ಬೆಂಗಳೂರು: BBMP ವ್ಯಾಪ್ತಿಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ನಂತ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 1,02,41,226 ಮತದಾರರಿದ್ದಾರೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ ರವರು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಕಾರ್ಯಚಟುವಟಿಕೆಗಳ ಭಾಗವಾಗಿ ಕರಡು ಮತದಾರರ ಪಟ್ಟಿಯನ್ನು ಇಂದು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯಲ್ಲಿ 1,02,41,226 ಮತದಾರರಿದ್ದು, ಈ ಪೈಕಿ 52,69,188 ಪುರುಷರು, 49,70,207 ಮಹಿಳೆಯರು ಹಾಗೂ 1,831 ಇತರೆ(ತೃತೀಯ ಲಿಂಗಿಗಳು) ಮತದಾರರಿದ್ದಾರೆ ಎಂದು ಹೇಳಿದರು.
ಮತದಾರರ ಕರಡು ಪ್ರತಿಯನ್ನು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕರಡು ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ರವರ ವೆಬ್‌ಸೈಟ್ www.ceokarnataka.kar.nic.in ಮತ್ತು ಬಿಬಿಎಂಪಿ ವೆಬ್‌ಸೈಟ್ www.bbmp.gov.in ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು/ಮತದಾರರು ತಮ್ಮ ಮೊಬೈಲ್‌ನಲ್ಲಿ ವಿ.ಹೆಚ್.ಎ(Voter Helpline App) ಅಥವಾ ವೆಬ್ ಪೋರ್ಟಲ್ ಆದ Voters.eci.gov.in ನಲ್ಲಿ ಖುದ್ದಾಗಿ ಮತದಾರರ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದು. ಜೊತೆಗೆ e-EPIC ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೂ ಇನ್ನಿತರೆ ಮಾಹಿತಿಗಳಾದ ಮತಗಟ್ಟೆ, ಶೇಖಡವಾರು ಮತದಾನದ ಮಾಹಿತಿಯನ್ನು ಕೂಡಾ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
8972 ಮತಗಟ್ಟೆಗಳು:
ನಗರದಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರಕ್ಕೆ 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬರಲಿದ್ದು, ಒಟ್ಟು 8972 ಮತಗಟ್ಟೆಗಳು ಬರಲಿವೆ.
86,044 ಯುವ ಮತದಾರರು:
ನಗರದಲ್ಲಿ 1.02 ಕೋಟಿ ಮತದಾರರ ಪೈಕಿ 86.044 ಮತದಾರರು ಯುವ ಮತದಾರರಿದ್ದಾರೆ. 1.19 ಲಕ್ಷ 85 ರಿಂದ 99 ವರ್ಷದ ಹಿರಿಯ ಮತದಾರರಿದ್ದು, 100ಕ್ಕೂ ಹೆಚ್ಚು ವಯಸ್ಸಿನ 4,852 ಹಿರಿಯ ಮತದಾರರಿದ್ದಾರೆ. 2272 ಅನಿವಾಸಿ ಭಾರತೀಯ ಮತದಾರರು, 1708 ಸೇವಾ ಮತದಾರರು ಹಾಗೂ 32,213 ವಿಶೇಷ ಚೇತನ ಮತದಾರರಿದ್ದಾರೆ.
ವಿಶೇಷ ನೊಂದಣಿ ಅಭಿಯಾನ:
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಿಗಾಗಿ ವಿಶೇಷ ನೊಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಂತೆ ದಿನಾಂಕ: 09.11.2024(ಶನಿವಾರ), 10.11.2024 (ಭಾನುವಾರ), 23.11.2024 (ಶನಿವಾರ), 24.11.2024 (ಭಾನುವಾರ) ರಂದು ಪಾಲಿಕೆಯ ಕಂದಾಯ ಅಧಿಕಾರಿಗಳು/ಸಹ ಕಂದಾಯ ಅಧಿಕಾರಿಗಳು/ವಾರ್ಡ್ ಕಛೇರಿಗಳು/ಮತಗಟ್ಟೆಗಳಲ್ಲಿ ವಿಶೇಷ ಆಭಿಯಾನವನ್ನು ಆಯೋಜಿಸಲಾಗುವುದು. ಸಾರ್ವಜನಿಕರು ಮತ್ತು ಮತದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಯುವ ಮತದಾರರ ನೋಂದಣಿಗೆ ಅವಕಾಶ:
1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಮತ್ತು 1ನೇ ಅಕ್ಟೋಬರ್ ನಾಲ್ಕು ಅರ್ಹತಾ ದಿನಾಂಕಗಳನ್ನು ಯುವ(18-19 ಮತದಾರರಿಗಾಗಿ ನಿಗಧಿಪಡಿಸಲಾಗಿರುತ್ತದೆ. ಇದರಿಂದ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಅನುಕೂಲವಾಗಲಿದೆ ಹಾಗೂ 17 ವರ್ಷ ತುಂಬಿದವರು ಈಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ:
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 28 ವಿಧಾನಸಭಾ ಕ್ಷೇತ್ರವಾರು BLO ರವರುಗಳು ಮನೆ-ಮನೆ ಭೇಟಿ ನೀಡಿ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟ್ (BLAs) ರವರುಗಳೊಂದಿಗೆ ಸಮನ್ವಯ ಸಾಧಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು.
ಹಕ್ಕು ಆಕ್ಷೇಪಣೆ ಸಲ್ಲಿಸಲು ಅವಕಾಶ:
ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಇಂದು ಪ್ರಚುರ ಪಡಿಸಲಾಗಿದ್ದು, ಸದರಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಒಂದು ಭಾಗ ಸಂಖ್ಯೆಯಿAದ ಮತ್ತೊಂದು ಭಾಗದ ಸಂಖ್ಯೆಗೆ ವರ್ಗಾವಣೆಯಾಗಬೇಕಿದ್ದಲ್ಲಿ ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಮತದಾರರು ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ, ವಾರ್ಡ್ ಕಛೇರಿ ಹಾಗೂ ಬಿ.ಎಲ್.ಓ ರವರುಗಳಿಗೆ ನಮೂನೆ-6, 7 ಮತ್ತು 8 ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ದಿನಾಂಕ: 29.10.2024 ರಿಂದ 28.11.2024 ರವರಗೆ ಅವಕಾಶಗಳನ್ನು ಕಲ್ಪಿಸಿರುತ್ತದೆ.
ಆನ್ ಲೈನ್ ಮೂಖಾಂತರ ಅರ್ಜಿ ಸಲ್ಲಿಸಿ:
ಪ್ರಥಮ ಬಾರಿಗೆ ನೊಂದಾಯಿಸಿಕೊಳ್ಳುವ ಮತದಾರರು ಹಾಗೂ ದಿನಾಂಕ: 01.01.2025ಕ್ಕೆ ಅನ್ವಯವಾಗುವಂತೆ ದಿನಾಂಕ: 01.01.2007 ರವರೆಗೆ ಜನನವಾಗಿರುವ ಯುವಕ/ಯುವತಿಯರು ಅರ್ಜಿ ನಮೂನೆ-6ನ್ನು ಆನ್‌ಲೈನ್ ಮುಖಾಂತರ ಸ್ವಯಂ ಪ್ರೇರಿತವಾಗಿ Web Portal-Voters.eci.gov.in ಅಥವಾ Voter Helpline Mobile App ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ವಯಸ್ಸಿನ ದೃಢೀಕರಣಕ್ಕಾಗಿ ಬೇಕಾಗಿರುವ ದಾಖಲೆಗಳು:
* ಜನನ ಪ್ರಮಾಣ ಪತ್ರ
* 10ನೇ ತರಗತಿಯ ಅಂಕಪಟ್ಟಿ
* ಭಾರತೀಯ ರಹದಾರಿ ಪತ್ರ (ಭಾರತೀಯ ಪಾಸ್ ಪೋರ್ಟ್)
* ಪಾನ್ ಕಾರ್ಡ್
* ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್)
* ಯುಐಡಿಎಐ ನಿಂದ ನೀಡಿರುವ ಆಧಾರ್ ಕಾರ್ಡ್
ವಿಳಾಸ ದೃಢೀಕರಣಕ್ಕಾಗಿ ಬೇಕಾಗಿರುವ ದಾಖಲೆಗಳು:
* ಆಧಾರ್ ಕಾರ್ಡ್
* ಭಾರತೀಯ ರಹದಾರಿ ಪತ್ರ (ಭಾರತೀಯ ಪಾಸ್ ಪೋರ್ಟ್)
* ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್)
* ಬ್ಯಾಂಕ್/ಕಿಸಾನ್ /ಅಂಚೆ ಕಛೇರಿಯಲ್ಲಿ ಚಾಲ್ತಿಯಲ್ಲಿರುವ ಭಾವಚಿತ್ರವಿರುವ ಪಾಸ್ ಪುಸ್ತಕ
* ಪಡಿತರ ಗುರುತಿನ ಚೀಟಿ
* ಆದಾಯ ತೆರಿಗೆ ಮೌಲ್ಯಮಾಪನ ಆದೇಶ
* ಬಾಡಿಗೆ ಕರಾರು ಪತ್ರ
* ನೀರು/ದೂರವಾಣಿ/ವಿದ್ಯುತ್ ಬಿಲ್/ಗ್ಯಾಸ್ ಸಂಪರ್ಕ ಪಟ್ಟಿ(ಬಿಲ್)
ಜನವರಿ 6 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ:
ಮತದಾರರ ಕರಡು ಪಟ್ಟಿಯನ್ನು ಇಂದು ಪ್ರಕಟಿಸಲಾಗಿದ್ದು, 29-10-2024 ರಿಂದ 28-11-2024 ರವರೆಗೆ ಹಕ್ಕು-ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. 4 ದಿನಾಂಕಗಳಂದು ವಿಶೇಷ ಅಭಿಯಾನ, 24-12-2024 ರಂದು ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಮಾಡಿದ ಬಳಿಕ 1ನೇ ಜನವರಿ 2025 ರಂದು ಎಲ್ಲಾ ಪರಿಶೀಲನೆ ಮಾಡಿಕೊಂಡು ಆಯೋಗದ ಅನುಮತಿಯನ್ನು ಪಡೆದು, 06ನೇ ಜನವರಿ 2025 ರಂದು “ಅಂತಿಮ ಮತದಾರರ ಪಟ್ಟಿ” ಪ್ರಕಟಿಸಲಾಗುವುದು.
ರಾಜಕೀಯ ಪ್ರತಿನಿಧಿಗಳ ಜೊತೆ ಸಭೆ:
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಕಾರ್ಯಚಟುವಟಿಕೆಗಳ ಭಾಗವಾಗಿ ಕರಡು ಮತದಾರರ ಪಟ್ಟಿ ಪ್ರಕಟಕ್ಕೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ರಾಜಕೀಯ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ವಿನೋತ್ ಪ್ರಿಯಾ, ಅವಿನಾಶ್ ಮೆನನ್ ರಾಜೇಂದ್ರನ್, ಸ್ನೇಹಲ್, ಸಹಾಯಕ ಆಯುಕ್ತರಾದ ಶರಣಪ್ಪ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
BREAKING: ನಾಳೆಗೆ ನಟ ದರ್ಶನ್ ಮಧ್ಯಂತರ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್ | Actor Darshan
BIG NEWS : ದೇವಸ್ಥಾನಗಳಲ್ಲಿ `VIP’ ದರ್ಶನ ಸಮಾನತೆಯ ಹಕ್ಕಿನ ಉಲ್ಲಂಘನೆ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ!