ಹಾವೇರಿ : ಸವಣೂರಿನಲ್ಲಿ ನಮ್ಮ ಸಂಸ್ಕೃತಿ ಗಟ್ಟಿಯಾಗಿ ಉಳಿಯಲು ಭಾವಸಾರ ಕ್ಷತ್ರಿಯ ಸಮಾಜ ಕಾರಣ. ನಿಮ್ಮ ಪ್ರೀತಿ ವಿಶ್ವಾಸದ ಮುಂದೆ ನಾನು ಮಾಡಿರುವ ಅಭಿವೃದ್ಧಿ ಕಾರ್ಯ ದೊಡ್ಡದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸವಣೂರಿನಲ್ಲಿ ಇಂದು ಭಾವಸಾರ ಕ್ಷತ್ರಿಯ ಸಮಾಜದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ಮಾಡಿದರು.
ಸವಣೂರಿನಲ್ಲಿ ತಾವು ಯಾವ ಪರಿಸ್ಥಿತಿಯಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಿದ್ದೀರಾ ಎಂದು ನಮಗೆ ಅರಿವಿದೆ. ಆದರೂ, ನೀವು ಎದೆಗುಂದದೆ ಮುನ್ನಡೆಯುತ್ತಿದ್ದೀರಿ ನಮ್ಮನ್ನೂ ಮುನ್ನಡೆಸುತ್ತಿದ್ದೀರಿ, ನಾಲ್ಕು ಚುನಾವಣೆಯಿಂದಲೂ ನನ್ನನ್ನು ಗೆಲ್ಕಿಸುತ್ತ ಬಂದಿದ್ದೀರಿ, ನನ್ನ ಮೇಲೆ ಅಷ್ಟೊಂದು ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದೀರಿ, ನಾನೇನಾದರೂ ಅಭಿವೃದ್ಧಿ ಕೆಲಸ ಮಾಡಿದ್ದರೆ ನಿಮ್ಮ ಪ್ರೀತಿ ವಿಶ್ವಾಸದ ಮುಂದೆ ಅದು ದೊಡ್ಡ ಕೆಲಸವಲ್ಲ ಎಂದರು.
ಒಂದು ಬಾರಿ ಕೃಷ್ಣನ ಮೇಲೆ ಯಾರ ಪ್ರೀತಿ ದೊಡ್ಡದಿದೆ ಅಂತ ಪರೀಕ್ಷೆ ಮಾಡಲು ಸುಭದ್ರಾ ರುಕ್ಮಿಣಿ ನಡುವೆ ಸ್ಪರ್ಧೆ ಏರ್ಪಟ್ಟಿತು. ಒಂದು ತಕ್ಕಡಿಯಲ್ಲಿ ಕೃಷ್ಣನನ್ನು ಕೂಡಿಸಿ ಇನ್ನೊಂದು ತಕ್ಕಡಿಯಲ್ಲಿ ಸುಭದ್ರಾ ತನ್ನ ಮೈಮೇಲೆ ಇರುವ ಎಲ್ಲ ಆಭರಣಗಳನ್ನು ಹಾಕಿದರೂ ಕೃಷ್ಣನ ತಕ್ಕಡಿ ಮೇಲೆ ಏರಲಿಲ್ಲ. ಆದರೆ, ರುಕ್ಮಿಣಿ ಮೂರು ಪತ್ತರಿ ಎಲೆಗಳನ್ನು ಪೂಜಿಸಿ ತಕ್ಕಡಿಯ ಮೇಲೆ ಇಟ್ಟಲು ಕೃಷ್ಣನ ತಕ್ಕಡಿ ಮೇಲೆ ಏರಿತು. ಭಕ್ತಿ, ಅಭಿಮಾನದ ಪ್ರೀತಿಯ ಮುಂದೆ ಯಾವ ಪ್ರೀತಿಯೂ ದೊಡ್ಡದಲ್ಲ ಎಂದು ಹೇಳಿದರು.
ಶಿಗ್ಗಾವಿ ಸವಣೂರಿನಲ್ಲಿ ಯಾರಾದರೂ ಶಾಸಕಾಗುತ್ತಾರೆ ಎನ್ನುವಂತಿಲ್ಲ. ಈ ಕ್ಷೇತ್ರದಲ್ಲಿ ಶಾಂತಿಯುತ ವಾತಾವರಣ ಬೇಕಾ, ಅಥವಾ ಪೊಲಿಸ್ ಸ್ಟೇಷನ್ ಗೆ ಅಲೆದಾಡುವ ವಾತಾವರಣ ಬೇಕಾ ಎನ್ನುವುದನ್ನು ಈ ಚುನಾವಣೆಯಲ್ಲಿ ನಿರ್ಧರಿಸಬೇಕು ಎಂದರು.
ಸವಣೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕರ ಇತ್ತು. ದೊಡ್ಡ ಮಟ್ಟದ ಹೋರಾಟ ನಡೆಯುತ್ತಿತ್ತು. ಈಗ ಅದೆಲ್ಲ ಹೋಗಿ ಜನರಿಗೆ ಕುಡಿಯುವ ನೀರು ಲಭ್ಯವಾಗುತ್ತಿದೆ. ನಾನು 2018 ರಲ್ಲಿ ಗೆದ್ದಾಗ ಒಂದು ಗಲ್ಲಿಲಿ ಗುದ್ದಲಿ ಪೂಜೆ ಮಾಡಿದಾಗ ಒಬ್ಬ ಅಲ್ಪಸಂಖ್ಯಾತ ವಯಸ್ಸಾದ ಅಜ್ಜಿ ಮರೆಯಲ್ಲಿ ನಿಂತು ನೋಡುತ್ತಿದ್ದರು. ಏನು ನೋಡುತ್ತಿರುವೆ ಎಂದು ಅಜ್ಜಿಯನ್ನು ಕೇಳಿದೆ. ಅವರು ನಾನು ನಿಮ್ಮನ್ನು ನೋಡಲು ಬಂದಿದ್ದೇನೆ. ನಾನು ಐವತ್ತು ವರ್ಷದ ಹಿಂದೆ ಸೊಸೆಯಾಗಿ ಇಲ್ಲಿಗೆ ಬಂದಿದ್ದೇನೆ, ಬಾವಿ ನೀರು ಸೇದುವುದು ತಪ್ಪಿರಲಿಲ್ಲ. ನೀವು ಮನೆಗಳಿಗೆ ನೀರು ಬರುವಂತೆ ಮಾಡಿದ್ದೀರಿ, ನಿಮ್ಮ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ನಾನು ಯಾವುದೇ ಭೇದ ಭಾವ ಇಟ್ಟುಕೊಳ್ಳದೇ ಅಭಿವೃದ್ಧಿ ಕೆಲಸ ಮಾಡುತ್ತ ಬಂದಿದ್ದೇನೆ. ಸವಣೂರಿನಲ್ಲಿ ಅಭಿವೃದ್ಧಿ ಕಾರ್ಯ ನಿರಂತರ ಮುಂದುವರೆಯಬೇಕು. ಈ ಬಾರಿ ಪಕ್ಷ ಭರತ್ ಬೊಮ್ಮಾಯಿಯನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಅವನನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಥ ಮುಂದುವರೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಭಯೋತ್ಪಾದಕ ಸಂಘಟನೆಗಳನ್ನು ಹತ್ತಿಕ್ಕಿರಿ: ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೂಚನೆ