ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಬೈರತಿ ಸುರೇಶ್ ಅವರು ಮಹಿಳೆಯರ ಮಾನಹಾನಿ ಮಾಡುವಂಥ ಹೇಳಿಕೆ ನೀಡಿದ್ದನ್ನು ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸುರೇಶ್ ಅವರ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಸಿದ್ಧ ಎಂದು ಅವರು ಎಚ್ಚರಿಸಿದ್ದಾರೆ.
ಸಚಿವ ಸ್ಥಾನದಲ್ಲಿರುವ ಬೈರತಿ ಸುರೇಶ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನಾನು ಶಿವಮೊಗ್ಗ ಜಿಲ್ಲೆಯವಳು; ಯಡಿಯೂರಪ್ಪಜೀ, ಮೈತ್ರಾದೇವಿ, ಶೋಭಾ ಕರಂದ್ಲಾಜೆ ಅವರನ್ನು ಹತ್ತಿರದಿಂದ ಬಲ್ಲವಳು. ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದನ್ನು ಖಂಡಿಸುತ್ತೇನೆ. ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಒಬ್ಬ ಸಚಿವನಾಗಿ ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಟ್ಟು ಬೇರೆಯವರ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಮಹಿಳೆಯರ ತೇಜೋವಧೆ ಮಾಡುವುದನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿದ್ದಾರೆ.
ತಮ್ಮ ಮೇಲೆ ಅಪವಾದ ಬಂದ ತಕ್ಷಣ ಮಹಿಳೆಯರ ಗುಣನಡತೆ ಕುರಿತು ಆರೋಪ ಮಾಡುವುದು ಇವರಿಗೆ ಅಭ್ಯಾಸವಾಗಿದೆ. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವವರ ಗುಣನಡತೆ ಬಗ್ಗೆ ಮಾತನಾಡುವುದು ಅಕ್ಷಮ್ಯ. ಮೈತ್ರಾದೇವಿ ಅವರು ತಾಯಿ ಸಮಾನ. ಅವರು ಸಾವನ್ನಪ್ಪಿ ಹಲವಾರು ವರ್ಷಗಳು ಕಳೆದಿದ್ದು, ಈಗ ಅದರ ಕುರಿತು ಮಾತನಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಅವರು ಮೃತಪಡುವ ವೇಳೆ ಬೈರತಿ ಸುರೇಶ್ ಅವರು ಎಲ್ಲಿದ್ದರು? ಯಾವ ಹುದ್ದೆಯಲ್ಲಿದ್ದರು ಎಂದು ಪ್ರಶ್ನಿಸಿದ್ದು, ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ಮಹಿಳೆಯರು ನಿಮ್ಮ ತಪ್ಪುಗಳನ್ನು ತೋರಿಸುವುದು ಅಪರಾಧವೇ? ಹಾಗೆ ಹೇಳಿಕೆ ಕೊಟ್ಟು ಆಗ್ರಹಿಸಿದರೆ ಅವರ ಗುಣನಡತೆಯ ಕುರಿತು ಮಾತನಾಡುವುದು ಎಷ್ಟು ಸರಿ ಎಂದೂ ಅವರು ಪ್ರಶ್ನಿಸಿದ್ದಾರೆ.
ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ, ಡಿಕೆಶಿಯನ್ನು ಭೇಟಿಯಾಗಿದ್ದಾರೆ: HDK ಸ್ಪೋಟಕ ಹೇಳಿಕೆ
Rain Alert : ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆ : ಈ 13 ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ