ಬೆಂಗಳೂರು: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಸಾಗರ ನಗರದ ಉಪ ವಿಭಾಗೀಯ ಅಧಿಕಾರಿ ಕಚೇರಿಯ ಮುಂದೆ ಕೆಲ ದಿನಗಳ ಕಾಲ ರೈತರು ಪ್ರತಿಭಟನೆ, ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದ್ದರು. ಅಲ್ಲದೇ ಲಿಂಗನಮಕ್ಕಿ ಚಲೋ ಕೂಡ ನಡೆಸಿದ್ದರು. ಈ ಬೆನ್ನಲ್ಲೇ ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಎಂ.ಕಿಶೋರ್ ಕುಮಾರ್ ಅವರು ಸಭಾ ಸೂಚನ ಪತ್ರವನ್ನು ಹೊರಡಿಸಿದ್ದಾರೆ. ಅದರಲ್ಲಿ ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರು ಹಾಗೂ ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆ ಹಾಗೂ ಸಮಸ್ಯೆ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಇವರ ಉಪಸ್ಥಿತಿಯಲ್ಲಿ ದಿನಾಂಕ 30-10-2024ರಂದು ಸಂಜೆ 4 ಗಂಟೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 313ರಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಇನ್ನೂ ಶಿವಮೊಗ್ಗ ಜಿಲ್ಲಾ ರೇತರ ಮುಳುಗಡೆ ಸಂತ್ರಸ್ತರು ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ, ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರಿಗೆ ಭಾಗವಹಿಸುವಂತೆ ಕೋರಿದ್ದಾರೆ.
ಈವರೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ವತಿಯಿಂದ ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಕೈಗೊಂಡಿರುವ ಕ್ರಮಗಳು
1. ಬಹಳ ವರ್ಷಗಳಿಂದ ಬಾಕಿ ಇರುವ ಸಂತ್ರಸ್ಥ ಕುಟುಂಬಗಳ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ದಿನಾಂಕ 18-07-2023 ರಂದು ಮಾನ್ಯ ಅರಣ್ಯ ಇಲಾಖೆ ಸಚಿವರು, ಮಾನ್ಯ ಕಂದಾಯ ಇಲಾಖೆ ಸಚಿವರು, ಮಾನ್ಯ ಯುವಜನ ಸೇವಾ ಮತ್ತು ಬುಡಕಟ್ಟು ವರ್ಗಗಳ ಸಚಿವರು, ಹೆಚ್ಚುವರಿ ಅಡ್ವಕೇಟ್ ಜನರಲ್ ಹಾಗೂ ಮಾನ್ಯ ಮುಖ್ಯ ಮಂತ್ರಿಯವರ ಕಾನೂನು ಸಲಹೆಗಾರರು ಇವರ ಸಮ್ಮುಖದಲ್ಲಿ ವಿಧಾನ ಸೌಧ ಬೆಂಗಳೂರು ಇಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಲಾಗಿದೆ.
2. ಶರಾವತಿ ಯೋಜನೆ ಮುಳುಗಡೆ ಸಂತ್ರಸ್ಥರಿಗೆ ಪರಿಹಾರ ಹಾಗೂ ಪುರ್ನವಸತಿ ಸಲುವಾಗಿ ಮಂಜೂರು ಮಾಡಲಾದ 9129 ಎಕರೆ ಡಿ-ನೋಟಿಫಿಕೇಷನ್ ರದ್ದತಿ ಪ್ರಕರಣಕ್ಕೆ ಸಂಬಂದಪಟ್ಟಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿ ಸಲುವಾಗಿ ಹೆಚ್ಚುವರಿ ವಕೀಲರನ್ನು ರಾಜ್ಯ ಸರ್ಕಾರದಿಂದ ನೇಮಕ ಮಾಡುವ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. (19-06-2024)
3. ಅರಣ್ಯ ವಾಸಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಲು ಕೋರಲಾಗಿರುತ್ತದೆ. (19-06-2024)
4. ಮಧ್ಯಂತರ ಅರ್ಜಿ ಸಲ್ಲಿಸುವ ಸಂಬಂಧ ಮತ್ತು ನುರಿತ ವಕೀಲರನ್ನು ನೇಮಕ ಮಾಡುವ ಸಂಬಂಧ ಶ್ರೀ ಶಶಿಕಿರಣ್ ಶೆಟ್ಟಿ, ಅಡ್ವಕೇಟ್ ಜನರಲ್. ಕರ್ನಾಟಕ ಸರ್ಕಾರ ರವರನ್ನು ಭೇಟಿ ಮಾಡಲಾಗಿರುತ್ತದೆ.
5. ದಿನಾಂಕ 05-08-2023 ರಂದು ಸಹಾಯಕ ಅಡ್ವಕೇಟ್ ಜನರಲ್ ರವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ವಾಸ್ತವಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿರುತ್ತಾರೆ.
6. ಶರಾವತಿ ಯೋಜನೆ ಮುಳುಗಡೆ ಸಂತ್ರಸ್ಥರಿಗೆ ಪರಿಹಾರ ಹಾಗೂ ಪುರ್ನವಸತಿ ಸಲುವಾಗಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಪರಿಹಾರೋಪಾಯ ಸಭೆಯನ್ನು ಶಿವಮೊಗ್ಗದಲ್ಲಿ ನಡೆಸಲಾಗಿದೆ. (ದಿನಾಂಕ 21-06-2024)
7. ಸಂತ್ರಸ್ಥ ಕುಟುಂಬಗಳ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ದಿನಾಂಕ 21-06-2024 ರ ಸಭೆಯ ನಿರ್ಣಯದಂತೆ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸುವ ಪೂರ್ವದಲ್ಲಿ ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲು ಕೋರಲಾಗಿದೆ. (24-06-2024)
8. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಸೆಕ್ಷನ್ 79(2) ರ ರೀತ್ಯಾ ವಿಶೇಷ ಹಕ್ಕುಳ್ಳ ಭೂಮಿಗಳಾದ ಸೊಪ್ಪಿನ ಬೆಟ್ಟ, ಕಾನು, ಕುಮ್ಮಿ, ಬೆಟ್ಟ, ಜಮ್ಮಾಬಾನೆ, ಮೋಟ್ಬಾಲ್ ತರಿ ಜಮೀನುಗಳ ಅರಣ್ಯ ಭೂಮಿಗಳೆಂದು ಸುತ್ತೋಲೆ ಹೊರಡಿಸಿರುವ ಕಾರಣ ಮೇಲ್ಕಂಡ ಜಮೀನುಗಳ ಅನಧೀಕೃತ ಸಾಗುವಳಿ ಸಕ್ರಮಗೊಳಿಸಲು ತೊಂದರೆ ಉಂಟಾಗಿರುವ ಕಾರಣ ಮೇಲ್ಕಂಡ ಸುತ್ತೋಲೆಗಳನ್ನು ಹಿಂಪಡೆದು ಸದರಿ ಜಮೀನುಗಳ ಅನಧೀಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕೋರಲಾಗಿರುತ್ತದೆ. (04-12-2023)
9. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ರ ಕಲಂ 4(1) ರ ರೀತ್ಯಾ ರೈತರ ಸ್ವಂತ ಹಿಡುವಳಿ ಭೂಮಿಗಳನ್ನು, ಬಗರ್‌ಹುಕುಂ ಸಾಗುವಳಿ ಭೂಮಿಗಳನ್ನು ಹಾಗೂ ಜನವಸತಿ ಪ್ರದೇಶಗಳನ್ನು (ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94(A), 94(B) ಹಾಗೂ 94(C) 94(CC) ರಡಿಯಲ್ಲಿ ಸಕ್ರಮ ಕೋರಿರುವ) ಒಳಗೊಂಡಂತೆ ಮೀಸಲು ಅರಣ್ಯ ಘೋಷಿಸುವ ಸಲುವಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 20-30 ವರ್ಷ ಕಳೆದರೂ ಸಹ ಮೇಲ್ಕಂಡ ರೈತರ ಸಾಗುವಳಿ ಭೂಮಿ ಹಾಗೂ ಮನೆಗಳನ್ನು ಹೊರತುಪಡಿಸಿ ಕರ್ನಾಟಕ ಅರಣ್ಯ ಕಾಯ್ದೆ 1963 ರ ಕಲಂ 17(1) ರ ರೀತ್ಯಾ ಅಂತಿಮ ಅಧಿಸೂಚನೆ ಹೊರಡಿಸದೇ ಇರುವ ಕಾರಣ ಸರ್ಕಾರಿ ಭೂಮಿ ಸಾಗುವಳಿ ಹಕ್ಕು ಹಾಗೂ ವಸತಿ ಹಕ್ಕನ್ನು ಮಂಜೂರು ಮಾಡಲು ತೊಂದರೆಯಾಗಿದ್ದು, ಶೀಘ್ರವಾಗಿ ಅಂತಿಮ ಅಧಿಸೂಚನೆ ಹೊರಡಿಸಿ ಸಾಗುವಳಿ ಹಕ್ಕು ಹಾಗೂ ವಸತಿ ಹಕ್ಕನ್ನು ಪ್ರಾಪ್ತಗೊಳಿಸಲು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ. (08-12-2023)
10. ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ವಿವಿಧ ಭೂ ಮಂಜೂರಾತಿ ಕಾಯ್ದೆ ಹಾಗೂ ನಿಯಮಗಳಡಿಯಲ್ಲಿ ರೈತರಿಗೆ ಮಂಜೂರು ಮಾಡಲಾದ ಭೂಮಿಗಳನ್ನು ಅರಣ್ಯ ಭೂಮಿಗಳೆಂದು ಇಂಡೀಕರಣ ಮಾಡುತ್ತಿರುವ ಕ್ರಮವನ್ನು ಪುನರ್ ಪರಿಶೀಲಿಸಿ ರೈತರಿಗೆ ಸಾಗುವಳಿ ಹಕ್ಕನ್ನು ಪ್ರಾಪ್ತಿಗೊಳಿಸುವ ಬಗ್ಗೆ ಹಾಗೂ ಇನ್ನಿತರೆ ಸಮಸ್ಯೆಗಳ ಕುರಿತು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಪತ್ರ ನೀಡಲಾಗಿದೆ. (19-06-2024)
ಶಿವಮೊಗ್ಗ ಜಿಲ್ಲೆಯ ರೈತರ ಗಮನಕ್ಕೆ: ‘ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ’ಗೆ ಅರ್ಜಿ ಆಹ್ವಾನ
BIG NEWS : ದೇವಸ್ಥಾನಗಳಲ್ಲಿ `VIP’ ದರ್ಶನ ಸಮಾನತೆಯ ಹಕ್ಕಿನ ಉಲ್ಲಂಘನೆ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ!