವರಾಗಿದ್ದರೆ ಅವರನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈ ಹಿಂದೆ ಅವರ ಸಹವಾಸ ಮಾಡಿ ಅನುಭವಿಸಿದ್ದು ಸಾಕಾಗಿದೆ. ಚುನಾವಣೆ ಸಮೀಪಿಸಲಿ ಆಗ ಆ ಬಗ್ಗೆ ಮಾತನಾಡುತ್ತೇನೆ” ಎಂದು ಹೇಳಿದರು.
ಚನ್ನಪಟ್ಟಣದ ಜನರ ಕಾಳಜಿ ನಾವು ಮಾಡುತ್ತೇವೆ
“ರಾಮನಗರದಿಂದ ಕುಮಾರಸ್ವಾಮಿ ಅವರು ಶಾಸಕರು, ಮುಖ್ಯಮಂತ್ರಿ, ಸಂಸದರಾಗಿದ್ದರು. ಅವರ ತಂದೆ ಅದೇ ಕ್ಷೇತ್ರದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿದ್ದರು. ಅವರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ ನಿಖಿಲ್ ಏಕೆ ಸೋಲುತ್ತಿದ್ದರು? ಇನ್ನೆಷ್ಟು ದಿನ ಈ ರಾಮನಗರ ಹಾಗೂ ಚನ್ನಪಟ್ಟಣ ಜನರಿಗೆ ಟೋಪಿ ಹಾಕಲು ಸಾಧ್ಯ ಎಂದು ಕುಮಾರಸ್ವಾಮಿ ಅವರು ಈಗ ಮಂಡ್ಯಕ್ಕೆ ಹೋಗಿದ್ದಾರೆ. ನೀವು ಮಂಡ್ಯಕ್ಕೆ ಹೋಗಿ. ನಮ್ಮ ಅಭ್ಯಂತರವಿಲ್ಲ. ಚನ್ನಪಟ್ಟಣದ ಜನರ ಕಾಳಜಿ ನಾವು ಮಾಡುತ್ತೇವೆ” ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವೇ ಲೇಸು
“ಕಮಲ ಕೆರೆಯಲ್ಲಿ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಇದನ್ನು ಯೋಗೇಶ್ವರ್ ಅವರು ಅರಿತುಕೊಂಡು ಕಾಂಗ್ರೆಸ್ ಸರ್ಕಾರದ ಜತೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಸೇರಿದರೆ ಮಾತ್ರ ಜನರಿಗೆ ಸಹಾಯ ಮಾಡಲು ಸಾಧ್ಯ ಎಂದು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಯೋಗೇಶ್ವರ್ ಎಲ್ಲಾ ಪಕ್ಷವನ್ನು ನೋಡಿದ್ದಾರೆ. ಬಿಜೆಪಿ ನೋಡಿದ್ದಾರೆ. ಜೆಡಿಎಸ್ ಜತೆಗಿನ ಮೈತ್ರಿ ನೋಡಿದ್ದಾರೆ. ಕೊನೆಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವೇ ಲೇಸು ಎಂದು ವಾಪಸ್ ಬಂದಿದ್ದಾರೆ” ಎಂದರು.
ಕುಮಾರಸ್ವಾಮಿ ದುಡ್ಡು ಬೇಡ ಎನ್ನಬೇಡಿ
“ಕೇವಲ ಯೋಗೇಶ್ವರ್ ಒಬ್ಬರೇ ಈ ಕ್ಷೇತ್ರದ ಜನರ ಸೇವೆ ಮಾಡುವುದಿಲ್ಲ. ನಾನು, ಸಿದ್ದರಾಮಯ್ಯ ಅವರಾದಿಯಾಗಿ ಎಲ್ಲಾ ಸಚಿವರು ಹಾಗೂ ಮುಖಂಡರು ನಿಮ್ಮ ಸೇವೆ ಮಾಡುತ್ತೇವೆ. ಕುಮಾರಸ್ವಾಮಿ ದುಡ್ಡು ಕೊಡುತ್ತಾರಂತೆ. ಅವರ ದುಡ್ಡನ್ನು ನೀವು ಬೇಡ ಎನ್ನಬೇಡಿ. ಅವರ ಬಳಿ ಹಣ ಪಡೆಯಿರಿ, ಮತವನ್ನು ಹಸ್ತದ ಗುರುತಿಗೆ ಹಾಕಿ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಈ ಕೈ ಗುರುತಿಗೆ ನಿಮ್ಮ ಬೆಂಬಲ ನೀಡಿ” ಎಂದರು.
ಕುಮಾರಣ್ಣನಿಗೆ ಕೂಲಿ ಕೇಳುವ ಹಕ್ಕು ಇಲ್ಲ
“ಕಳೆದ ಮೂರ್ನಾಲ್ಕು ತಿಂಗಳಲ್ಲಿ ಚನ್ನಪಟ್ಟಣಕ್ಕೆ 500 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಶಾಲೆಗಳ ಅಭಿವೃದ್ಧಿ, ಸೇತುವೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ. ಕುಮಾರಣ್ಣನಿಗೆ ಕೂಲಿ ಕೇಳುವ ಹಕ್ಕು ಇಲ್ಲ” ಎಂದು ಹೇಳಿದರು.
“ಕುಮಾರಸ್ವಾಮಿ ಅವರದು ಕೇವಲ ಖಾಲಿ ಮಾತು. ನಿಮ್ಮ ಬದುಕು, ಅಭಿವೃದ್ಧಿ ನಮ್ಮ ಜವಾಬ್ದಾರಿ. ರೈತರಿಗೆ ಏನಾದರೂ ಸಹಾಯ ಮಾಡಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಸಮಾಜಕ್ಕೆ ಸೇವೆ ಮಾಡುವವರನ್ನು ನಮ್ಮ ಜನ ಗುರುತಿಸುತ್ತಾರೆ, ಆರಾಧಿಸುತ್ತಾರೆ, ಪೂಜಿಸುತ್ತಾರೆ. ಹೀಗಾಗಿ ರಾಮನ ತಂದೆ ದಶರಥ ಮಹಾರಾಜನಿಗಿಂತ ರಾಮನ ಭಂಟ ಹನುಮಂತನಿಗೆ ಹೆಚ್ಚು ದೇವಾಲಯ ಕಟ್ಟಲಾಗಿದೆ. ಅದೇ ರೀತಿ ನಿಮ್ಮ ಸೇವೆ ಮಾಡುವವರನ್ನು ಗುರುತಿಸುತ್ತೀರಿ ಎಂದು ಇಲ್ಲಿ ಭಾಷಣ ಮಾಡುತ್ತಿದ್ದೇನೆ” ಎಂದು ಹೇಳಿದರು.
ಏನೂ ಕೆಲಸ ಮಾಡದ ಕುಮಾರಸ್ವಾಮಿ
“ಬಿಸಿಲಮ್ಮ ದೇವಾಲಯ, ಮಹದೇಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳಿಗೆ ಭೇಟಿ ನೀಡಿದೆ. ಈ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ್ದು ಯಾರು ಎಂದು ಕೇಳಿದಾಗ, ಯೋಗೇಶ್ವರ್ ಎಂದು ಹೇಳಿದರು. ನಾನು ಇಂಧನ ಸಚಿವನಾಗಿದ್ದಾಗ ಹೆಚ್ ವಿಡಿ ಯೋಜನೆಯಲ್ಲಿ 22 ಸಾವಿರ ರೈತರಿಗೆ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಿಕೊಟ್ಟೆ. ಈ ರೀತಿ ಕುಮಾರಸ್ವಾಮಿ ಅವರು ಯಾವುದಾದರೂ ಒಂದು ದೇವಾಲಯಕ್ಕೆ ಸಹಾಯ ಮಾಡಿದ್ದಾರಾ? ಸಮುದಾಯ ಭವನ ನಿರ್ಮಿಸಿದ್ದಾರಾ? ಸ್ಮಶಾನಕ್ಕೆ ಜಮೀನು ಕೊಡಿಸಿದ್ದಾರಾ? ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದಾರಾ? ಅವರು ಸಿಎಂ ಆಗಿದ್ದಾಗ ಅವರ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಿದ್ದಾರಾ? ಇಲ್ಲ. ಆದರೂ ಯಾವ ಧೈರ್ಯದ ಮೇಲೆ ಮತ ಕೇಳುತ್ತಾರೆ?” ಎಂದು ಹೇಳಿದರು.
ನಾವು ಚನ್ನಪಟ್ಟಣಕ್ಕೆ ಹೋರಾಡುತ್ತಿದ್ದೇವೆ
“ನಾವು ಈ ಜಿಲ್ಲೆಯವರು. ನಾವು ಸತ್ತರೆ ಇಲ್ಲೇ ಮಣ್ಣು ಮಾಡುತ್ತಾರೆ. ನಮ್ಮ ಪಲ್ಲಕ್ಕಿ ಹೊರುವವರು ನೀವೆ, ಚಟ್ಟ ಹೊರುವವರು ನೀವೇ. ಯೋಗೇಶ್ವರ್ ಸತ್ತರೆ ಅವರ ದೇಹವನ್ನು ಹಾಕುವುದು ಚಕ್ಕೆರೆಯಲ್ಲೇ. ಹೀಗಾಗಿ ನಾವು ಈ ಚನ್ನಪಟ್ಟಣದಲ್ಲಿ ಹೋರಾಡುತ್ತಿದ್ದೇವೆ” ಎಂದರು.
ವಕ್ಫ್ ಅಧಿಕಾರಿಗಳು ಬಂದರೆ ಜಮೀನಿಗೆ ಕಾಲಿಡಲು ಬಿಡಬೇಡಿ, ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಆರ್.ಅಶೋಕ್
ಸೆನ್ಸೆಕ್ಸ್ 1,400 ಅಂಕಗಳ ಕುಸಿತ, ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟ | Share Market Updates