ಮಂಡ್ಯ : ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಜಿಲ್ಲೆಯ ಕೈ ನಾಯಕರಿಂದ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಫೆ.02 ರಂದು ಚುನಾವಣೆ ನಿಗಧಿಯಾಗಿದೆ. ಈ ಬಾರಿ ಘಟಾನುಘಟಿಗಳು ಸ್ಪರ್ಧೆಗೆ ರಣಕಣ ಸಜ್ಜಾಗಿದ್ದು, ಚುನಾವಣೆ ಮತ್ತಷ್ಟು ರಂಗೇರುವಂತೆ ಮಾಡಿದೆ.
ಚುನಾವಣಾ ಸಂಬಂಧ ಸೋಮವಾರ ಶಾಸಕ ಕೆ.ಎಂ.ಉದಯ್ ಅವರ ಸ್ವಗ್ರಾಮದ ನಿವಾಸದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಮುಖಂಡರು ಮತ್ತು ಆಕಾಂಕ್ಷಿಗಳ ಸಭೆ ನಡೆಸಿ ಮನ್ಮುಲ್ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿದ್ದಾರೆ.
ಈ ಚುನಾವಣೆಯಲ್ಲಿ ಯಾವುದೇ ಪಕ್ಷ, ಚಿಹ್ನೆ ಹೆಸರಿನಲ್ಲಿ ಚುನಾವಣೆ ನಡೆಯದಿದ್ದರೂ ರಾಜಕೀಯ ನಂಟು ಬೆಸೆದುಕೊಂಡಿದೆ. ಎಲ್ಲವೂ ರಾಜಕೀಯ ಲೆಕ್ಕಾಚಾರದ ಮೇಲೆ ನಡೆಯಲಿದೆ. ಈಗಾಗಲೇ 6 ಮಂದಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಈಗಿನಿಂದಲೇ ಚುನಾವಣಾ ತಯಾರಿ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಮತದಾನಕ್ಕೆ ನೇಮಕಗೊಂಡಿರುವ ಡೇರಿಗಳ ಪ್ರತಿನಿಧಿಯನ್ನು ಮನವೊಲಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದ್ದಾರೆ.
ಮದ್ದೂರು ತಾಲೂಕಿನಿಂದ ಕದಲೂರು ರಾಮಕೃಷ್ಣ, ಮಾರಸಿಂಗನಹಳ್ಳಿ ಹರೀಶ್, ಮಳವಳ್ಳಿಯಿಂದ ಕೃಷ್ಣೆಗೌಡ, ನಾಗಮಂಗಲದಿಂದ ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಅಪ್ಪಾಜಿಗೌಡ, ಲಕ್ಷೀನಾರಾಯಣ, ಶ್ರೀರಂಗಪಟ್ಟಣದಿಂದ ಬೋರೇಗೌಡ ಸ್ಪರ್ಧೆ ಮಾಡಲಿದ್ದು, ಇನ್ನು ಮಂಡ್ಯ, ಪಾಂಡವಪುರ ತಾಲೂಕಿನ ಅಭ್ಯರ್ಥಿಗಳನ್ನು ನಾಲ್ಕೈದು ದಿನದಳಲ್ಲಿ ಘೋಷಣೆ ಮಾಡಲಾಗುವುದು. ಕೆ.ಆರ್. ಪೇಟೆ ತಾಲೂಕಿನ ಅಭ್ಯರ್ಥಿ ಆಯ್ಕೆಯನ್ನು ಕಾಯ್ದಿರಿಸಲಾಗಿದೆ ಎಂದರು.
ಹಾಲು ಪೂರೈಕೆ ಮಾಡುವ ರೈತರಿಗೆ ಪ್ರೋತ್ಸಾಹ ಧನ ಕಾಲಕಾಲಕ್ಕೆ ಪಾವತಿ ಮಾಡಲಾಗುತ್ತಿದೆ. ಒಂದು ತಿಂಗಳು ತಡವಾದರೂ, ಎರಡು ತಿಂಗಳ ಹಣವನ್ನು ಒಮ್ಮೆಲೇ ಪಾವತಿ ಮಾಡಲಾಗಿದೆ. ಬಾಕಿ ಹಣವನ್ನು ಉಳಿಸಿಕೊಂಡಿಲ್ಲ. 5 ರೂ. ಪ್ರೋತ್ಸಾಹ ಧನವನ್ನು ಹೆಚ್ಚಿಸಿದ್ದು, 3 ರಿಂದ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ರೈತರ ಪರವಾಗಿದೆ ಎಂದು ನುಡಿದರು.
ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಅಭಿವೃದ್ಧಿಯ ಕಡೆ ಗಮನವಿಲ್ಲ. ಪ್ರತಿದಿನ ನಮ್ಮ ವಿರುದ್ಧ ಹೇಳಿಕೆ ನೀಡೋದೇ ಅವರ ಕೆಲಸವಾಗಿದೆ ಎಂದು ಕಿಡಿಕಾರಿದರು. ಈಗಾಗಲೇ ರೈತರ ಜೀವನಾಡಿ ಮೈಶುಗರ್ ಕಾರ್ಖಾನೆ 1.80 ಲಕ್ಷ ಟನ್ ಕಬ್ಬನ್ನು ಹರೆದಿದ್ದು, 1.40 ಲಕ್ಷ ಯುನಿಟ್ ವಿದ್ಯುತ್ ತಯಾರಿಸಿದ್ದೇವೆ. ಡಿಸೆಂಬರ್ ಒಳಗೆ ಹೊಸ ಮೈಶುಗರ್ ಕಾರ್ಖಾನೆ ಮತ್ತು ಕೃಷಿ ವಿ.ವಿ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದರು.
ಇದೇ ವೇಳೆ ಶಾಸಕ ಕೆ.ಎಂ. ಉದಯ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮನ್ ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ, ಮುಖಂಡರಾದ ಚಿದಂಬರ್, ಹರೀಶ್, ತಾಪಂ ಮಾಜಿ ಅಧ್ಯಕ್ಷ ನಾಗಣ್ಣ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಜಲಮೂಲಗಳ ಅತಿಕ್ರಮಣಗಳನ್ನು ತೆರವುಗೊಳಿಸಲು ತ್ವರಿತ ಕ್ರಮ ಕೈಗೊಳ್ಳಿ: ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
ಸೆನ್ಸೆಕ್ಸ್ 1,400 ಅಂಕಗಳ ಕುಸಿತ, ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟ | Share Market Updates
BREAKING : ‘ತೀವ್ರ ಕಳವಳ’ : ಕೆನಡಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ‘ಭಾರತ’ ಖಂಡನೆ