ಶಿವಮೊಗ್ಗ: ವ್ಯಕ್ತಿತ್ವನ್ನು ರೂಪಿಸುವಲ್ಲಿ ಪುಸ್ತಕಗಳು ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ಹಿರಿಯ ಪತ್ರಕರ್ತ, ಚಿಂತಕ, ಬರಹಗಾರ ಎನ್. ರವಿಕುಮಾರ್ ಟೆಲೆಕ್ಸ್ ಹೇಳಿದರು.
ಇಂದು ನಗರದ ಪ್ರಜ್ಞಾ ಬುಕ್ ಗ್ಯಾಲರಿಯ ವತಿಯಿಂದ ಆಯೋಜಿಸಿದ್ದ ಪುಸ್ತಕ ಸುಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನುಭವ ಲೋಕದಿಂದ ಗಳಿಸಿದ ಅರಿವು ಓದಿನಿಂದ ವಿಸ್ತಾರಗೊಳ್ಳುತ್ತದೆ. ಸಮಾಜವನ್ನು ಮಾನವೀಯಗೊಳಿಸುವಲ್ಲಿ ಪುಸ್ತಕಗಳ ಪಾತ್ರ ದೊಡ್ಡದ್ದಾಗಿದ್ದು, ಇಂದಿನ ಡಿಜಿಟಲ್ ಯುಗದಲ್ಲೂ ಜನರು ಓದುಗ ಸಂಸ್ಕೃತಿಗೆ ಮರುಳುತ್ತಿರುವುದು ಆಶಾದಾಯಕ ಸಂಗತಿಯಾಗಿದೆ ಎಂದರು.
ಯಾವುದೇ ಪುಸ್ತಕಗಳು ನಮ್ಮ ಬೌದ್ಧಿಕ ಆಯುಧಗಳೇ ಆಗಿರುತ್ತವೆ. ಜರ್ಮನ್ ನ ಹಿಟ್ಲರ್ ಮೊದಲು ಪುಸ್ತಕಗಳನ್ನು, ಗ್ರಂಥಾಲಯಗಳನ್ನು ಸುಡುವ ಮೂಲಕ ಜನರನ್ನು ಅರಿವಿನಿಂದ ದೂರವಿಟ್ಟು ತನ್ನ ಸರ್ವಾಧಿಕಾರವನ್ನು ಜಾರಿಗೊಳಿಸಲು ಮುಂದಾಗಿದ್ದನು. ಸಂವಿಧಾನವನ್ನು ಓದದೆ ಇರುವವರು ಸಂವಿಧಾನವನ್ನು ತಿರಸ್ಕರಿಸುವ ನಡವಳಿಕೆಗಳನ್ನುತೋರುತ್ತಿದ್ದಾರೆ. ಆದರೆ ಸಂವಿಧಾನವನ್ನು ಓದುವುದರಿಂದ ಭಾರತ ಅರಿವಾಗಲಿದೆ. ಇದು ಓದಿನ ಮಹತ್ವವನ್ನು ತಿಳಿಸುತ್ತದೆ ಎಂದು ವಿಶ್ಲೇಷಿಸಿದರು.
ಪುಸ್ತಕಗಳು ಹಿಮ್ಮುಖ ಮತ್ತು ಮುನ್ನಡೆಯ ಎರಡೂ ಬಗೆಯ ದರ್ಶನವನ್ನು ಕೊಡಬಲ್ಲವು. ಪುಸ್ತಕಗಳನ್ನು ಓದುವುದರಿಂದ ನಮ್ಮ ವರ್ತಮಾನ ಮತ್ತು ಭವಿಷ್ಯದ ಬದುಕಿಗೆ ಸೂಕ್ತ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ.. ವ್ಯಕ್ತಿತ್ವದ ಪರಿಪೂರ್ಣತೆಗೆ ಪುಸ್ತಕಗಳು ದಾರಿದೀಪವಾಗಿರುತ್ತವೆ ಎಂದು ಎನ್ .ರವಿಕುಮಾರ್ ಟೆಲೆಕ್ಸ್ ತಿಳಿಸಿದರು.
ಪ್ರಜ್ಞಾಬುಕ್ ಗ್ಯಾಲರಿ ಕೇವಲ ವ್ಯಾಪಾರ ದೃಷ್ಟಿಯ ಆಚೆಗೂ ಪುಸ್ತಕಗಳ ಮಹತ್ವ, ಓದುಗರ ಚಿಂತನೆಗಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಬೌದ್ಧಿಕ ವಲಯಕ್ಕೆ ದೊಡ್ಡ ಕೊಡುಗೆ ಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಸುವ್ವಿ ಪ್ರಕಾಶನದ ಬಿ.ಎನ್ ಸುನೀಲ್‌ಕುಮಾರ್ ಅವರಿಗೆ ಪ್ರಜ್ಞಾ ಪುರಸ್ಕಾರ ನೀಡಿ ನೀಡಿ ಗೌರವಿಸಲಾಯಿತು. ಅಲ್ಲದೇ ಪ್ರಜ್ಞಾ ಬುಕ್ ಗ್ಯಾಲರಿಯ ನೂತನ ಯುಟ್ಯೂಬ್ ಜಾಲವನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಪತ್ರಕರ್ತ ಆರುಂಡಿ ಶ್ರೀನಿವಾಸ್ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಜ್ಞಾ ಬುಕ್ ಗ್ಯಾಲರಿ ಮುಖ್ಯಸ್ಥರಾದ ಕೃಷ್ಣಮೂರ್ತಿ, ಲೇಖಕಿ ಅಂಜುಂ, ರಂಗಕರ್ಮಿ ಸತೀಶ್ ಸಾಸ್ವೆಹಳ್ಳಿ, ಸೌಮ್ಯ, ಶಂಕರ್ ಉಪಸ್ಥಿತರಿದ್ದರು.
ಸಂಡೂರು ವಿಧಾನಸಭೆ ಉಪಚುನಾವಣೆ: ಸ್ಪರ್ಧೆಯಲ್ಲಿನ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ