ಶಿವಮೊಗ್ಗ: ರಾಜ್ಯದಲ್ಲಿ ಹತ್ತಾರು, ನೂರಾರು ಕಲಾವಿದರ ನಡುವೆ ಅಪರೂಪದ ಡೊಳ್ಳು ಕಲಾವಿದ ಇವರು. ತಮ್ಮ ಜೀವನವನ್ನೇ ಡೊಳ್ಳು ಪ್ರದರ್ಶನಕ್ಕೆ ಮುಡುಪಾಗಿಟ್ಟಿರುವಂತ ಇವರು, ತಮ್ಮ ಕಲೆಯನ್ನು ಪ್ರದರ್ಶಿಸಿದ್ದು ಮಾತ್ರ ರಾಜ್ಯವಷ್ಟೇ ಅಲ್ಲ, ಹೊರ ರಾಜ್ಯ, ವಿದೇಶಗಳಲ್ಲಿ. ಮಾಜಿ ಸಿಎಂ ದಿವಂಗದ ಎಸ್ ಬಂಗಾರಪ್ಪ ಅವರ ಪ್ರೋತ್ಸಾಹಕ್ಕೆ ಹುರಿದುಂಬಿ ನೀಡಿದ್ದು ಮಾತ್ರ ನೂರಾರು ಡೊಳ್ಳು ಪ್ರದರ್ಶನ. ಆ ಕಲಾವಿದ ಯಾರು.? ಅಂತಹ ಸಾಧನೆ ಏನು ಎನ್ನುವ ಬಗ್ಗೆ ಮುಂದೆ ಓದಿ. ನೀವೇ ಶಾಕ್ ಆಗ್ತೀರಿ.
ಹೌದು.. ಕರುನಾಡಿನ ಕೀರ್ತಿಯನ್ನು ವಿದೇಶದಲ್ಲಿ ಮೊಳಗಿಸಿ, ಕನ್ನಡಮ್ಮನ ಸಂಸ್ಕೃತಿಯನ್ನು ಹೊರ ರಾಜ್ಯದವರು, ಪ್ರಪಂಚದ ಜನರೇ ಬೆರಗುಗೊಳಿಸುವಂತೆ ಡೊಳ್ಳಿನ ಮೂಲಕ ಪ್ರದರ್ಶನ ನೀಡಿದ ಅಪರೂಪದ ಕಲಾವಿದ ಅಂದ್ರೇ ಅದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣ್ಣೂರು ಗ್ರಾಮದ ಜಿ.ಸಿ ಮಂಜಪ್ಪ. ಡೊಳ್ಳೆಂದರೇ ಇವರು, ಇವರೆಂದರೇ ಡೊಳ್ಳು ಎನ್ನುವಷ್ಟು ಹೊಂದಿಕೊಂಡು, ಅದರಲ್ಲೇ ಪಳಗಿ, ತನ್ನ ಕಲಾ ಸಿರಿವಂತಿಕೆಯನ್ನು ಮೆರೆದ ಮೇರು ಕಲಾವಿದ ಜಿ.ಸಿ ಮಂಜಪ್ಪ.
ಯಾರಿವರು ಜಿ.ಸಿ ಮಂಜಪ್ಪ.?
ಶಿವಮೊಗ್ಗ ಜಿಲ್ಲೆ ಸಾಗರ ತಾ ಕಣ್ಣೂರು ಗ್ರಾಮದಲ್ಲಿ ದಿನಾಂಕ 04.06.1957ರಲ್ಲಿ ಜಿ.ಸಿ ಮಂಜಪ್ಪ ಜನನವಾಗುತ್ತೆ. ತಂದೆ ಘಟ್ಟದ ಚನ್ನಪ್ಪ, ತಾಯಿ ಸೀತಮ್ಮ ಪುತ್ರರಾಗಿ ಜನಿಸಿದಂತ ಇವರು, ದ್ವಿತೀಯ ಪಿಯುಸಿ ಮುಗಿಸಿ, ವ್ಯವಸಾಯವನ್ನ ತಮ್ಮ ತಂದೆಯ ಜೊತೆಗೂಡಿ ಮೈಗೂಡಿಸಿಕೊಂಡವರು. ಇವರು, ಮೂಲತಃ ದಕ್ಷಿಣ ಕನ್ನಡದವರು. ಚಿಕ್ಕಂದಿನಿಂದಲೂ ಡೊಳ್ಳು ಕುಣಿತ ಕಲೆಯ ಬಗ್ಗೆ ಎಲ್ಲಿಲ್ಲದ ಆಸಕ್ತಿ ಹೊಂದಿದ್ದಂತ ಇವರು, ಈ ಕಲೆಗೆ ಆಕರ್ಷಿತನಾಗಿ 1971ರಲ್ಲಿ ಗುರುಗಳಾದ ವಡ್ಡರ ರಂಗಪ್ಪ ಇವರಲ್ಲಿ ತರಬೇತಿ ಪಡೆಯುತ್ತಾರೆ. ಆ ಬಳಿಕ 1974 ರಲ್ಲಿ ನಮ್ಮೂರಿನ 15 ಜನ ಯುವಕರನ್ನು ಕಟ್ಟಿ, ತಾವೇ ಸ್ವತಃ ಡೊಳ್ಳನ್ನು ತಯಾರಿಸಿ ಕೊಟ್ಟು ಹಾಗೂ ಅವರಿಗೆ ತರಬೇಡಿ ನೀಡಿ, ಆ ಕಲಾ ತಂಡದ ಮೂಲಕ, ಕಲಾ ಸೇವೆಗೈದ ಕಲಾಸ್ನೇಹ ಜೀವಿ.
1982ರಲ್ಲಿ ಹಾಗೂ 1986 ಮತ್ತು 1996 ರಲ್ಲಿ ರಾಜ್ಯಮಟ್ಟದ ಯುವಜನಮೇಳದ ಡೊಳ್ಳಿನ ಸ್ಪರ್ಧೆಯಲ್ಲಿ ಭಾಗಿಯಾದಂತ ಈ ತಂಡಕ್ಕೆ 3 ಬಾರಿ ಪ್ರಥಮ ಸ್ಥಾನ ಪಡೆದಿದೆ. 1986ರಿಂದ ಆಕಾಶವಾಣಿ ಭದ್ರಾವತಿ ಕೇಂದ್ರದಲ್ಲಿ ಡೊಳ್ಳಿನ ಪದದ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಹೊರ ರಾಜ್ಯದಲ್ಲಿ ಡೊಳ್ಳು ಕಟ್ಟಿ ಕುಣಿದ ಕಲಾಜೀವಿ ಜಿ.ಸಿ ಮಂಜಪ್ಪ
ದೆಹಲಿಯಲ್ಲಿ 6 ಬಾರಿ, ನಾಗಪುರದಲ್ಲಿ 2 ಬಾರಿ, ಮಧ್ಯಪ್ರದೇಶದಲ್ಲಿ 7 ಬಾರಿ, ಗುಜರಾತಿನಲ್ಲಿ 2 ಬಾರಿ, ಒರಿಸ್ಸಾದಲ್ಲಿ 1 ಬಾರಿ, ಕಲ್ಕತ್ತಾದಲ್ಲಿ 2 ಬಾರಿ, ಉದಯಪುರದಲ್ಲಿ 2 ಬಾರಿ, ಮುಂಬೈನಲ್ಲಿ 1 ಬಾರಿ, ಮದ್ರಾಸ್ನಲ್ಲಿ 1 ಬಾರಿ, ಮೈಸೂರು ದಸರಾ ಮೆರವಣಿಗೆಯಲ್ಲಿ 5 ಬಾರಿ, ಹಂಪಿ ಉತ್ಸವದಲ್ಲಿ 3 ಬಾರಿ ಡೊಳ್ಳು ಕುಣಿತದ ಕಾರ್ಯಕ್ರಮ ನೀಡಿದ್ದಾರೆ. 1997ರ ದಸರಾ ಮೆರವಣಿಗೆಯಲ್ಲಿ ಇವರ ಡೊಳ್ಳಿನ ತಂಡಕ್ಕೆ ಪ್ರಥಮ ಸ್ಥಾನ ಬಂದಿರುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗಯ ಜೊತೆಗೆ ಕೈಜೋಡಿಸಿಯೂ ತಮ್ಮ ಡೊಳ್ಳು ಪ್ರದರ್ಶನ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಹಾಗೂ ಶಿಕಾರಿಪುರ ತಾಲೂಕಿನ 6 ಯುವಕ ಸಂಘದ 160ಕ್ಕೂ ಹೆಚ್ಚಿನ ಯುವಕರಿಗೆ ಡೊಳ್ಳಿನ ತರಬೇತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. 1998 ರಿಂದ ಜಿಲ್ಲಾ ಯುವಜನ ಮೇಳ ಹಾಗೂ ತಾಲ್ಲೂಕು ಯುವಜನ ಮೇಳದಲ್ಲಿ ಡೊಳ್ಳಿನ ಸ್ಪರ್ಧೆಗೆ ತೀರ್ಪುಗಾರವಾಗಿ ಕಾರ್ಯನಿರ್ವಹಿಸಿದ್ದಾರೆ. ಮೂರು ಬಾರಿ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಮಟ್ಟದ ಜನಪದ ಸಮ್ಮೇಳನದಲ್ಲಿ ಹಾಗೂ ಒಂದು ಬಾರಿ ತಾಲ್ಲೂಕು ಮಟ್ಟದ ಜನಪದ ಸಮ್ಮೇಳನದಲ್ಲಿ ಇವರ ಕಲಾ ಸೇವೆಗೆ ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರ ಡೊಳ್ಳು ಕುಣಿತಕ್ಕೆ ಮನಸೋತಂತೆ ಶಿವಮೊಗ್ಗ ಜಿಲ್ಲೆ 6 ತಾಲೂಕಿನ ಸಂಬಂಧಪಟ್ಟ ಇಲಾಖೆಯವರು ಹಾಗೂ 40 ಕ್ಕೂ ಹೆಚ್ಚನ ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಕಲಾರತ್ನ ಎಂಬ ಬಿರುದು ಹಾಗೂ ಜನಪದ ಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿ ಪ್ರೋತ್ಸಾಹಿಸಿವೆ. ದಿನಾಂಕ 20-03-2021ರಂದು ಆನಂದಪುರದಲ್ಲಿ ನಡೆದ ಸಾಗರ ತಾಲ್ಲೂಕು ಮಟ್ಟದ 2ನೇ ಜಾನಪದ ಸಮ್ಮೇಳನದ ಅಧ್ಯಕ್ಷನಾಗಿದ್ದರು. ದಿನಾಂಕ 08-05-2022 ರಂದು ಭದ್ರಾವತಿ ತಾಲೂಕು ಗೋಣಿಬೀಡುವಿನಲ್ಲಿ ನಡೆದಂತಹ ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2019 ಸಾಲಿನ ವಾರ್ಷಿಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಬೆಂಗಳೂರು ಜಾನಪದ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗಿದೆ.
ವಿದೇಶದಲ್ಲೂ ಕರ್ನಾಟಕದ ಡೊಳ್ಳಿನ ಪ್ರದರ್ಶನ, ಬೆರಗಾದ ಫಾರಿನರ್ಸ್
1987ರಲ್ಲಿ ರಷ್ಯಾದಲ್ಲಿ ನಡೆದ ಭಾರತೋತ್ಸವ ಕಾರ್ಯಕ್ರಮದಲ್ಲಿ 3 ತಿಂಗಳುಗಳ ಕಾಲ 250ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನೀಡಿದ್ದಾರೆ. ಪ್ರಥಮ ವಿಶ್ವಕನ್ನಡ ಸಮ್ಮೇಳನ, ಕರ್ನಾಟಕೋತ್ಸವ ದೆಹಲಿ ಹಾಗೂ ಭುವನೇಶ್ವರದಲ್ಲಿ 1988 ರಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಐದು ಬಾರಿ ಅಖಿಲ ಭಾರತ ಜನಪದ ಸಮ್ಮೇಳನ, 2 ಬಾರಿ ರಾಜ್ಯ ಮಟ್ಟದ ಜಾನಪದ ಕಲಾಮೇಳದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇವರ ಡೊಳ್ಳು ಕುಣಿತದ ಪ್ರದರ್ಶನ ಕಂಡಂತ ದೇಶಿಗರು, ವಿದೇಶಿಗರು ಬೆಕ್ಕಸ ಬೆರಗಾಗಿದ್ದಾರೆ.
ಜಿ.ಸಿ ಮಂಜಪ್ಪಗೆ ಈ ಬಾರಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ?
ಸತತ ಐದು ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರೂ ಸರ್ಕಾರ ಮಾತ್ರ ಯಾಕೋ ಜಿ.ಸಿ ಮಂಜಪ್ಪ ಅವರಿಗೆ ಕೃಪೆ ತೋರಿದಂತಿಲ್ಲ. ಈಗ ಮತ್ತೆ ಅರ್ಜಿ ಹಾಕಿದ್ದಾರೆ. ಇದು ನನ್ನ ಕೊನೆಯ ಪ್ರಯತ್ನ. ಮತ್ತೆ ಅರ್ಜಿ ಹಾಕುವುದಿಲ್ಲ ಎಂಬುದು ಜಿ.ಸಿ ಮಂಜಪ್ಪ ಮಾತು. ಈ ಅತ್ಯದ್ಭುತ ಡೊಳ್ಳಿನ ಕಲಾವಿದನಿಗೆ ಈ ಬಾರಿಯಾದರೂ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ.? ಎಂಬುದನ್ನು ಕಾದು ನೋಡಬೇಕಿದೆ.
ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ 2024-25ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆ
ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣದಲ್ಲಿ ಸಂಜೆ 6 ಗಂಟೆಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ 2024-25ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದವರು ಸಲ್ಲಿಸಿರುವಂತ ಅರ್ಜಿಯ ಬಗ್ಗೆ ಪರಿಶೀಲನೆ ನಡೆಯಲಿದೆ.
ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಭೆಯಲ್ಲಿ ರಾಜ್ಯದ ಸಾಂಸ್ಕೃತಿಕ ಸೊಬಗಿನ ಡೊಳ್ಳು ಕುಣಿತವನ್ನು ವಿದೇಶಗಳಲ್ಲೂ ಸಾರಿದಂತ ಜಿ.ಸಿ ಮಂಜಪ್ಪ ಅವರ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅತ್ಯುನ್ನತ ಸೇವೆಯನ್ನು ಡೊಳ್ಳು ಕಲಾ ಪ್ರದರ್ಶನದಲ್ಲಿ ನೀಡಿರುವಂತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣ್ಣೂರಿನ ಜಿ.ಸಿ ಮಂಜಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆಯೂ ಸಮಿತಿಯವರ ಶಿಫಾರಸ್ಸು ಪರಿಗಣಿಸಿ, ಒಪ್ಪಿಗೆ ಸೂಚಿಸಲಿದ್ದಾರೆ ಎನ್ನಲಾಗುತ್ತಿದೆ.
ಅದೇನೇ ಆಗಲೀ, ಸಿಎಂ ಸಿದ್ಧರಾಮಯ್ಯ, ಸಚಿವ ಶಿವರಾಜ ತಂಡರಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು, ಸದಸ್ಯರು ಈ ಎಲೆ ಮರೆಯ ಪ್ರತಿಭೆಯನ್ನು ಗುರುತಿಸಲಿ. 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಖ್ಯಾತ ಡೊಳ್ಳು ಕಲಾವಿದ ಜಿ.ಸಿ ಮಂಜಪ್ಪ ಅವರಿಗೆ ಸರ್ಕಾರ ನೀಡಲಿ ಎಂಬುದಾಗಿ ಆಶಿಸೋಣ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
GOOD NEWS : ರಾಜ್ಯದ ಬೀಚ್ ಗಳಲ್ಲೂ ಗೋವಾ ಮಾದರಿಯಲ್ಲಿ ‘ಮದ್ಯ’ ಮಾರಾಟಕ್ಕೆ ಪ್ರವಾಸೋದ್ಯಮ ಇಲಾಖೆ ಚಿಂತನೆ!