ವಿಜಯನಗರ : ಇತ್ತೀಚಿಗೆ ಈ ಆನ್ಲೈನ್ ವಂಚನೆ, ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಗ್ರಾಹಕರೊಬ್ಬರ ಬ್ಯಾಂಕ್ ನಲ್ಲಿದ್ದ 9.7 ಲಕ್ಷ ರೂಪಾಯಿಯನ್ನು ಸೈಬರ್ ವಂಚಕರು ಓಟಿಪಿ ಕೂಡ ಇಲ್ಲದೆ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಈ ಒಂದು ಘಟನೆ ನಡೆದಿದ್ದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿಯ ಕಂಠಿ ವಿರೂಪಾಕ್ಷ ಹಣ ಕಳೆದುಕೊಂಡಿರುವರು. ಎರಡು ದಿನಗಳ ಹಿಂದೆಯಷ್ಟೇ ಜಮೀನು ಮಾರಾಟದ ಹಣ ಇವರ ಖಾತೆಗೆ ಜಮೆ ಆಗಿತ್ತು. ಆದರೆ ಅವರಿಗೆ ಬಂದಂತಹ ಒಂದು ಲಿಂಕ್ ನಿಂದ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿಯನ್ನು ಸೈಬರ್ ವಂಚಕರು ದೋಚಿದ್ದಾರೆ.
ಕೆನರಾ ಬ್ಯಾಂಕ್ ಲೋಗೋ ಇರುವ ಆಯಪ್‌ನ ಲಿಂಕ್ ಇವರ ಮೊಬೈಲ್‌ಗೆ ಸಂದೇಶ ಬಂದಿದೆ. ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಬಳಸಿ ಆಯಪ್ ಡೌನ್‌ಲೋಡ್ ಮಾಡಿದ್ದಾರೆ. ನಂತರದ 30 ನಿಮಿಷದಲ್ಲಿ ಖಾತೆಯಲ್ಲಿದ್ದ ಹಣವೆಲ್ಲ ಖಾಲಿಯಾಗಿದೆ.ಖಾತೆಯಲ್ಲಿಹಣ ಇಲ್ಲದಿರುವುದು ತಿಳಿದು, ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ವಂಚನೆಯಾಗಿರುವುದು ತಿಳಿದಿದೆ.
ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಓಪನ್ ಮಾಡಿದೆ. ಅಷ್ಟರಲ್ಲಿ ಆನ್ ಲೈನ್ ವಂಚಕರು ಹಣ ಲಪಟಾಯಿಸಿದ್ದಾರೆ. ಆರ್ಥಿಕ ತೊಂದರೆ ಇದ್ದುದರಿಂದ ಜಮೀನು ಮಾರಾಟ ಮಾಡಿದ್ದೆ. ಹಣವನ್ನೆಲ್ಲ ಕಳ್ಳರು ದೋಚಿದ್ದಾರೆ ಎಂದು ಅಳಲು ತೋಡಿಕೊಂಡಿದ್ದು, ಈ ಕುರಿತು ವಿರೂಪಾಕ್ಷಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಿದ್ದಾರೆ.