ಚನ್ನಪಟ್ಟಣ : “ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ ಚನ್ನಪಟ್ಟಣಕ್ಕೆ ಉಪಯೋಗವಾಗುತ್ತದೆ ಎಂದು ಜನರು ನಂಬಿಕೆ ಇಟ್ಟಿದ್ದರು. ಆದರೆ ಅವರಿಂದ ನಯಾ ಪೈಸೆ ಉಪಯೋಗವಾಗಲಿಲ್ಲ” ಎಂದು ಮಾಜಿ ಸಂಸದ ಡಿಕೆ ಸುರೇಶ್ ಅವರು ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದ ಕೋಡಂಬಳ್ಳಿ ಹಾಗೂ ಕೊಂಡಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪ್ರಚಾರ ನಡೆಸಿದ ಡಿ.ಕೆ. ಸುರೇಶ್ ಅವರು, “ತಾಲೂಕಿನ ರೈತರು ಯುವಕರು ಮಹಿಳೆಯರು ಕುಮಾರಸ್ವಾಮಿ ಅವರಿಗೆ ಮತ ನೀಡಿದ್ದರು. ಅವರು ನಂಬಿಕೆ ಉಳಿಸಿಕೊಳ್ಳಲಿಲ್ಲ. ಕುಮಾರಸ್ವಾಮಿಯವರು ನಿಮ್ಮ ಕಷ್ಟ ಕೇಳಲು ಬರಲಿಲ್ಲ. ಕಳೆದ ವರ್ಷ ಕೆರೆ ತುಂಬಿಸಲಿಲ್ಲ” ಎಂದರು.
“ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ ಯೋಗೇಶ್ವರ್ ಅವರನ್ನು ಹೊತ್ತುಕೊಂಡು ಕ್ಷೇತ್ರದಲ್ಲಿ 150 ಕ್ಕೂ ಹೆಚ್ಚು ಮೆರವಣಿಗೆ ಮಾಡಿದ್ದೀರಿ. ಬೆಳ್ಳಿ ಗದೆ, ಕತ್ತಿ ಸೇರಿದಂತೆ ಅವರ ಶಿಲೆಯನ್ನೂ ಮಾಡಿಸಿದ್ದೀರಿ. ಇಂತಹ ನೀರು ಕೊಟ್ಟ ವ್ಯಕ್ತಿಗೆ ಕಳೆದ ಎರಡು ಚುನಾವಣೆಯಲ್ಲಿ ಮತ ಹಾಕದೆ ಜನರು ನೀರು ಬಿಟ್ಟಿದ್ದಾರೆ. ಬಾಯಿ ಮಾತಿನಲ್ಲಿ ಹೊಗಳಿ, ಮತ ಹಾಕದೇ ಕೈ ಕೊಟ್ಟಿದ್ದಾರೆ” ಎಂದರು.
“ಯೋಗೇಶ್ವರ್ ಅವರು ನೀರು ಕೊಟ್ಟರು. ನಾವು ವಿದ್ಯುತ್ ನೀಡಿದೆವು ಆದರೆ ನೀವು ನಮಗೆ ಶಕ್ತಿಯನ್ನು ಕೊಡಲಿಲ್ಲ. ನೀರು ಕೊಟ್ಟ ಯೋಗೇಶ್ವರ್ ಅವರಿಗೆ ಮತ್ತೆ ಅವಕಾಶ ನೀಡಬೇಕು. ಮತ ನೀಡಬೇಕು” ಎಂದು ಮನವಿ ಮಾಡಿದರು.
ಕೆಲವರು ನೆಂಟರಂತೆ ಬರುತ್ತಾರೆ ಹೋಗುತ್ತಾರೆ
“ನಿಮ್ಮ ಊರಿನ ಯೋಗೇಶ್ವರ್ ಅವರಿಗೆ ಮತ ನೀಡಿ ಗೆಲ್ಲಿಸುವ ಅವಕಾಶ ಸಿಕ್ಕಿದೆ. ಇದೇ ತಾಲೂಕಿನಲ್ಲಿ ಹುಟ್ಟಿದ್ದಾರೆ, ಬೆಳೆದಿದ್ದಾರೆ ಚುನಾವಣೆಯಲ್ಲಿ ಸೋತಿದ್ದಾರೆ. ಬೇರೆಯವರು ನೆಂಟರಂತೆ ಬರುತ್ತಾರೆ ಅನುಕೂಲ ಮಾಡಿಕೊಂಡು ಹೋಗುತ್ತಾರೆ” ಎಂದರು.
“ಕ್ಷೇತ್ರದಲ್ಲಿ ಕೆಲಸ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈಯನ್ನು ಬಲಪಡಿಸಲು ನವೆಂಬರ್ 13ರಂದು ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡುತ್ತೇನೆ” ಎಂದರು.
ಕನ್ನಡಿಗರ ರಕ್ಷಣೆ ಮಾಡಬೇಕು
“ಕನ್ನಡಿಗರಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ನಾವು ದನಿ ಎತ್ತಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕು. ಕನ್ನಡಿಗರು ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕು. ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ನೀರು ನಮ್ಮ ಹಕ್ಕು ಈ ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಹೋರಾಟ ಮಾಡುತ್ತಾ ಇದ್ದೇವೆ. ಇದಕ್ಕೆ ನೀವು ಬಲ ತುಂಬಬೇಕು” ಎಂದು ಹೇಳಿದರು.
ಪ್ರಚಾರ ಮೆರವಣಿಗೆಯಲ್ಲಿ ಸಚಿವರಾದ ಚೆಲುವರಾಯ ಸ್ವಾಮಿ, ಎಂಎಲ್ಸಿ ಪುಟ್ಟಣ್ಣ, ಮಾಜಿ ಶಾಸಕ ಅಶ್ವಥ್ ಮತ್ತಿತರರು ಇದ್ದರು.