ಭುವನೇಶ್ವರ : ಕಚೇರಿಯಲ್ಲಿ ಕೆಲಸ ಮಾಡುವಾಗ ಹೆರಿಗೆ ನೋವಿನ ನಡುವೆಯೂ ರಜೆ ನೀಡದ ಕಾರಣ ಮಹಿಳೆಯೊಬ್ಬರು ತನ್ನ ಮಗುವನ್ನು ಹೊಟ್ಟೆಯಲ್ಲೇ ಕಳೆದುಕೊಂಡಿದ್ದಾರೆ. ಈ ವಿಚಾರವಾಗಿ ಸ್ವತಃ ಮಹಿಳೆಯೇ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
26 ವರ್ಷದ ಮಹಿಳೆ ಒಡಿಶಾ ಸರ್ಕಾರದ ಉದ್ಯೋಗಿಯಾಗಿದ್ದು, ಕೇಂದ್ರಪಾರ ಜಿಲ್ಲೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆಗೆ ಹೆರಿಗೆ ನೋವು ಶುರುವಾಯಿತು. ಆದರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ರಜೆ ನೀಡದ ಕಾರಣ ಆಕೆ ತನ್ನ ಮಗುವನ್ನು ಹೊಟ್ಟೆಯಲ್ಲೇ ಕಳೆದುಕೊಂಡಿದ್ದಾಳೆ. ಅಕ್ಟೋಬರ್ 25 ರಂದು ನಡೆದ ಈ ಘಟನೆ ಮಂಗಳವಾರ ಮಹಿಳೆ ವರ್ಷಾ ಪ್ರಿಯದರ್ಶಿನಿ ಮಾಧ್ಯಮಗಳಿಗೆ ಹೇಳಿದಾಗ ಬೆಳಕಿಗೆ ಬಂದಿದೆ.
ಜಿಲ್ಲೆಯ ದೇರಾಬಿಶ್ ಬ್ಲಾಕ್‌ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿ ವರ್ಷಾ ಏಳು ತಿಂಗಳ ಗರ್ಭಿಣಿ. ಅಕ್ಟೋಬರ್ 25 ರಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಿಡಿಪಿಒ ಸ್ನೇಹಲತಾ ಸಾಹು ಹಾಗೂ ಇತರ ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷಿಸಿದ್ದಾರೆ. ಸ್ನೇಹಲತಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವರ್ಷಾ ಆರೋಪಿಸಿದ್ದಾರೆ.
ವರ್ಷಾಳ ಕುಟುಂಬದವರು ಆಕೆಯನ್ನು ಕೇಂದ್ರಪಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಆಕೆಯ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸಿಡಿಪಿಒ ಅವರ ಮಾನಸಿಕ ಕಿರುಕುಳ ಮತ್ತು ಸಂಪೂರ್ಣ ನಿರ್ಲಕ್ಷ್ಯದಿಂದ ತನ್ನ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ವರ್ಷಾ ಅವರು ಸ್ನೇಹಲತಾ ಸಾಹು ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಕೇಂದ್ರಪಾರ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) ನೀಲು ಮಹಾಪಾತ್ರ ಅವರು, “ದೂರು ಸ್ವೀಕರಿಸಿದ ನಂತರ, ಜಿಲ್ಲಾಡಳಿತವು ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ (ಡಿಎಸ್‌ಡಬ್ಲ್ಯೂಒ) ಅವರಿಗೆ ಸೂಚಿಸಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ” ಎಂದು ಟ್ವಿಟರ್‌ನಲ್ಲಿ ಕಳವಳ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಪರವತಿ ಪರಿದಾ, ಈ ಕುರಿತು ಕೇಂದ್ರಪಾರ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದು, ಕೂಡಲೇ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. .