ಬೆಂಗಳೂರು: ನಗರದ ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಸರ್ಕಾರದ ವತಿಯಿಂದ ಒಂದು ಬಾರಿ ಪರಿಹಾರ(OTS) ಯೋಜನೆಯನ್ನು ಬಿಬಿಎಂಪಿಯಲ್ಲಿ ದಿನಾಂಕ:30-11-2024 ರವರೆಗೆ ವಿಸ್ತರಿಸಲಾಗಿದೆ. ಬಿಬಿಎಂಪಿ ಐತಿಹಾಸಿಕ ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ.
ಆದರೆ ಆಸ್ತಿ ತೆರಿಗೆ ಬಾಕಿ ಇರುವ ನಾಗರೀಕರು ಇದರ ಲಾಭವನ್ನು ಸರಿಯಾಗಿ ಪಡೆಯುತ್ತಿಲ್ಲ. 250 ಕೋಟಿ ರೂ.ಗಿಂತ ಹೆಚ್ಚು ಬಾಕಿ ಇರುವ 1,6000ಕ್ಕೂ ಹೆಚ್ಚು ಪರಿಷ್ಕರಣೆ ಪ್ರಕರಣಗಳು ಮತ್ತು 400 ಕೋಟಿ ರೂ.ಗಿಂತ ಹೆಚ್ಚು ಬಾಕಿ ಇರುವ ಸುಮಾರು 2.4 ಲಕ್ಷ ಸುಸ್ತಿದಾರರ ಪ್ರಕರಣಗಳು ಪಾವತಿಸುವುದು ಬಾಕಿಯಿರುತ್ತದೆ.ಆದ್ದರಿಂದ OTS ಯೋಜನೆಯಡಿ ತಕ್ಷಣವೇ ಬಾಕಿ ಆಸ್ತಿ ತೆರಿಗೆ ಪಾವತಿಸುವ ಸಲುವಾಗಿ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಯೋಜಿಸಿದೆ ಮತ್ತು ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ಆಸ್ತಿ ತೆರಿಗೆಯನ್ನು ಸಂಪೂರ್ಣ ಬಡ್ಡಿ ಮನ್ನಾ ಹಾಗೂ ಸಂಪೂರ್ಣ ಬಡ್ಡಿ ರಹಿತವಾಗಿ ಪ್ರತಿ ವರ್ಷಕ್ಕೆ ಕೇವಲ 100 ರೂ. ಪಾವತಿಸಿ ಆಸ್ತಿ ತೆರಿಗೆ ಕಟ್ಟಬಹುದಾಗಿದೆ. ನಿಮ್ಮ ಆಸ್ತಿ ತೆರಿಗೆಯು ಡಿಸೆಂಬರ್ 1ರಿಂದ ದುಪ್ಪಟ್ಟಿಗಿಂತ ಹೆಚ್ಚಾಗಲಿದೆ. https://bbmptax.karnataka.gov.in ನಲ್ಲಿ ಆಸ್ತಿ ತೆರಿಗೆ ಪಾವತಿಸಬಹುದು.
ಪ್ರತಿಯೊಬ್ಬರೂ ಬಾಕಿ ಆಸ್ತಿ ತೆರಿಗೆಯನ್ನು 31ನೇ ನವೆಂಬರ್ ಒಳಗಾಗಿ ಪಾವತಿಸಿ, ಇಲ್ಲವಾದಲ್ಲಿ 1ನೇ ಡಿಸೆಂಬರ್ 2024 ರಿಂದ ನೀವು ಪಾವತಿಸುವ ಬಾಕಿ ಆಸ್ತಿ ತೆರಿಗೆಯು ದ್ವಿಗುಣಕ್ಕಿಂತ ಹೆಚ್ಚಾಗುತ್ತದೆ. ಆಸ್ತಿ ತೆರಿಗೆ ಬಾಕಿಯನ್ನು ತಕ್ಷಣವೇ ಪಾವತಿಸದಿದ್ದರೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ಪಾಲಿಕೆಯ BBMPtax.karnataka.gov.in ಗೆ ಹೋಗಿ ನಿಮ್ಮ ಬಾಕಿ ಆಸ್ತಿ ತೆರಿಗೆಯನ್ನು ಶೀಘ್ರವಾಗಿ ಪಾವತಿ ಮಾಡಿ. ನಿಮಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಹಾಗೂ ನಿಮ್ಮ ಸ್ವತ್ತಿನ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಲು ಒಟಿಎಸ್ ಯೋಜನೆಯ ಪ್ರಯೋಜನವನ್ನು ಪಡೆಯಲು ಇದು ಕೊನೆಯ ಅವಕಾಶ. ಆದ್ದರಿಂದ, ಎಲ್ಲರೂ OTS ನ ಲಾಭವನ್ನು ಪಡೆದುಕೊಂಡು ತಕ್ಷಣವೇ ಪಾವತಿಸಲು ಕೋರಿದೆ.