ರಾಮನಗರ: “ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಆ ಪಕ್ಷದ ಮುಖಂಡರು, ಕಾರ್ಯಕರ್ತರು ಗುಂಪು ಗುಂಪಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಚನ್ನಪಟ್ಟಣದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪಕ್ಷಕ್ಕೆ ಸೇರಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
“ಕುಮಾರಸ್ವಾಮಿ ತನ್ನ ಸ್ಥಾನವನ್ನೇ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಬಿಜೆಪಿ ನಾಯಕರೇ ಕುಮಾರಸ್ವಾಮಿ ಅವರಿಗೆ ಉತ್ತರ ನೀಡುತ್ತಾರೆ. ಅವರ ಪಕ್ಷ ಗಟ್ಟಿಯಾಗಿ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ಸಮಯ ಬಂದಾಗ ಉತ್ತರ ನೀಡುತ್ತೇನೆ. ಬಿಜೆಪಿಯಲ್ಲಿ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದೂ ಗೊತ್ತಿದೆ.
ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಗುಂಪು ಗುಂಪಾಗಿ ಆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಎಲ್ಲೋ ಹಳ್ಳಿಗಳಲ್ಲಿ ಭಿನ್ನಾಭಿಪ್ರಾಯದಿಂದ ಒಂದಿಬ್ಬರು ಮಾತ್ರ ನಮ್ಮ ಪಕ್ಷ ಬಿಟ್ಟಿರಬಹುದು.
ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನರಿಗೆ ಒಳ್ಳೆಯದಾಗಲು ಸಾಧ್ಯ ಎಂದು ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ” ಎಂದು ತಿಳಿಸಿದರು.
ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ:
ಈ ಸರ್ಕಾರ ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಮಾತಿಗೆ ಉತ್ತರ ನೀಡುವುದಿಲ್ಲ, ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ” ಎಂದು ತಿಳಿಸಿದರು.
ಮೂರು ತಿಂಗಳ ಹಿಂದೆಯೇ ಕೆ.ಜೆ ಜಾರ್ಜ್ ಅವರು ಯೋಗೇಶ್ವರ್ ಅವರನ್ನು ಡೀಲ್ ಮಾಡಿದ್ದರು ಎಂಬ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅದೆಲ್ಲವೂ ಸುಳ್ಳು. ಯಾವ ಡೀಲು ಇಲ್ಲ. ಇದಕ್ಕೆಲ್ಲ ಯೋಗೇಶ್ವರ್ ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.
ನಾವು ಬದುಕಿನ ಮೇಲೆ ಮತ ಕೇಳುತ್ತೇವೆ:
ಚನ್ನಪಟ್ಟಣದಲ್ಲಿ ಭಾವನಾತ್ಮಕವಾಗಿ ಮತ ಸೆಳೆಯಲಾಗುತ್ತಿದೆ ಎಂದು ಕೇಳಿದಾಗ, “ಭಾವನೆ ಮೇಲೆ ಮತ ಕೇಳುವುದಲ್ಲ. ಬದುಕಿನ ಮೇಲೆ ಮತ ಕೇಳಬೇಕು. ಅವರು ಭಾವನೆ ಮೇಲೆ ಮತ ಕೇಳಿದರೆ, ನಾವು ಬದುಕಿನ ಮೇಲೆ ಮತ ಕೇಳುತ್ತೇವೆ. ಜನರ ಬದುಕು, ಅವರ ಅಭಿವೃದ್ಧಿ ನಮಗೆ ಮುಖ್ಯ. ಕೆರೆಗೆ ನೀರು ತುಂಬಿಸುವುದು, ರಸ್ತೆ, ಮನೆಗಳು, ನಿವೇಶನ ನೀಡುವುದು ಮುಖ್ಯ” ಎಂದು ತಿಳಿಸಿದರು.
ಕನ್ನಡ ಬಾವುಟ ಹಾರಿಸಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, “ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಕನ್ನಡ ಪರ ಸಂಘಟನೆಗಳು ತಮ್ಮ ಕಚೇರಿಯಲ್ಲಿ ಕನ್ನಡ ಧ್ವಜ ಹಾರಿಸಲಿ. ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಭಾಗವಹಿಸುವಂತಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಯವರೂ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರ ಹಗರಣ ಮುಚ್ಚಿಹಾಕಲು ವಕ್ಫ್ ವಿಚಾರ ಮುಂದೆ ಬಿಟ್ಟಿದೆ ಎಂಬ ವಿಚಾರವಾಗಿ ಕೇಳಿದಾಗ, “ವಕ್ಫ್ ಮೂಲಕ ಮೊದಲು ನೋಟೀಸ್ ಕೊಟ್ಟಿದ್ದು ಬಿಜೆಪಿ. ಸಮುದಾಯಗಳ ನಡುವೆ ಕಲಹ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ” ಎಂದು ತಿಳಿಸಿದರು.