ಬೆಂಗಳೂರು : “ಪ್ರಧಾನಮಂತ್ರಿಗಳು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ಈಡೇರಿಸುವುದೇ ಕಾಂಗ್ರೆಸ್ ಗುರಿ. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳಿಂದ ಯಾವತ್ತೂ ಹಿಂದೆ ಸರಿದಿಲ್ಲ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆ ಬಗ್ಗೆ ಕೇಳಿದಾಗ, “ನಮ್ಮ ಐದೂ ಗ್ಯಾರಂಟಿಗಳು ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸುತ್ತಿವೆ. ಇದು ಮಾನ್ಯ ಪ್ರಧಾನಮಂತ್ರಿಗಳಿಗೂ ಗೊತ್ತಿದೆ. ಕರ್ನಾಟಕದ ಈ ಮಾದರಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಕಡ್ಡಾಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರವು ಈ ಯೋಜನೆಗಳನ್ನು ಅನಿವಾರ್ಯವಾಗಿ ಅಳವಡಿಸಿಕೊಳ್ಳುವ ಪರಿಸ್ಥಿತಿ ಉದ್ಭವವಾಗುತ್ತದೆ ಎಂಬುದನ್ನು ಪ್ರಧಾನಮಂತ್ರಿಗಳು ಅರ್ಥ ಮಾಡಿಕೊಳ್ಳಲಿದ್ದಾರೆ” ಎಂದು ತಿಳಿಸಿದರು.
ಚುನಾವಣೆಯಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನ:
ಚುನಾವಣೆಯಲ್ಲಿ ಎನ್ಡಿಎ ಈ ವಿಚಾರ ಬಳಸಬಹುದು ಎಂದು ಕೇಳಿದಾಗ, “ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಹತ್ತಿರದಲ್ಲಿದ್ದು, ಜನರ ಗಮನ ಬೇರೆ ವಿಷಯದ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಅಧ್ಯಕ್ಷರು. ಅವರು ಆಗಾಗ್ಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಸಲಹೆ ನೀಡುತ್ತಿರುತ್ತಾರೆ. ಈ ಐದು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ. ಈ ಯೋಜನೆಗಳ ಲೋಪದೋಷಗಳನ್ನು ಸರಿಪಡಿಸಲು ಕೆಲವರು ಸಲಹೆ ಕೊಟ್ಟಿರಬಹುದು. ಇದನ್ನು ಪರಿಗಣಿಸಬೇಕೇ, ಬೇಡವೇ ಎಂಬುದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ವಿರೋಧ ಪಕ್ಷಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅವರು ಸಾಧ್ಯವಾದರೆ ಬೆಂಬಲ ನೀಡಲಿ. ಇಲ್ಲದಿದ್ದರೆ ನೇರವಾಗಿ ವಿರೋಧ ಮಾಡಲಿ. ಕೊಂಕು ಮಾತುಗಳನ್ನು ಆಡುವುದನ್ನು ನಿಲ್ಲಿಸಲಿ” ಎಂದು ತಿರುಗೇಟು ನೀಡಿದರು.
ಅರ್ಹರು, ಅನರ್ಹರನ್ನು ಗುರುತಿಸುವುದು ಯೋಜನೆ ಪರಿಷ್ಕರಣೆಯಲ್ಲ:
ಗ್ಯಾರಂಟಿ ಯೋಜನೆ ಬಗ್ಗೆ ಡಿಸಿಎಂ ಹಾಗೂ ಖರ್ಗೆ ಅವರ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆಯೇ ಎಂದು ಕೇಳಿದಾಗ, “ಈ ಗ್ಯಾರಂಟಿ ಯೋಜನೆಯಲ್ಲಿ ಆದಾಯ ತೆರಿಗೆ, ಜಿಎಸ್ ಟಿ ಪಾವತಿದಾರರು, ಸರ್ಕಾರಿ ಅಧಿಕಾರಿಗಳು ಫಲಾನುಭವಿಗಳಾಗಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಈ ವಿಚಾರವಾಗಿ ಶಾಸಕರುಗಳಿಗೆ ದೂರು ಬರುತ್ತವೆ. ಅವಶ್ಯಕತೆ ಇರುವವರಿಗೆ ಮಾತ್ರ ಈ ಯೋಜನೆ ಸಿಗಲಿ ಎಂದು ಹೇಳುತ್ತಾರೆ. ಇಂತಹ ವಿಚಾರಗಳನ್ನು ಇಟ್ಟುಕೊಂಡು ಕೆಲವು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಐದು ಕೆ.ಜಿ ಅಕ್ಕಿ ಕೊಡಿ, ಹಣ ಬೇಡ ಎನ್ನುತ್ತಾರೆ. ಹೀಗಾಗಿ ಈ ಯೋಜನೆಯ ಅನುಕೂಲ ಪಡೆಯುತ್ತಿರುವವರನ್ನು ಗುರುತಿಸಬೇಕು. ಯೋಜನೆ ಲಾಭ ಸಿಗದ ಅರ್ಹರನ್ನು ಇನ್ನು ಪರಿಣಾಮಕಾರಿಯಾಗಿ ಗುರುತಿಸಬೇಕು. ಇದು ಯೋಜನೆಯ ಪರಿಷ್ಕರಣೆಯಲ್ಲ. ಉದಾಹರಣೆಗೆ ರಾಮನಗರ ಜಿಲ್ಲೆಯಲ್ಲಿ ಶೇ 92 ರಷ್ಟು ಜನರಿಗೆ ಈ ಯೋಜನೆ ಲಾಭ ಸಿಗುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತಾರು ಸಾವಿರ ಮನೆಗಳಿಗೆ ಯೋಜನೆ ಸಿಕ್ಕಿರಲಿಲ್ಲ. ನಾವು ನಮ್ಮ ಕಾರ್ಯಕರ್ತರು, ಮುಖಂಡರನ್ನು ಬಿಟ್ಟು, ವಂಚಿತರಿಗೆ ಯೋಜನೆ ಸಿಗುವಂತೆ ಮಾಡಿದ್ದೆವು” ಎಂದು ತಿಳಿಸಿದರು.
ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು:
ಜನಗಣತಿ ನಂತರ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂಬ ಪ್ರಿಯಾಂಕ ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಬಹಳ ಹಿಂದೆಯೇ ಈ ವಿಚಾರದ ಬಗ್ಗೆ ಹೇಳಿದ್ದೆ. ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಮೋಸ ಒಂದು ಭಾಗವಾದರೆ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವಾಗ ದಕ್ಷಿಣ ಭಾರತದ ರಾಜ್ಯಗಳಿಗೆ ಮತ್ತಷ್ಟು ಅನ್ಯಾಯವಾಗಲಿದೆ. ನಮ್ಮ ಹಕ್ಕು ಪ್ರತಿಪಾದನೆ ಕಷ್ಟವಾಗುತ್ತದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದೆ. ಉತ್ತರ ಪ್ರದೇಶದಲ್ಲಿ ಕ್ಷೇತ್ರಗಳ ಸಂಖ್ಯೆ ದುಪ್ಪಟ್ಟು ಆಗಲಿದ್ದು,ದಕ್ಷಿಣ ಭಾರತದ ಕ್ಷೇತ್ರಗಳ ಸಂಖ್ಯೆ ಕುಸಿಯಲಿದೆ. ಹೀಗಾಗಿ ಬಹಳ ಜವಾಬ್ದಾರಿಯಿಂದ ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಧ್ವನಿ ಎತ್ತಬೇಕು” ಎಂದರು.
ಯಾವ ರೀತಿ ಹೋರಾಡಬೇಕು ಎಂದು ಕೇಳಿದಾಗ, “ಇದು ಕೇವಲ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯಷ್ಟೇ ಅಲ್ಲ. ಬಿಜೆಪಿ, ಎನ್ ಡಿಎ ಮೈತ್ರಿಕೂಟ, ಬೇರೆ ಪಕ್ಷಗಳು ಹಾಗೂ ಪ್ರತಿಯೊಬ್ಬ ಜನ ಸಾಮಾನ್ಯನ ಜವಾಬ್ದಾರಿಯೂ ಇದೆ” ಎಂದು ತಿಳಿಸಿದರು.
ಪ್ರಧಾನಿಗಳು ಸತ್ಯಾಸತ್ಯತೆ ಅರಿಯಬೇಕು:
ಪ್ರಧಾನಮಂತ್ರಿಯಾದವರು ಪುಡಾರಿಯಂತೆ ನಡೆದುಕೊಳ್ಳಬಾರದು ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರಧಾನಮಂತ್ರಿಗಳಿಗೆ ಅವರದೇ ಆದ ಘನತೆ ಗೌರವವಿದೆ. ಅವರು ಹೇಳಿಕೆ ನೀಡುವ ಮುನ್ನ ಪರಿಶೀಲನೆ ಮಾಡಬೇಕು. ಸತ್ಯಾಸತ್ಯತೆ ಪರಿಶೀಲಿಸದೆ ರಾಜಕೀಯ ಉದ್ದೇಶದಿಂದ ಆತುರದ ಹೇಳಿಕೆ ನೀಡಬಾರದು” ಎಂದು ತಿಳಿಸಿದರು.
ತೆರಿಗೆ ಪಾಲು ಸರಿಯಾಗಿ ಸಿಕ್ಕರೆ ಕರ್ನಾಟಕ ನಂ.1 ಆಗಲಿದೆ:
ಆರ್ಥಿಕ ಹೊರೆಯಿದೆ ಎಂದು ನಿಮ್ಮವರೆ ಹೇಳಿದ್ದಾರೆ ಎಂದು ಕೇಳಿದಾಗ, “ಕರ್ನಾಟಕ ಪ್ರಗತಿಪರ ರಾಜ್ಯ. ನಮ್ಮ ರಾಜ್ಯದಲ್ಲಿ ಸಾಕಷ್ಟು ಆದಾಯವಿದೆ. ನಾವು ಗ್ಯಾರಂಟಿ ಹಾಗೂ ಅಭಿವೃದ್ಧಿ ನಿಲ್ಲಿಸುವುದಿಲ್ಲ. ನಮಗೆ ಸಿಗಬೇಕಾದ ತೆರಿಗೆ ಪಾಲು ನಮಗೆ ಸಿಕ್ಕರೆ, ದೇಶದಲ್ಲೇ ನಮ್ಮ ರಾಜ್ಯ ನಂಬರ್ ಒನ್ ಸ್ಥಾನಕ್ಕೆ ಏರಲಿದೆ” ಎಂದು ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆ ಹೇಗೆ ನಡೆಯುತ್ತಿದೆ ಎಂದು ಕೇಳಿದಾಗ, “ಕಾಂಗ್ರೆಸ್ ಪಕ್ಷ ಖಂಡಿತವಾಗಿ ಗೆಲ್ಲಲಿದೆ” ಎಂದು ತಿಳಿಸಿದರು.
ನೀವು ಹೇಳಿದಂತೆ ಎದುರಾಳಿ ಪಕ್ಷದವರು ಕಣ್ಣೀರು ಹಾಕುತ್ತಿದ್ದಾರೆ ಎಂದು ಕೇಳಿದಾಗ, “ಇದಷ್ಟೇ ಅಲ್ಲ, ಸೋಮವಾರದಿಂದ ಇನ್ನೂ ಮುಂದುವರಿಯಲಿದೆ” ಎಂದರು.
ಅನುಕಂಪಕ್ಕೆ ಸುರಿಯುವ ಕಣ್ಣೀರು ಸ್ವಾರ್ಥಕ್ಕಾಗಿ:
ಕಾಂಗ್ರೆಸ್ ನವರಿಗೆ ಮನುಷ್ಯತ್ವವಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಕಣ್ಣೀರಿನಲ್ಲಿ ಅನೇಕ ವಿಧಗಳಿವೆ. ಪದೇ ಪದೇ ಬರುವ ಕಣ್ಣೀರು, ನಾಟಕೀಯ ಕಣ್ಣೀರು, ಉದ್ವೇಗದ ಕಣ್ಣೀರು. ಕುಮಾರಸ್ವಾಮಿ ಹಾಕುವ ಕಣ್ಣೀರು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಇರುತ್ತದೆ. ಅವರಿಗೆ ಎಲ್ಲಾ ಸಂದರ್ಭದಲ್ಲೂ ಕಣ್ಣೀರು ಬರುವುದಿಲ್ಲ. ಜನನಾಯಕರು ಜನರ ಕಣ್ಣೀರು ಒರೆಸಬೇಕು. ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವುದು, ಕೇವಲ ಸ್ವಾರ್ಥಕ್ಕೆ ಎಂದು ಎಲ್ಲರಿಗೂ ಗೊತ್ತಿದೆ” ಎಂದು ತಿಳಿಸಿದರು.
ಗೀತಾ ಶಿವರಾಂ ಸೇರಿದಂತೆ ಕೆಲವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುತ್ತಿದ್ದಾರೆ ಎಂದು ಕೇಳಿದಾಗ, “ಕಾಂಗ್ರೆಸ್ ಪಕ್ಷದಿಂದ ಯಾರೂ ಹೋಗುತ್ತಿಲ್ಲ. ಗೀತಾ ಶಿವರಾಂ ಅವರ ಬಗ್ಗೆ ನಿಮಗೆ ಗೊತ್ತಿಲ್ಲವೇ” ಎಂದರು.
ಕಾಂಗ್ರೆಸ್ ಕಟ್ಟಿದ ಅಣೆಕಟ್ಟಿಗೆ ತನ್ನ ಹೆಸರು ಹಾಕಿಕೊಳ್ಳುತ್ತಿದ್ದಾರೆ:
ಅಣೆಕಟ್ಟು ಕಟ್ಟಿದ್ದು ದೇವೇಗೌಡರು ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದು ಯೋಗೇಶ್ವರ್ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಇಕ್ಕಲೂರು ಅಣೆಕಟ್ಟು ಕಟ್ಟಲು ಆರಂಭಿಸಿದ್ದು, ಮಾನ್ಯ ವೀರೇಂದ್ರ ಪಾಟೀಲ್ ಅವರು. ಅದನ್ನು ಪ್ರಾರಂಭ ಮಾಡಿದ್ದು ಗುಂಡೂರಾವ್ ಅವರ ಕಾಲದಲ್ಲಿ. ಇವರು ಅದನ್ನು ನನ್ನದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರ ಕಾಲದಲ್ಲಿ ಅನುದಾನದ ಪರಿಷ್ಕರಣೆಯಾಗಿದೆ. ಅಷ್ಟಕ್ಕೇ ಯೋಜನೆ ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದರು.
BREAKING: ಇಂದು ಬೆಂಗಳೂರಲ್ಲಿ ಪಟಾಕಿ ಸಿಡಿದು 9 ಮಂದಿಗೆ ಗಾಯ: ಮಿಂಟೋ ಆಸ್ಪತ್ರೆಗೆ ದಾಖಲು
GOOD NEWS: ನಾಳೆಯಿಂದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಏಕಮುಖ ವಿಶೇಷ ರೈಲು ಸಂಚಾರ