ಚನ್ನಪಟ್ಟಣ: ಇದು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ, ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ವ್ಯಕ್ತಿ ಹೆಸರಲ್ಲಿ ಚುನಾವಣೆ ನಡೆಯುತ್ತಿಲ್ಲ. ಇದು ಎನ್‌ಡಿಎ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನರ ಅನುಕಂಪವಿದೆ. ಅವರು ಈ ಹಿಂದೆ ಸೋತಿದ್ದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಜನರು ಗುರುತಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಲೂಟಿ ಮಾಡುತ್ತಲೇ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ದೂರಿದರು.
ಗ್ಯಾರಂಟಿಗಳಿಂದಾಗಿ ಮಣ್ಣು ಎತ್ತಿ ಹಾಕಲು ಕೂಡ ಹಣವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 16 ತಿಂಗಳಿಂದ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ವಕ್ಫ್ ಬೋರ್ಡ್ *ಮುಸ್ಲಿಮರ ಬೋರ್ಡ್* ಆಗಿ ಬದಲಾಗಿದ್ದು, ದೇವಸ್ಥಾನ, ಸ್ಮಶಾನ, ಶಾಲೆ, ರೈತರ ಭೂಮಿ ಎಂದು ನೋಡದೆ ಎಲ್ಲ ಜಮೀನುಗಳನ್ನು ಕಬಳಿಸಲಾಗುತ್ತಿದೆ. ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜಮೀನು ಬರೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು.
ನಾನು ಕೋಲಾರ, ಶ್ರೀರಂಗಪಟ್ಟಣಕ್ಕೂ ಹೋಗಿ ಪ್ರತಿಭಟನೆ ಮಾಡುತ್ತೇನೆ. ಶಾಲೆ, ದೇವಸ್ಥಾನಗಳ ಜಮೀನಿನ ಪಹಣಿಯಲ್ಲಿ ಸರ್ಕಾರದ ಜಾಗವೆಂದು ನಮೂದಿಸುವವರೆಗೆ ಹಾಗೂ ರೈತರ ಜಾಗವನ್ನು ರೈತರಿಗೆ ನೀಡುವವರೆಗೆ ಪ್ರತಿಭಟಿಸುತ್ತೇವೆ. ಮುಸ್ಲಿಮರು ನಮಗೆ ಮತ ಹಾಕಬೇಕೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಮುಸ್ಲಿಮರ ಓಲೈಕೆ ಮಾಡಲು ಕಾಂಗ್ರೆಸ್ ಈ ತಂತ್ರ ಮಾಡಿದೆ. *ದೇಶ ಉಳಿಸಿ, ರೈತರನ್ನು ಉಳಿಸಿ* ಎಂದು ಬಿಜೆಪಿ ಹೋರಾಟ ಮಾಡುತ್ತಿದೆ. ಚನ್ನಪಟ್ಟಣದ ಜನರು ಎನ್‌ಡಿಎ ಬೆಂಬಲಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಬೇಕು ಎಂದರು.