“ಆಹಾರೋಹಿ ದೇಹ ಸಂಭವ” ಅಂದರೆ ನಾವು ಯಾವ ಆಹಾರ ಸೇವಿಸುತ್ತೇವೆಯೋ ಅಂತೆಯೇ ನಮ್ಮ ದೇಹದ ರಚನೆ ಆಗುತ್ತದೆ.ನಾವು ಆಧುನಿಕತೆಗೆ ಹೊಂದಿಕೊಳ್ಳುತ್ತಾ ನಮ್ಮ ಜೀವನ ಶೈಲಿ,ಆಹಾರ ಮತ್ತು ಆಹಾರ ಕ್ರಮಗಳನ್ನು ಆಧುನಿಕತೆಗೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ.
ಆಯುರ್ವೇದವು ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಇವುಗಳನ್ನು ಮಾನವ ಜೀವನದ ಮೂರು ಸ್ತಂಭಗಳು ಎಂದು ವಿವರಿಸಿದೆ. ಹೇಗೆ ವಾಹನ ಚಲಿಸಲು ಇಂಧನ ಮುಖ್ಯವೋ, ಹಾಗೆಯೇ ಮಾನವನ ದೇಹದ ಚಟುವಟಿಕೆಗೆ ಮತ್ತು ಬೆಳವಣಿಗೆಗೆ ಆಹಾರವು ಅತ್ಯಗತ್ಯ. ಹೀಗಿರುವಾಗ ಆಹಾರದ ರುಚಿಗೆ ಮತ್ತು ಆಕರ್ಷಣೆಗೆ ಮೊರೆಹೋಗಿ ಅನೇಕ ರೋಗಗಳಿಗೆ ತುತ್ತಾಗಿದ್ದೇವೆ. ಹಾಗಾದರೆ ನಾವು ಎಂತಹ ಆಹಾರವನ್ನು ಸೇವಿಸಬೇಕು? ಎಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು? ಆಹಾರದ ಕ್ರಮವೇನು ಎಂಬ ಹಲವು ಪ್ರಶ್ನೆಗಳಿಗೆ ಆಯುರ್ವೇದದಲ್ಲಿ ಹೀಗಿದೆ ವಿವರಣೆ.
ಎಂತಹ ಆಹಾರವನ್ನು ಸೇವಿಸಬೇಕು?
ಆಯುರ್ವೇದವು ಆರು ರಸ(taste)ಗಳನ್ನು ತಿಳಿಸಿದೆ ಅವುಗಳೆಂದರೆ ಮಧುರ ರಸ(ಸಿಹಿ), ಆಮ್ಲರಸ(ಹುಳಿ), ಲವಣರಸ(ಉಪ್ಪು),ತಿಕ್ತರಸ(ಕಹಿ), ಕಟುರಸ (ಖಾರ), ಕಷಾಯ ರಸ(ಒಗರು) ನಿಯಮಿತವಾಗಿ ಆರು ರಸಗಳಿಂದ ಕೂಡಿದ ಆಹಾರವನ್ನು ಸೇವಿಸುವುದರಿಂದ ದೇಹವು ಬಲದಾಯಕವಾಗುತ್ತದೆ.ಮತ್ತು ನಿಯಮಿತವಾಗಿ ಒಂದೇ ರಸ(ರುಚಿ) ಸೇವನೆಯಿಂದ ಶರೀರವು ದುರ್ಬಲವಾಗುತ್ತದೆ. ನಮ್ಮ ಶರೀರವು ರಸ, ರಕ್ತಾದಿ ಮುಂತಾದ ಸಪ್ತಧಾತುಗಳಿಂದ(body tissues)ಕೂಡಿ ಯಾವಾಗಲೂ ಪರಿಪಾಕ( digestion &metabolism)ಹೊಂದುತ್ತಾ, ಗುರು-ಲಘು,ಶೀತ-ಉಷ್ಣ ಮುಂತಾದ ಹತ್ತು ದ್ವಂದ್ವಗಳನ್ನು ಗುಣಗಳಿಂದ ಕೂಡಿರುತ್ತದೆ. ಆಹಾರ ಪದಾರ್ಥವು ಕೂಡ ಈ 10 ದ್ವಂದ್ವ ಗುಣಗಳಿಂದ ಕೂಡಿರುತ್ತದೆ ಆದ್ದರಿಂದ ದೇಹದ ಸಪ್ತಧಾತುಗಳು ತಮಗೆ ಸಮಾನವಾದ ಆಹಾರ ಪದಾರ್ಥಗಳ ಗುಣಗಳಿಂದ ವೃದ್ಧಿ ಹೊಂದುತ್ತವೆ ಮತ್ತು ವಿರುದ್ಧ ಗುಣವುಳ್ಳ ಪದಾರ್ಥಗಳಿಂದ ಕ್ಷೀಣಿಸುತ್ತವೆ. ಹೀಗಾಗಿ ನಾವು ಆಹಾರದ ಗುಣ ಧರ್ಮವನ್ನು ತಿಳಿದು ಆಹಾರವನ್ನು ಸೇವಿಸುವುದು ಉತ್ತಮ.
ಆಹಾರದ ಪ್ರಮಾಣ ಎಷ್ಟಿರಬೇಕು?
“ಆಯುಷ್ಯಂ ಭೋಜನಂ ಜೀರ್ಣ “ಮೊದಲು ಸೇವಿಸಿದ ಆಹಾರ ಸಂಪೂರ್ಣವಾಗಿ ಜೀರ್ಣವಾದ ನಂತರವೇ ಮುಂದಿನ ಆಹಾರವನ್ನು ಸೇವಿಸಬೇಕು. ಆಹಾರ ಪ್ರಮಾಣವೂ ಸೇವಿಸುವವರ ಅಗ್ನಿಯ ಮೇಲೆ ಅವಲಂಬಿತವಾಗಿರುತ್ತದೆ,ಜೀರ್ಣಶಕ್ತಿಯು ಎಲ್ಲರಲ್ಲೂ ಸಮನಾಗಿರದೆ ವಿಭಿನ್ನವಾಗಿರುತ್ತದೆ.
ಅಗ್ನಿಯ(Digestive fire) ಪ್ರಾಮುಖ್ಯತೆ
ರೋಗ ಸರ್ವೇ ಅಪಿ ಮುಂದಾಗ್ನೋ, ಅಗ್ನಿ(Digestive fire) ಎಂದರೆ ಆಹಾರ ಪದಾರ್ಥಗಳನ್ನು ಜೀರ್ಣ ಮಾಡಲು ಒಂದು ಸಹಾಯಕ ಘಟಕವಾಗಿದೆ. ಜಾಠರಾಗ್ನಿ ಯ ದುರ್ಬಲದಿಂದ ಸೇವಿಸಿದ ಆಹಾರವು ಪರಿಪೂರ್ಣವಾಗಿ ಪಚನವಾಗದೆ ಆಹಾರ ರಸವು ಉತ್ಪತ್ತಿಯಾಗುತ್ತದೆ. ಈ ಅಪಕ್ವವಾದ ಆಹಾರ ರಸವನ್ನು ‘ಆಮಾ’ ಎಂದು ಕರೆಯುತ್ತಾರೆ.ಈ ಆಮಾವು ತ್ರಿದೋಷಗಳಾದ ವಾತ,ಪಿತ್ತ ಮತ್ತು ಕಫ ದೋಷಗಳನ್ನು ಪ್ರಕೋಪಗಳಿಸಿ ರೋಗಗಳ ಉದ್ಭವಕ್ಕೆ ಕಾರಣವಾಗುತ್ತದೆ.
ಆಹಾರ ಸೇವಿಸಿದ ನಂತರ ಏನು ಮಾಡಬಾರದು?
ಊಟವಾದ ಮೇಲೆ ಕುಳಿತುಕೊಳ್ಳುವನು ಸೋಮಾರಿ, ಮಲಗುವ ಪುಷ್ಟನಾಗುವನು, ಸಂಚರಿಸುವವನು ದೀರ್ಘಾಯುಷ್ಯವಂತನಾಗುವನು ಮತ್ತು ಓಡುವವನ ಹಿಂದೆಯೇ ಮೃತ್ಯು ಓಡಿ ಬರುತ್ತದೆ (ಊಟವಾದ ಬಳಿಕ ಸ್ವಲ್ಪ ಸಂಚರಿಸಬಹುದು ಆದರೆ ಓಡಬಾರದು ಮತ್ತು ವ್ಯಾಯಾಮವನ್ನು ಮಾಡುವುದು ನಿಷಿದ್ಧ. ಊಟವಾದ 48 ನಿಮಿಷದ ಕಾಲದವರೆಗೆ ಇವುಗಳನ್ನು ಬಿಡಬೇಕು).
ಆಹಾರ ಸೇವಿಸುವ ನಿಯಮಗಳು
1.ಉಷ್ಣ ಭುಂಜೀತ – ಆಹಾರವು ಬಿಸಿಯಾಗಿರುವಾಗಲೇ ಸೇವಿಸಬೇಕು. ಆಹಾರವು ಬಿಸಿಯಾಗಿದ್ದಾಗ ಜೈವಿಕ ಪೋಷಕಾಂಶಗಳ ಲಭ್ಯತೆ ಸಮರ್ಪಕವಾಗಿರುತ್ತದೆ.
2.ಸ್ನಿಗ್ಧಂ ಭುಂಜೀತ – ಆಹಾರದಲ್ಲಿ ಜಿಡ್ಡಿನಂತಹ ಅಂಶವನ್ನು ಸೇರಿಸಿ ಸೇವಿಸಬೇಕು.
3.ಮಾತ್ರಾವತ್ ಭುಂಜೀತ – ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು.
4.ಜೀರ್ಣೇ ಭುಂಜೀತ – ಮೊದಲು ಸೇವಿಸಿದ ಆಹಾರ ಜೀರ್ಣವಾದ ನಂತರವೇ ಮುಂದಿನ ಆಹಾರವನ್ನು ಸೇವಿಸಬೇಕು.
5.ನಾ ಅತಿ ದೃತಂ – ಗಡಿಬಿಡಿಯಲ್ಲಿ, ಮೊಬೈಲ್ ಟಿವಿಯನ್ನು ನೋಡುತ್ತಾ ಆಹಾರವನ್ನು ಸೇವಿಸಬಾರದು.
6.ವಿರುದ್ಧ ಸ್ವಭಾವದ ಆಹಾರವನ್ನು ಸೇವಿಸಬಾರದು.
7.ನಾ ಅತಿ ವಿಲಂಬಿತಮ್- ಅತಿ ನಿಧಾನವಾಗಿ ಆಹಾರವನ್ನು ಸೇವಿಸಬಾರದು.
8.ಊಟ ಮಾಡುವಾಗ ನಗಬಾರದು ಮತ್ತು ಮಾತನಾಡಬಾರದು.
“ಅನ್ನಂ ಬ್ರಹ್ಮಂ” ಎಂದು ತಿಳಿಸಲಾಗಿದೆ. ಇತ್ತೀಚಿನ ಪಾಶ್ಚಿಮಾತ್ಯ ಜೀವನ ಶೈಲಿಯ ಅನುಕರಣೆಯಿಂದ ಸೇವಿಸುವ ಆಹಾರದ ರುಚಿಗೆ ಮತ್ತು ಆಕರ್ಷಣೆಗೆ ಮೊರೆಹೊಗಿದ್ದಾರೆಯೇ ಹೊರತು ಅತಂಹ ಆಹಾರಗಳ ಪೋಷಕಾಂಶಗಳ ಬಗ್ಗೆ ಗಮನವಿಲ್ಲ.
ಸರಿಯಾದ ಆಹಾರ ಮತ್ತು ಆಹಾರಕ್ರಮದ ಪಾಲನೆಯಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ಆದ್ದರಿಂದ ಮೇಲೆ ತಿಳಿಸಿರುವ ಆಹಾರಕ್ರಮಗಳನ್ನು ಪಾಲನೆ ಮಾಡಿ ಸ್ವಾಸ್ಥ್ಯತೆಯನ್ನು ಕಾಪಾಡಿಕೊಳ್ಳಿ. ಎಲ್ಲರಿಗೂ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಶುಭಾಶಯಗಳು. ಆಯುರ್ವೇದವನ್ನು ಅರಿತು, ಅನುಸರಿಸಿ, ಆರೋಗ್ಯದಿಂದಿರಿ.
ಲೇಖಕರು: ಡಾ. ಪ್ರವೀಣ್ ಕುಮಾರ್, ಆಯುರ್ವೇದ ವೈದ್ಯ, ಹಗರಿಬೊಮ್ಮನಹಳ್ಳಿ, ಮೊಬೈಲ್ ಸಂಖ್ಯೆ -8660885793.