ಶಿವಮೊಗ್ಗ: ಎಸ್ ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವಂತ ಬಂಗಾರ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾಹಿತಿ ಕುಂ.ವೀರಭದ್ರಪ್ಪ ಸೇರಿದಂತೆ ಮೂವರು ಸಾಧಕರಿಗೆ ಈ ಪ್ರಶಸ್ತಿಯ ಗರಿಮೆ ಸಂದಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಎಸ್ ಬಂಗಾರಪ್ಪ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವಿ ನಾಗರಾಜ ಮೂರ್ತಿ ಅವರು ಮಾಹಿತಿ ಹಂಚಿಕೊಂಡಿದ್ದು, ಬಂಗಾರಪ್ಪ ಅವರನ್ನು ಬಿಟ್ಟು ಕರ್ನಾಟಕ ರಾಜಕೀಯ ಚರಿತ್ರೆಯನ್ನು ಊಹಿಸಲು ಸಾಧ್ಯವಿಲ್ಲ, ಅಂತಹ ಚರಿತ್ರೆ ಕರ್ನಾಟಕ ರಾಜಕೀಯ ಚರಿತ್ರೆ ಆಗುವುದೂ ಇಲ್ಲ. ಈ ನಾಡಿನ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಬಂಗಾರಪ್ಪನವರು ಕರ್ನಾಟಕ ಕಂಡ ಬಹುದೊಡ್ಡ ಸಮಾಜವಾದಿ ಚಿಂತಕರು ಮಾತ್ರವಲ್ಲ, ಸಾಂಸ್ಕೃತಿಕ ವಕ್ತಾರರು ಕೂಡ. ಮುಖ್ಯಮಂತ್ರಿಯಾಗಿ ಅವರು ರೂಪಿಸಿದ ನೂರಾರು ಯೋಜನೆಗಳು ಇಂದಿಗೂ ರಾಷ್ಟ್ರಕ್ಕೆ ಮಾದರಿಯಾಗಿವೆ. ಇಂದು ಬಂಗಾರಪ್ಪ ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ, ಅವರು ಬಿಟ್ಟು ಹೋದ ತತ್ವಾದರ್ಶಗಳು ಸದಾ ನಮ್ಮೊಂದಿಗಿವೆ ಎಂದಿದ್ದಾರೆ.
ಪ್ರತಿವರ್ಷ ಬಂಗಾರಪ್ಪ ವಿಚಾರ ವೇದಿಕೆ ಮತ್ತು ಬಂಗಾರಪ್ಪ ಪ್ರತಿಷ್ಠಾನ ಸಂಯುಕ್ತವಾಗಿ ಅವರ ಜನ್ಮ ದಿನಾಚರಣೆಯನ್ನು ಆಯೋಜಿಸುತ್ತಿದೆ. ವಿಚಾರ ಸಂಕಿರಣ, ಬೃಹತ್ ಸಮಾರಂಭದ ಜೊತೆಗೆ ಈ ನಾಡಿನ ಅನನ್ಯ ಚೇತನಗಳಿಗೆ ಬಂಗಾರಪ್ಪ ಅವರ ಹೆಸರಿನಲ್ಲಿ “ಬಂಗಾರ” ಪ್ರಶಸ್ತಿ ನೀಡುತ್ತಿದೆ. ಒಂದು ಲಕ್ಷ ರೂಪಾಯಿ ನಗದು ಮತ್ತು ತಾಮ್ರ ಫಲಕದೊಂದಿಗೆ ಪ್ರಶಸ್ತಿ ಪುರಸ್ಕೃತರವನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಮಾಜ ಸೇವಾ ಕ್ಷೇತ್ರದ ಸಾಧಕಿ ಸುಮಂಗಲಿ ಸೇವಾಶ್ರಮದ ಎಚ್.ಜಿ. ಸುಶೀಲಮ್ಮ ಅವರಿಗೆ “ಸೇವಾ ಬಂಗಾರ” ಪ್ರಶಸ್ತಿ ನೀಡಲಾಗುತ್ತಿದೆ. 2024ರ ಸಾಲಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ “ಸಾಹಿತ್ಯ ಬಂಗಾರ” ಪ್ರಶಸ್ತಿ ನೀಡಲಾಗುತ್ತಿದೆ. ರಂಗಭೂಮಿಯಲ್ಲಿನ ಸೇವೆಗಾಗಿ ಗ್ರಾಮೀಣ ರಂಗಭೂಮಿಯ ಪೌರಾಣಿಕ ನಾಟಕದ ಕಲಾವಿದೆ ಪ್ರತಿಭಾ ನಾರಾಯಣ್ ಅವರಿಗೆ “ಕಲಾಬಂಗಾರ” ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮವನ್ನು ಬಂಗಾರಪ್ಪನವರ ಹುಟ್ಟುಹಬ್ಬದ ದಿನವಾದ 26-10-2024ನೇ ಶನಿವಾರದಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಆಯೋಜಿಸಲಾಗಿದೆ.
ಗೃಹಮಂತ್ರಿಗಳಾದ ಡಾ. ಜಿ.ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಚಿವ ಮಧುಬಂಗಾರಪ್ಪ ಮುಖ್ಯ ಅತಿಥಿಗಳಾಗಿರುತ್ತಾರೆ. ವೇದಿಕೆ ಅಧ್ಯಕ್ಷ ವೇಣುಗೋಪಾಲ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING : ಚನ್ನಪಟ್ಟಣಕ್ಕೆ ಡಿಕೆ ಸುರೇಶ್ ಸ್ಪರ್ಧೆ ಖಚಿತ : ಸುಳಿವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್