ಬೆಂಗಳೂರು : ರಾಜ್ಯದ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ ಮತ್ತು ಪರಿಭಾವಿತ ಅರಣ್ಯದ ಪುನರ್ ಪರಿಶೀಲನೆಗಾಗಿ 15 ದಿನಗಳಲ್ಲಿ ತಜ್ಞರ ಸಮಿತಿ ರಚಿಸಲು ಅರಣ್ಯ ಮತ್ತು ಕಂದಾಯ ಸಚಿವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವನ್ ಸಂರಕ್ಷಣ ಏವಂ ಸಂವರ್ಧನ ಅಧಿನಿಯಮ 1980ರ ನಿಯಮ 16ರಡಿ ಹೊಸದಾಗಿ ತಜ್ಞರ ಸಮಿತಿ ರಚಿಸಲು ಅವಕಾಶವಿದ್ದು, ಈ ನೂತನ ಸಮಿತಿ ರಾಜ್ಯದ ಅಧಿಸೂಚಿತ ಮತ್ತು ದಾಖಲಿಸಲಾದ ಅರಣ್ಯ ಪ್ರದೇಶದ ಸಮಗ್ರ ದಾಖಲೀಕರಣ ಮತ್ತು ಪರಿಭಾವಿತ ಅರಣ್ಯ ಪ್ರದೇಶದ ಲೋಪದೋಷ ಸರಿಪಡಿಸಲು ಪರಾಮರ್ಶಿಸಿ 6 ತಿಂಗಳೊಳಗೆ ವರದಿ ಸಲ್ಲಿಸಲಿದೆ.
ಪರಿಭಾವಿತ ಅರಣ್ಯ ಎಂದು ಗುರುತಿಸಿರುವ ಪ್ರದೇಶದಲ್ಲಿ ಅಧಿಸೂಚಿತ ಅರಣ್ಯ, ಪಟ್ಟಾಭೂಮಿ, ಸರ್ಕಾರಿ ಕಚೇರಿ, ಶಾಲೆ ಕಾಲೇಜುಗಳೂ ಇವೆ. ಹೀಗಾಗಿ ಇದರ ಪರಾಮರ್ಶೆ ಆಗಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಸಹ ಅಧ್ಯಕ್ಷತೆಯಲ್ಲಿಂದು ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಸಲಾಯಿತು.
ಗೋದಾವರ್ಮನ್ ತಿರುಮಲ್ಪಾಡ್ V/s ಕೇಂದ್ರ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1996ರಲ್ಲಿ ಅರಣ್ಯ ಮತ್ತು ಅರಣ್ಯ ಭೂಮಿಯ ಬಗ್ಗೆ ವ್ಯಾಖ್ಯಾನ ನೀಡಿ, ಅರಣ್ಯ ಗುರುತಿಸಲು ತಜ್ಞರ ಸಮಿತಿ ರಚಿಸಿ ಅಫಿಡವಿಟ್ ನಲ್ಲಿ ವಾಸ್ತವ ವರದಿ ಸಲ್ಲಿಸಲು ಸೂಚಿಸಿತ್ತು.
ತಜ್ಞರ ಸಮಿತಿ -1 ಸಮೀಕ್ಷೆ ನಡೆಸಿ 9,94,881.11 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಿತ್ತು. ಆದರೆ ಈ ಗುರುತಿಸುವಿಕೆಯಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ತಜ್ಞರ ಸಮಿತಿ -2ನ್ನು ನೇಮಿಸಲಾಗಿತ್ತು. ಈ ಸಮಿತಿ 3,30,286.93 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಎಂದು ಗುರುತಿಸಿತ್ತು.
ಈಶ್ವರ ಖಂಡ್ರೆ ಸಲಹೆ:
ಪುನರ್ ಪರಿಶೀಲನೆಗೆ ನೇಮಿಸಲಾಗುವ ಸಮಿತಿ ಈಗಾಗಲೇ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರದಲ್ಲಿ ತಿಳಿಸಲಾಗಿರುವ 3,30,286.93 ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಸರ್ಕಾರಿ ಕಚೇರಿ, ಶಾಲೆ, ಪಟ್ಟಾಭೂಮಿ ಇತ್ಯಾದಿ ಇದ್ದಲ್ಲಿ, ಇದಕ್ಕೆ ಪರ್ಯಾಯವಾಗಿ ಮರಗಿಡಗಳಿಂದ ಸಮೃದ್ಧವಾದ ಇತರ ಪ್ರದೇಶವನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಈಗಾಗಲೇ ಕಂದಾಯ ಇಲಾಖೆ ಸೂಚನೆ ನೀಡಿದ್ದು, ರಾಜ್ಯದ 20 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಒಂದೆರೆಡು ಜಿಲ್ಲೆ ಆಯ್ಕೆ ಮಾಡಿಕೊಂಡು ಜಂಟಿ ಸರ್ವೆ ನಡೆಸಿದಲ್ಲಿ ಸಮಸ್ಯೆಗಳು, ಗೊಂದಲಗಳ ಬಗ್ಗೆ ತಿಳಿಯುತ್ತದೆ. ಇದು ನೂತನ ತಜ್ಞರ ಸಮಿತಿ ವರದಿ ಸಲ್ಲಿಕೆಗೆ ನೆರವಾಗಲಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಎಲ್ಲ ಅಧಿಸೂಚಿತ ಮತ್ತು ಪರಿಭಾವಿತ ಅರಣ್ಯದ ಪಟ್ಟಿಯನ್ನು ತಮ್ಮ ಬಳಿ ಇರುವ ನಕ್ಷೆಯೊಂದಿಗೆ ನೀಡಿದಲ್ಲಿ, ತಾಳೆ ಮಾಡಿ ಪರಾಮರ್ಶಿಸಲು ಅನುಕೂಲವಾಗುತ್ತದೆ ಎಂದೂ ಅವರು ಸಲಹೆ ನೀಡಿದರು.
ಜಂಟಿ ಸರ್ವೆ:
ಅದೇ ರೀತಿ ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ಎಲ್ಲೆಲ್ಲಿ ಗೊಂದಲ ಇದೆಯೋ ಆ ಜಿಲ್ಲೆಗಳಲ್ಲಿ ಮತ್ತು ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಎರಡೂ ಇರುವ ಭೂಮಿಯ ಜಂಟಿ ಸರ್ವೆ ನಡೆಸಲು ಉಳಿದಂತೆ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ಮುಂದೆ ಯಾವುದೇ ಲೋಪದೋಷಕ್ಕೆ ಆಸ್ಪದ ಇಲ್ಲದಂತೆ ಪರಿಭಾವಿತ ಅರಣ್ಯದ ವಾಸ್ತವ ವರದಿ ಸಲ್ಲಿಸಲು ಸೂಚಿಸುವ ಬಗ್ಗೆ ಚರ್ಚಿಸಲಾಯಿತು.
ತಂತ್ರಜ್ಞಾನದ ನೆರವು:
ಹೊಸದಾಗಿ ರಚಿಸಲಾಗುವ ತಜ್ಞರ ಸಮಿತಿಗೆ ಅರಣ್ಯ ಇಲಾಖೆ ಈಗಾಗಲೇ ಸಿದ್ಧಪಡಿಸಿರುವ ಅರಣ್ಯ ದತ್ತಾಂಶವನ್ನು ನೀಡಲು ಮತ್ತು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಜಿಐಎಸ್ ಮತ್ತು ದೂರಸಂವೇದಿ ನೆರವನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ(KSRSAC) ದಿಂದ ಪಡೆಯಲೂ ನಿರ್ಧರಿಸಲಾಯಿತು.
ಈ ಸಮಿತಿಯ ರಚನೆಯಿಂದ ಪರಿಭಾವಿತ ಮತ್ತು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಇರುವ ಗೊಂದಲ ಪರಿಹಾರವಾಗುವ ವಿಶ್ವಾಸವನ್ನು ಸಭೆ ವ್ಯಕ್ತಪಡಿಸಿತು.
ಸಭೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಮತ್ತು ಎರಡೂ ಇಲಾಖೆಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.
ಅ.27ರಂದು VA ನೇಮಕಾತಿ ಪರೀಕ್ಷೆ: ಎಲ್ಲಾ ಕೇಂದ್ರಗಳಲ್ಲೂ ಬಿಗಿ ಭದ್ರತೆಗೆ ಸಚಿವ ಕೃಷ್ಣಬೈರೇಗೌಡ ಸೂಚನೆ
Good News: ಜನರ ಮನೆ ಬಳಿಗೆ ‘ಆರೋಗ್ಯ ಸೇವೆ’ ಒದಗಿಸುವ ‘ಗೃಹ ಆರೋಗ್ಯ ಯೋಜನೆ’ಗೆ ಸಿಎಂ ಸಿದ್ಧರಾಮಯ್ಯ ಚಾಲನೆ