ಬೆಂಗಳೂರು: ಕಾಂಗ್ರೆಸ್ ಸರಕಾರ ಕೊಟ್ಟ 5 ಗ್ಯಾರಂಟಿಗಳೂ ನಾಪತ್ತೆ ಆಗುತ್ತಿವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಕಾಂಗ್ರೆಸ್ ಸರಕಾರದ ಕಥೆ ಹೇಗಾಗಿದೆ ಎಂದರೆ ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾಗಿದೆ. ದಯವಿಟ್ಟು ಎತ್ತು ಯಾರು, ಕೋಣ ಯಾರೆಂದು ಕೇಳದಿರಿ. ಅದನ್ನು ನೀವೇ ಅರ್ಥ ಮಾಡಿಕೊಳ್ಳಿ ಎಂದು ನುಡಿದರು.
ಜನರಿಗೆ ಮೋಸ ಮಾಡಿ, ವಂಚನೆ ಮಾಡಿ 5 ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರು ನಿಜವಾಗಿಯೂ 50 ಗ್ಯಾರಂಟಿ ಕೊಟ್ಟವರು. 5 ಗ್ಯಾರಂಟಿಗಳಲ್ಲಿ ಯಾವುದೂ ಸರಿಯಾಗಿ ಜನರನ್ನು ತಲುಪುತ್ತಿಲ್ಲ. ಗೃಹಲಕ್ಷ್ಮಿ 3 ತಿಂಗಳಿನಿಂದ ಬಂದಿಲ್ಲ. ಬೆಳಗಾವಿಯ ಲಕ್ಷ್ಮಕ್ಕ ಹೇಳುತ್ತಿದ್ದರೂ ಹಣ ಬರುತ್ತಿಲ್ಲ. ಅನ್ನಭಾಗ್ಯದ ಭಾಗ್ಯವೂ ಇಲ್ಲ. ಸರ್ವರ್ ಡೌನ್, ಇವತ್ತು- ನಾಳೆ ಅನ್ನುತ್ತಾರೆ. ಯುವನಿಧಿ ಯಾರಿಗೆ ಬಂತೆಂದು ಒಬ್ಬರೂ ಹೇಳಿಲ್ಲ. ಈ ಪರಿಸ್ಥಿತಿಯಲ್ಲಿ ಶಕ್ತಿ ಯೋಜನೆ ವಾಪಸ್ ಪಡೆಯುವ ಕುರಿತಂತೆ ಡಿಸಿಎಂ ಮಾತನಾಡಿದ್ದಾರೆ ಎಂದು ಗಮನ ಸೆಳೆದರು.
ವಿರೋಧಗಳು ಪ್ರಾರಂಭ ಆದಾಗ ಒಂದೇ ದಿನಕ್ಕೆ ಯೂ ಟರ್ನ್ ಪಡೆದರು. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದರು. ಮಹಾರಾಷ್ಟ್ರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿ ಘೋಷಿಸಿದ ಕಾರಣ ಹಾಗೂ ಮತಬ್ಯಾಂಕ್ ಕಿತ್ತು ಹೋಗುವ ಭಯದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯಿಂದ ಬೆಂಗಳೂರಿಗೆ ಎದ್ದುಬಿದ್ದು ಓಡಿ ಬಂದರು. ಏರಿಗೆ ಹೋಗುತ್ತಿದ್ದ ಎತ್ತು ಮತ್ತು ನೀರಿಗೆಳೆಯುತ್ತಿದ್ದ ಕೋಣನನ್ನು ಕುಳಿತುಕೊಳ್ಳಿಸಿ ಮಾತನಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆ ಆಗುವವರೆಗೆ ಬಾಯಿ ಮುಚ್ಚಿಕೊಂಡಿರಲು ಹೇಳಿದ್ದಾರೆ ಎಂದು ವಿಶ್ಲೇಷಿಸಿದರು.
ಯಾವ ಗ್ಯಾರಂಟಿಗಳೂ ಮಹಾರಾಷ್ಟ್ರ ಚುನಾವಣೆ ಬಳಿಕ ಇರುವುದಿಲ್ಲ ಎಂಬುದೂ ಗ್ಯಾರಂಟಿ ಆಗಿದೆ. ಎಐಸಿಸಿ ಅಧ್ಯಕ್ಷರು, ನಿಮ್ಮ ಬಜೆಟ್ ಗಮನಿಸಿ ಗ್ಯಾರಂಟಿ ಕೊಡಬೇಕಿತ್ತು. ಈಗ ಗುಂಡಿಗಳಿಗೆ ಮಣ್ಣು ಮುಚ್ಚಲೂ ದುಡ್ಡಿಲ್ಲ ಎಂದು ನೇರವಾಗಿ ಒಪ್ಪಿಕೊಂಡಿದ್ದು, ಈ ಕಾಂಗ್ರೆಸ್ ಸರಕಾರದಲ್ಲಿ ದುಡ್ಡಿಲ್ಲ; ಖಜಾನೆ ಖಾಲಿ ಎಂದು ಒಪ್ಪಿಕೊಂಡ ಎಐಸಿಸಿ ಅಧ್ಯಕ್ಷರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ತಾತ್ಕಾಲಿಕವಾಗಿ ಸ್ಟಾಪ್ ಗ್ಯಾಪ್ ಅರೇಂಜ್‍ಮೆಂಟಿನಡಿ ನೇಮಿಸಿದ್ದಾಗಿ ಹೇಳಿದ್ದೆ. ಖರ್ಗೆಯವರಿಗೆ, ಗಾಂಧಿ ಕುಟುಂಬದ- ಕಾಂಗ್ರೆಸ್ ಪಕ್ಷದ ವಾಚ್‍ಮನ್ ಆಗಬೇಡಿ; ನೇರವಾಗಿ ಅಧಿಕಾರ ಚಲಾಯಿಸಿ ಎಂದಿದ್ದೆ. ಆದರೆ, ಅವರು ಅಸಹಾಯಕತೆಯನ್ನು ಬೆಂಗಳೂರಿಗೆ ಬಂದಾಗ ತೋಡಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷರ ಪರಿಸ್ಥಿತಿಯನ್ನು ನಾವೀಗ ಅರ್ಥ ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ದಲಿತರನ್ನು ತಂದು ಕೂರಿಸಿದ್ದಾಗಿ ಹೇಳಿದ್ದರು. ಆದರೆ, ಒಬ್ಬ ದಲಿತ ಎಂಬ ಕಾರಣಕ್ಕೆ ಖರ್ಗೆಯವರಿಗೆ ಎಷ್ಟು ಅಪಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನ ದಲಿತ ವಿರೋಧಿ ನೀತಿಯನ್ನು ದಲಿತ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ವಾಚ್‍ಮನ್ ಕೆಲಸ ಮಾಡಿ ದಲಿತ ಸಮುದಾಯಕ್ಕೆ ಅಪಮಾನ ಆಗುವಂತೆ ನಡೆದುಕೊಳ್ಳಬೇಡಿ ಎಂದು ವಿನಂತಿಸಿದರು.
ಭೂಮಿ ಒತ್ತುವರಿಗೆ ನೋಟಿಸ್ ಕೊಟ್ಟಿದೆ, ಯಾರನ್ನೂ ಒಕ್ಕಲೆಬ್ಬಿಸಲ್ಲ, ಯಾರಿಗೂ ಅನ್ಯಾಯ ಮಾಡಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
BIG NEWS : ಭಾರತದ ಮೊದಲ ಅನಲಾಗ್ ಬಾಹ್ಯಾಕಾಶ ಮಿಷನ್ ಆರಂಭಿಸಿದ `ಇಸ್ರೋ’ | ISRO