ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ-ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಐರಾವತ ಕ್ಲಬ್ ಕ್ಲಾಸ್ 2.0 ಬಸ್ಸುಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ಕೆ ಎಸ್ ಆರ್ ಟಿಸಿ ಬಸ್ಸುಗಳು ಪ್ರಯಾಣಿಕರಿಗೆ ಹೈಟೆಕ್ ಸ್ಪರ್ಷದ ಅನುಭವ ನೀಡಲಿದೆ. ಹಾಗಾದ್ರೇ ಐರಾವತ ಕ್ಲಬ್ ಕ್ಲಾಸ್ 2.0 ಬಸ್ಸಿನ ವಿಶೇಷತೆ ಏನು.? ಲೋಕಾರ್ಪಣೆಗೊಂಡಂತ 20 ಬಸ್ಸುಗಳು ಎಲ್ಲಿಂದ ಎಲ್ಲಿಗೆ ಸಂಚರಿಸಲಿದ್ದಾವೆ ಎನ್ನುವ ಸಂಪೂರ್ಣ ಮಾಹಿತಿ ಮುಂದೆ ಓದಿ.
ಇಂದು ಐರಾವತ ಕ್ಲಬ್ ಕ್ಲಾಸ್ 2.0 ಲೋಕಾರ್ಪಣೆಗೊಳಿಸಿದ ನಂತ್ರ ಸಿಎಂ ಸಿದ್ಧರಾಮಯ್ಯ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಪಘಾತಕ್ಕೆ ಒಳಪಟ್ಟು ಮೃತರಾದ 2 ಸಿಬ್ಬಂದಿಗಳ ಅವಲಂಭಿತರಿಗೆ ಸಾರಿಗೆ ಸುರಕ್ಷಾ ಪರಿಹಾರ ವಿಮಾ ಯೋಜನಡಿ ತಲಾ ರೂ.1 ಕೋಟಿ ಪರಿಹಾರ ಚೆಕ್‌ನ್ನು ಹಾಗೂ ಅಪಘಾತ ಹೊರತುಪಡಿಸಿ ಖಾಯಿಲೆ ಇತ್ಯಾದಿ ಕಾರಣಗಳಿಂದ ಮೃತರಾದ 5 ಸಿಬ್ಬಂದಿಗಳ ಅವಲಂಭಿತರಿಗೆ ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ ರೂ.10 ಲಕ್ಷಗಳ ಪರಿಹಾರ ಚೆಕ್‌ನ್ನು ವಿತರಿಸಿದರು. ಇಂದು, ಖಾಸಗಿ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಇಬ್ಬರು (ಶ್ರೀ ನಾಗರಾಜು ಎಂ.ಎನ್. ನಿರ್ವಾಹಕ, ರಾಮನಗರ ವಿಭಾಗ ಹಾಗೂ ಶಿವಣ್ಣ, ಚಾಲಕ ಕಂ ನಿರ್ವಾಹಕ, ಮೈಸೂರು ನಗರ ವಿಭಾಗ ರವರ) ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ. ಈವರೆಗೂ 22 ಸಿಬ್ಬಂದಿಗಳ ಅವಲಂಭಿತರಿಗೆ ರೂ.22 ಕೋಟಿ ಪರಿಹಾರ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಕರಾರಸಾ ನಿಗಮವು ಈ ರೀತಿಯ ವಿನೂತನ ಪರಿಹಾರ ಯೋಜನೆಯನ್ನು ಜಾರಿ ಮಾಡಿರುವ ಭಾರತದಲ್ಲಿಯೇ ಪ್ರಥಮ ಸಾರಿಗೆ ಸಂಸ್ಥೆಯಾಗಿದ್ದು, ಮಾನ್ಯ ಸಾರಿಗೆ ಸಚಿವರ ಮಾರ್ಗದರ್ಶನದಲ್ಲಿ ಅತ್ಯತ್ತಮ ಕಾರ್ಯಗಳನ್ನು ನಿರ್ವಹಿಸಿ ಸರ್ಕಾರಕ್ಕೆ ಗೌರವವನ್ನು ತಂದಿದ್ದು, ಇದಕ್ಕೆ ನಿಗಮದ ಎಲ್ಲಾ ಸಿಬ್ಬಂದಿಗಳು ಅಭಿನಂದನೆಗೆ ಅರ್ಹರೆಂದು ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷರು, ನಿಗಮವು ಹಲವಾರು ಕಾರ್ಮಿಕ ಪರ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಿ, ಪ್ರಖ್ಯಾತವಾಗಿದೆ. ಮುಂಬರುವ ದಿನಗಳಲ್ಲಿಯೂ ಸಹ ನಿಗಮದ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಹಾಗೂ ರಾಜ್ಯದ ಜನತೆಗೆ ಉತ್ತಮ ಸೇವೆಯನ್ನು ಒದಗಿಸಲು ವಿನೂತನ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8849 ವಾಹನಗಳ ಮೂಲಕ 8068 ಅನುಸೂಚಿಗಳಿಂದ 28.50 ಲಕ್ಷ ಕಿ.ಮೀ ಕ್ರಮಿಸಿ 34.92 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ.
ಕರ್ನಾಟಕ ರಾಜ್ಯವು ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿಯೇ 24,282 ರಾಜ್ಯ ಸಾರಿಗೆ ಬಸ್ಸುಗಳನ್ನು ಹೊಂದಿದ್ದು, ಪ್ರಥಮ ಸ್ಥಾನದಲ್ಲಿದೆ. ಇದರ ಅರ್ಥ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಸಶಕ್ತಗೊಳಿಸಿದೆ.
ನಮ್ಮ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ ಕಳೆದ ಒಂದು ವರ್ಷದಲ್ಲಿ 3417 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ.
ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ನಮ್ಮ ಸರ್ಕಾರವು ಅನುಮತಿ ನೀಡಿದ್ದು, ಈ ಪೈಕಿ 1883, ಚಾಲಕ ಕಂ ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. 6500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು.
ಶಕ್ತಿ ಯೋಜನೆ ನಿಗಮಗಳ ವಾಹನಗಳಲ್ಲಿ 317.18 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಅವರ ಪ್ರಯಾಣದ ಶೂನ್ಯ ಟಿಕೇಟ್ ಮೌಲ್ಯ ರೂ. 7656.33 ಕೋಟಿಗಳಾಗಿರುತ್ತದೆ. ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಶೇ.58.10 ಆಗಿರುತ್ತದೆ. ಶಕ್ತಿ ಯೋಜನೆ ಜಾರಿಗೆ ಮುನ್ನ ನಾಲ್ಕು ನಿಗಮಗಳ ವಾಹನಗಳಲ್ಲಿ ಸರಾಸರಿ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರಸ್ತುತ ಈ ಸಂಖ್ಯೆಯು 108.09 ಲಕ್ಷಗಳಿಗೆ ಹೆಚ್ಚಳವಾಗಿರುತ್ತದೆ.
ಶಕ್ತಿ ಯೋಜನೆ ಜಾರಿಗೆ ಬರುವ ಮುನ್ನ ಪ್ರತಿದಿನ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿದ್ದ 158909 ಟ್ರಿಪ್ಗಳ ಪ್ರಮಾಣವು 172333 ಗೆ ಹೆಚ್ಚಳ, ಪ್ರತಿ ದಿನ 13424 ಹೆಚ್ಚುವರಿ ಟ್ರಿಪ್ಪುಗಳ ಕಾರ್ಯಾಚರಣೆಯಾಗಿರುತ್ತದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 1000 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಆದೇಶ ನೀಡಲಾಗಿದೆ.
- ಸಾರಿಗೆ ಸುರಕ್ಷಾ ರೂ. 1 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿರುತ್ತದೆ.
ಇದುವರೆವಿಗೂ 20 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ಇಂದು, ಖಾಸಗಿ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಇಬ್ಬರು ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ. ಈವರೆಗೂ 22 ಸಿಬ್ಬಂದಿಗಳ ಅವಲಂಭಿತರಿಗೆ ರೂ.22 ಕೋಟಿ ಪರಿಹಾರ ನೀಡಲಾಗಿದೆ.
- ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ:
ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಅವರಿಗೆ ನೆರವಾಗಲು ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡಲಾಗುತ್ತಿದ್ದ ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ದಿನಾಂಕ: 01.11.2023 ರಿಂದ ರೂ.10 ಲಕ್ಷಗಳಿಗೆ ಹೆಚ್ಚಿಸಿ ಮರಣ ಪ್ರಕರಣಗಳಿಗೆ ಅನ್ವಯವಾಗುವಂತೆ ಜಾರಿಗೆ ತರಲಾಗಿರುತ್ತದೆ.
ಈ ಪರಿಷ್ಕೃತ ಪರಿಹಾರ ಯೋಜನೆ ಅಡಿ ಇದುವರೆವಿಗೂ 76 ಪ್ರಕರಣಗಳಲ್ಲಿ ರೂ.10 ಲಕ್ಷಗಳ ಪರಿಹಾರ ಧನವನ್ನು ನೀಡಿದ್ದು, ನಂತರದಲ್ಲಿ ಕಾಯಿಲೆಗಳಿಂದ ಮರಣ ಹೊಂದಿದ 5 ಸಿಬ್ಬಂದಿಗಳ (ಬಿ. ನಾರಾಯಣಪ್ಪ, ನಿರ್ವಾಹಕ, ಕೋಲಾರ, ಸೋಮಶೇಖರಪ್ಪ, ಚಾಲಕ ಕಂ ನಿರ್ವಾಹಕ, ಶಿವಮೊಗ್ಗ, ರಾಜಶೇಖರ ಎನ್.ಎ, ಕುಶಲಕರ್ಮಿ, ಕೋಲಾರ, ಎಂ. ಸೀನಪ್ಪ, ಚಾಲಕ, ಕೋಲಾರ ಮತ್ತು ಜಿಲಾನಿ, ಚಾಲಕ, ಮಂಗಳೂರು ವಿಭಾಗ) ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10.00 ಲಕ್ಷಗಳ ಪರಿಹಾರದ ಚೆಕ್ಅನ್ನು ಇಂದು ವಿತರಿಸಲಾಯಿತ್ತು. ಈವರೆಗೂ 81 ಸಿಬ್ಬಂದಿಗಳ ಅವಲಂಭಿತರಿಗೆ ರೂ. 8.10 ಕೋಟಿಗಳ ಪರಿಹಾರ ನೀಡಲಾಗಿದೆ.
- ಬಸ್ಸುಗಳ ಪುನಶ್ಚೇತನ ಕಾರ್ಯ:
ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಚರಿಸದ ಕಾರಣ ನಿಗಮವು ಸಂಪೂರ್ಣವಾಗಿ ವಾಹನಗಳ ಕಾರ್ಯಾಚರಣೆ ಮಾಡಲಾಗದೆ ಆರ್ಥಿಕ ಸಂಕಷ್ಟವನ್ನು ಅನುಭವಿಸಿತ್ತು. ಕೋವಿಡ್ ನಂತರ ಪ್ರಯಾಣಿಕರ ಬೇಡಿಕೆ ಹೆಚ್ಚಾದಾಗ ನೂತನ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾಗ 9 ರಿಂದ 10 ಲಕ್ಷ ಕಿ.ಮೀ ಕ್ರಮಿಸಿ ಕವಚ ದುರಸ್ಥಿಯಿಂದ ಕೂಡಿದ ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲು ಯೋಜನೆಯನ್ನು ರೂಪಿಸಿ, ನಿಗಮದ 2 ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಈ ಕಾರ್ಯವನ್ನು ಆರಂಭಿಸಲಾಯಿತು. ಈ ರೀತಿಯ ಪುನಶ್ಚೇತನಗೊಂಡ ವಾಹನಗಳು ಬಹಳ ಆಕರ್ಷಕವಾಗಿದ್ದು, ನೂತನ ವಾಹನಗಳಂತೆ ಪ್ರಯಾಣಿಕರಿಂದ ಸ್ವಾಗತಿಸಲ್ಪಟ್ಟ ಕಾರಣ, ಈ ಕಾರ್ಯವನ್ನು ವಿಭಾಗಗಳಲ್ಲಿಯೂ ಸಹ ಆರಂಭಿಸಲಾಯಿತು.
ಇಂದಿನವರೆಗೆ ಎರಡು ಪ್ರಾದೇಶಿಕ ಕಾರ್ಯಗಾರಗಳಲ್ಲಿ 806 ಹಾಗೂ 16 ವಿಭಾಗಗಳಲ್ಲಿ 344 ವಾಹನಗಳು ಸೇರಿದಂತೆ ಒಟ್ಟಾರೆ 1150 ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲಾಗಿದೆ.
- ವೋಲ್ವೋ ವಾಹನಗಳ ಪುನಶ್ಚೇತನ
ಇದೇ ರೀತಿ ಇತ್ತೀಚೆಗೆ 10 ರಿಂದ 11 ವರ್ಷಗಳ ಕಾರ್ಯಾಚರಣೆ ಮಾಡಿದ ಪ್ರತಿಷ್ಟಿತ ಹವಾನಿಯಂತ್ರಿತ ವಾಹನಗಳನ್ನೂ ಸಹ ಪುನಶ್ಚೇತನಗೊಳಿಸುತ್ತಿದ್ದು, ಇದುವರೆವಿಗೂ 6 ಪ್ರತಿಷ್ಠಿತ ಹವಾನಿಯಂತ್ರಿತ ವಾಹನಗಳನ್ನು ಪುನಶ್ಚೇತನಗೊಳಸಲಾಗಿದೆ.
ಈ ರೀತಿಯ ಪುನಶ್ಚೇತನಗೊಳಿಸಿದ ವಾಹನಗಳನ್ನು ಇನ್ನೂ 3 ರಿಂದ 4 ಲಕ್ಷ ಕಿ.ಮಿ.ಗಳವರೆಗೆ ಅಥವಾ ವಾಹನಗಳ ಜೀವಿತಾವಧಿಯವರೆಗೆ ಕಾರ್ಯಾಚರಣೆ ಮಾಡಬಹುದಾಗಿದ್ದು, ನಿಗಮವು ನೂತನ ಆಧುನಿಕ ವಿಧಾನಗಳನ್ನು ಹಾಗೂ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ.
- ನಿಗಮವು 2024ನೇ ವರ್ಷವನ್ನು ಪ್ರಯಾಣಿಕ ಸ್ನೇಹಿ ವರ್ಷವೆಂದು ಘೋಷಣೆ ಮಾಡಿದೆ.
ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅಪಘಾತದಿಂದ ಮೃತಪಟ್ಟ ಸಂದರ್ಭದಲ್ಲಿ ಪ್ರಯಾಣಿಕರ ವಾರಸುದಾರರಿಗೆ ಅಪಘಾತ ಪರಿಹಾರ ನಿಧಿಯಿಂದ ಈ ಹಿಂದೆ ರೂ.3.00 ಲಕ್ಷಗಳ ಪರಿಹಾರವನ್ನು ನೀಡಲಾಗುತ್ತಿದ್ದು, ಸದರಿ ಮೊತ್ತವನ್ನು ದಿನಾಂಕ 01-01-2024 ರಿಂದ ಜಾರಿಗೆ ಬರುವಂತೆ ಈ ಪರಿಹಾರ ಮೊತ್ತವನ್ನು ರೂ. 3 ಲಕ್ಷದಿಂದ ರೂ. 10 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಹೆಚ್. ಆರ್. ಎಂ. ಎಸ್ ಅನುಷ್ಠಾನ
ನಿಗಮವು ತಂತ್ರಜ್ಞಾನ ಆಳವಡಿಕೆಯಲ್ಲಿ ಸದಾ ಕಾರ್ಯ ಪ್ರವೃತ್ತವಾಗಿದ್ದು, ಆ ನಿಟ್ಟಿನಲ್ಲಿ ಘಟಕಗಳ ಗಣಕೀಕರಣ, ಆನ್‌ಲೈನ್ ರಜಾ ನಿರ್ವಹಣಾ ವ್ಯವಸ್ಥೆ, ಸಿಬ್ಬಂದಿಗಳ ಸೇವಾ ಪುಸ್ತಕ ಹಾಗೂ ವೈಯಕ್ತಿಕ ವಿವರಗಳನ್ನು ಗಣಕೀಕರಣಗೊಳಿಸಿದೆ.
ಪ್ರಸ್ತುತ ಕೇಂದ್ರ ಕಛೇರಿ ಹಾಗೂ ವಿಭಾಗಗಳ ಸಿಬ್ಬಂದಿಗಳ ಹಾಜರಾತಿಯನ್ನು ಹೆಚ್.ಆರ್.ಎಂ.ಎಸ್ ಯೋಜನೆ ಅಡಿ ಪಡೆಯಲಾಗುತ್ತಿದೆ. ಕೇಂದ್ರ ಕಛೇರಿ ಮಟ್ಟದಲ್ಲಿ ಮಾಹಿತಿಯನ್ನು ತ್ವರಿತವಾಗಿ ಹಾಗೂ ಸುಲಭವಾಗಿ ನಿರ್ವಹಣೆ ಮಾಡಲು ಹಾಜರಾತಿ, ರಜೆ ನಿರ್ವಹಣೆ, ಪೇರೋಲ್, ಸಿಬ್ಬಂದಿ ಆಗಮನ/ನಿರ್ಗಮನ, ವರ್ಗಾವಣೆ ಮಾಹಿತಿ, ಶಿಸ್ತು, ಮುಂಬಡ್ತಿ, ತರಬೇತಿ ಹಾಗೂ ಎಂ.ಐ.ಎಸ್‌ಗಳನ್ನು ಒಳಗೊಂಡಂತೆ ಗಣಕೀಕರಣಗೊಳಿಸಿ, ನೂತನ ಸಾರಿಗೆ ಮಿತ್ರ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಿಂದ ಸಿಬ್ಬಂದಿಗಳಿಗೆ ಹೆಚ್ಚಿನ ಅನುಕೂಲತೆಗಳನ್ನು ತ್ವರಿತವಾಗಿ ಒದಗಿಸಲು ಸಹಾಯವಾಗುತ್ತದೆ.
- ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ವ್ಯವಸ್ಥೆ
ಪ್ರಯಾಣಿಕರಿಗೆ ಗರಿಷ್ಠ ಪ್ರಯಾಣ ಸೌಕರ್ಯ, ಅನುಕೂಲತೆ, ಸುರಕ್ಷತೆ ಮತ್ತು ಪರಿಚಿತತೆಯನ್ನು ಖಚಿತಪಡಿಸುವುದು ಕ.ರಾ.ರ.ಸಾ. ನಿಗಮದ ಮಾರ್ಗದರ್ಶಿ ತತ್ವವಾಗಿದೆ. ಲಭ್ಯವಿರುವ ತಂತ್ರಜ್ಞಾನದ ಪ್ರಕಾರ ಬಸ್ಗಳಲ್ಲಿ ಟಿಕೇಟ್ ವಿತರಿಸುವಾಗ ಡಿಜಿಟಲ್ ಪಾವತಿಗೆ ಅವಕಾಶ ಮಾಡಿಕೊಡಬೇಕೆಂಬ ಸಾರ್ವಜನಿಕ ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ನಿಗಮವು ಪ್ರಯಾಣಿಕರಿಗೆ ಟಿಕೆಟ್ ಮತ್ತು ಪಾಸ್ಗಳ ವಿತರಣೆಯ ಸಮಯದಲ್ಲಿ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರ ಸ್ನೇಹಿ ಟಿಕೆಟಿಂಗ್ ಯಂತ್ರಗಳು ಮತ್ತು ಟಿಕೆಟಿಂಗ್ ತಂತ್ರಾಂಶವನ್ನು ಜಾರಿಗೆ ತಂದಿದೆ
ಇದು 4G/Wi-Fi ಮೂಲಕ ಕೇಂದ್ರೀಕೃತ ಸರ್ವರ್ಗೆ ನೈಜ ಸಮಯದ ಟಿಕೆಟ್ ಮಾಹಿತಿಯನ್ನು ವರ್ಗಾಯಿಸಲು Android ಆಧಾರಿತ ಸಾಧನವಾಗಿದೆ. ಸಾಧನವು QR ಕೋಡ್ ಮತ್ತು UPI/Debit/Credit card ಮತ್ತು ಇತರ ಡಿಜಿಟಲ್ ವಹಿವಾಟುಗಳನ್ನು ಬೆಂಬಲಿಸುವ RFID ರೀಡರ್ಗಳೊಂದಿಗೆ ಅಂತರ್ಗತವಾಗಿರುತ್ತದೆ. ಈ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ Dynamic QR Code ವ್ಯವಸ್ಥೆಯನ್ನು ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಪರಿಚಯಿಸಲಾಗಿದೆ.
- ನಗದು ರಹಿತ ವೈದ್ಯಕೀಯ ಚಿಕಿತ್ಸೆ:
ನಿಗಮವು ಕಾರ್ಮಿಕರ ಶ್ರೇಯೋಭಿವೃಧ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಕಾರ್ಮಿಕರ ಆರೋಗ್ಯ ದೃಷ್ಠಿಯನ್ನು ಗಮನದಲ್ಲಿರಿಸಿ ಸಮಸ್ತ ಸಿಬ್ಬಂದಿ ವರ್ಗದವರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ರಾಜ್ಯದ ಪ್ರಮುಖ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದು ಇದರಿಂದ ಸುಮಾರು 33000 ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಸದಸ್ಯರು ವೈದ್ಯಕೀಯ ಸೇವೆಯನ್ನು ಪಡೆಯಬಹುದಾಗಿದೆ.
- ಸಾರಿಗೆ ವಿದ್ಯಾ ಚೇತನʼ:
ಕ.ರಾ.ರ.ಸಾ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾ ಸಹಾಯ ನಿಧಿ ಅಡಿಯಲ್ಲಿ ʼಸಾರಿಗೆ ವಿದ್ಯಾ ಚೇತನʼ ಯೋಜನೆ ಜಾರಿಗೊಳಿಸಿ ಶಿಕ್ಷಣಕ್ಕೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. 2023-24 ಹಾಗೂ 2024-25ನೇ ಸಾಲಿನಲ್ಲಿ 4689 ಫಲಾನುಭವಿಗಳಿಗೆ ರೂ. 2.34 ಕೋಟಿ ಸ್ಕಾಲರ್‌ಶಿಪ್ ನೀಡಲಾಗಿದ್ದು, ಸದರಿ ಕಾರ್ಯವು ಪ್ರಗತಿಯಲ್ಲಿದೆ.
- ನಿಗಮಕ್ಕೆ ಲಭಿಸಿರುವ ಪ್ರಶಸ್ತಿಗಳು:
ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 117 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುತ್ತದೆ.
ಕೆಎಸ್‌ಆರ್‌ಟಿಸಿ ಗೆ 20 ನೂತನ ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ವಾಹನಗಳು ಎಲ್ಲೆಲ್ಲಿ ಸಂಚಾರ.?
ಶಿವಮೊಗ್ಗ-ಬೆಂಗಳೂರು-1
ಬೆಂಗಳೂರು-ತಿರುಪತಿ-1
ದಾವಣಗೆರೆ-ಬೆಂಗಳೂರು-1
ಬೆಂಗಳೂರು-ಬಳ್ಳಾರಿ -1
ಕುಂದಾಪುರ-ಬೆಂಗಳೂರು-2
ಮಂಗಳೂರು-ಬೆಂಗಳೂರು-1
ಬೆಂಗಳೂರು-ತಿರುಪತಿ-1
ಮೈಸೂರು-ಬೆಂಗಳೂರು-1
ಬೆಂಗಳೂರು-ಹೈದರಾಬಾದ್-1
ಮೈಸೂರು-ಬೆಂಗಳೂರು-1
ಬೆಂಗಳೂರು-ಚನ್ನೈ-1
ಬೆಂಗಳೂರು-ರಾಯಚೂರು-2
ಬೆಂಗಳೂರು-ಶ್ರೀ ಹರಿಕೋಟಾ-2
ಬೆಂಗಳೂರು-ಕಾಸರಗೂಡು-2
ಬೆಂಗಳೂರು-ಕ್ಯಾಲಿಕಟ್-2
ಐರಾವತ ಕ್ಲಬ್ ಕ್ಲಾಸ್ 2.0 ವಿಶೇಷತೆ ಏನು?
ಈ ವಾಹನವು 15 ಮೀಟರ್ ಉದ್ದವಿದ್ದು ಕೆಳಕಂಡ ಪ್ರಮುಖ ವಿಶಿಷ್ಟತೆಗಳನ್ನು ಹೊಂದಿರುತ್ತದೆ.
51 ಆಸನಗಳು 2×2 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
ಇದು ಶಕ್ತಿಯುತ ಹಾಲೋಜನ್ ಹೆಡ್‌ಲೈಟ್ಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್ಗಳನ್ನು (DRL) ಹೊಂದಿರುತ್ತದೆ.
ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್‌ಟೀರಿಯರ್ಸ್‌ನ್ನು ಹೊಂದಿದೆ, ಇದು ದೃಶ್ಯಾವಳಿಯಲ್ಲಿ ಆಕರ್ಷಕ ಎಸ್ಥೆಟಿಕ್ಸ್ ಅನ್ನು ನೀಡುತ್ತದೆ.
ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ನೂತನ ಆವಿಷ್ಕಾರದ ಎಂಜಿನ್ ತಂತ್ರಜ್ಞಾನವು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮತ್ತು ಸುಧಾರಿತ ಇಂಧನ ದಕ್ಷತೆಯನ್ನು (KMPL) ಒದಗಿಸುತ್ತದೆ.
ಒಟ್ಟು ಬಸ್ ಉದ್ದದಲ್ಲಿ 3.5% ಏರಿಕೆಯಿಂದ ಪ್ರಯಾಣಿಕರ ಆಸನಗಳ ನಡುವೆ ಹೆಚ್ಚು ಸ್ಥಳವನ್ನು ಒದಗಿಸುತ್ತದೆ. ಒಟ್ಟು ಬಸ್ ಎತ್ತರದಲ್ಲಿ 5.6% ಏರಿಕೆಯಿಂದ ಹೆಚ್ಚಿನ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ.
ಚಾಲಕರ ದೃಶ್ಯಾವಧಿಯನ್ನು ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು 9.5% ಅಗಲವಾಗಿದೆ.
ಹಳೆಯ ಬಸ್‌ಗಳಿಗಿಂತ 20% ಹೊಂದಿರುವುದರಿಂದ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಲಗೇಜ್ ಸ್ಥಳ, ಇದರಿಂದಾಗಿ ಇಷ್ಟು ದೊಡ್ಡ ಲಗೇಜ್ ಸ್ಥಳವನ್ನು ಹೊಂದಿರುವ ಮೊದಲ ಬಸ್ ಆಗಿದೆ.
ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು, ಯುಎಸ್‌ಬಿ ಮತ್ತು C-ಟೈಪ್, ಹೊಂದಿಸಲಾಗಿದೆ.
ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆ, ಇದರಿಂದಾಗಿ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನಗಳು ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಆದ ಅನುಕೂಲವನ್ನು ಒದಗಿಸುತ್ತದೆ.
ಪ್ಯಾಂಟೊಗ್ರಾಫಿಕ್ ವಿನ್ಯಾಸವು ವಾಹನ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.
ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟ್ಗಳು. ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್‌ಗಳನ್ನು ಹೊಂದಿವೆ.
ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಸ್ಥಾಪಿಸಲಾಗಿದೆ. ಬೆಂಕಿ ಅಪಘಾತಗಳ ಸಂದರ್ಭದಲ್ಲಿ ನೀರನ್ನು ಸಿಂಪಡಿಸಲು ಪ್ರಯಾಣಿಕರ ಆಸನಗಳ ಎರಡೂ ಬದಿಗಳಲ್ಲಿರುವ 30 ನೊಝಲ್ಗಳ ನೀರು ಪೈಪುಗಳನ್ನು ಅಳವಡಿಸಲಾಗಿದೆ.
ಚಾಲಕರು ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾದ ಕಾರಣ, ಪಾದಚಾರಿ ಸುರಕ್ಷತೆಯನ್ನು ಸುಧಾರಿಸಿದೆ.
ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಸುಧಾಕರ್, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಶಾಸಕ ರಿಜ್ವಾನ್ ಅರ್ಷದ್, ಡಾ. ಎನ್.ವಿ. ಪ್ರಸಾದ್ ಭಾಆಸೇ., ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ವಿ. ಅನ್ಬುಕುಮಾರ್, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ, ರಾಮಚಂದ್ರನ್, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ. ಸಂಸ್ಥೆ, ಡಾ. ನಂದಿನಿದೇವಿ, ಭಾಆಸೇ., ನಿರ್ದೇಶಕರು (ಸಿ ಮತ್ತು ಜಾ), ಕಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಸಿಎಂ ಆಗಿದ್ದಾಗಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡುತ್ತಾರೆ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ