ಮಂಡ್ಯ: ಜೆಡಿಎಸ್ ಮತ್ತು ಬಿಜೆಪಿ ನಡುವೆ ಒಡಕು ಉಂಟು ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಕೆಲವರು ಚನ್ನಪಟ್ಟಣದಲ್ಲಿ ಷಡ್ಯಂತ್ರ ರೂಪಿಸಿದ್ದಾರೆ. ಆದರೆ, ಅವರ ಆಸೆ ಈಡೇರುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ದೂರಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅನ್ನು ಕಟ್ಟಿ ಹಾಕಿದ್ದಾರೆ. ಅವರ ಆಶಯದಂತೆ ನಾವು ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ತಂತ್ರಗಾರಿಕೆ ಫಲಿಸುವುದಿಲ್ಲ ಎಂದರು.
ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಆಗಸ್ಟ್ 11ರಂದು ಭತ್ತ ನಾಟಿ ಮಾಡಿದ್ದ ಜಾಗಕ್ಕೆ ಭೇಟಿ ನೀಡಿ ಫಸಲು ವೀಕ್ಷಿಸಿದ ಬಳಿಕ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸುತ್ತಾರೆ ಎನ್ನುವ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಕುಟುಂಬದವರನ್ನೆ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ಹೀಗಾಗಿ ನಮ್ಮ ಮಿತ್ರ ಪಕ್ಷವೂ ಔದಾರ್ಯ ತೋರಲಿ ಎನ್ನುವ ಆಶಯ ನನ್ನದು. ಅವರು ಔದಾರ್ಯ ತೋರುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದರು.
ಯೋಗೇಶ್ವರ್ ಅವರು ನಾಮಪತ್ರ ಸಲ್ಲಿಸುವ ವಿಚಾರ ನನ್ನೊಂದಿಗೆ ಚರ್ಚೆಯಾಗಿಲ್ಲ. ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನ ಮುಂದೆ ಆ ಕುರಿತು ಪ್ರಸ್ತಾಪವೂ ಬಂದಿಲ್ಲ . ಮಾಧ್ಯಮಗಳಲ್ಲಿ ಆ ಕುರಿತು ವರದಿ ಬಂದಿರುವುದನ್ನು ನೋಡಿದ್ದೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಾಯಕರು ಯೋಗೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆನ್ನುವ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಅವರು ಪಕ್ಷೇತರ ಅಭ್ಯರ್ಥಿಯಾಗುತ್ತಾರೆ ಎಂಬ ವಿಚಾರ ಕಳೆದ ಹದಿನೈದು ದಿನದಿಂದ ಹರಿದಾಡುತ್ತಿದೆ. ಕಾಂಗ್ರೆಸ್ ನವರು ತಮ್ಮ ಪಕ್ಷಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಲು ಕಾಯುತ್ತಿದ್ದಾರೆ. ನಮ್ಮ ನಡುವೆ ಒಡಕು ತರುವುದು ಅವರ ಉದ್ದೇಶ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಭಕಪಕ್ಷಿಯಂತೆ ಕಾಯುತ್ತಿದೆ
NDA ಮೈತ್ರಿಕೂಟದಲ್ಲಿ ಒಡಕು ಮೂಡಲಿ ಎಂದು ಕಾಂಗ್ರೆಸ್ ಭಕಪಕ್ಷಿಯಂತೆ ಕಾಯುತ್ತಿದೆ. ಚನ್ನಪಟ್ಟಣದಲ್ಲಿ ಸ್ವತಂತ್ರವಾಗಿ ಗೆಲ್ಲಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಒಡಕು ತರಲು ಶ್ರಮ ಹಾಕುತ್ತಿದ್ದಾರೆ. ಅಂತಹ ಅವಕಾಶ ಬರಬಾರದೆಂದು ನಾನು ತಾಳ್ಮೆ ವಹಿಸಿದ್ದೇನೆ. ಇನ್ನೂ ನಾಲ್ಕು ದಿನ ಇದೆ, ಕೂತು ಚರ್ಚೆ ಮಾಡ್ತೇವೆ. ಮಂಗಳವಾರ ಅಥವಾ ಬುಧವಾರ ಫೈನಲ್ ಆಗಲಿದೆ ಎಂದರು ಕುಮಾರಸ್ವಾಮಿ ಅವರು.
ದೆಹಲಿ ಮಟ್ಟದಲ್ಲಿ ಚನ್ನಪಟ್ಟಣ ಟಿಕೆಟ್ ಸಮಸ್ಯೆ ಇಲ್ಲ, ಕಳೆದ ಎರಡು ಬಾರಿ ಚನ್ನಪಟ್ಟಣ ಕ್ಷೇತ್ರವನ್ನು ನಾನು ಪ್ರತಿನಿಧಿಸಿದ್ದೇನೆ ಎಂದರು ಅವರು.
ಬೆಂ.ಗ್ರಾಮಾಂತರದಲ್ಲಿ ನಮ್ಮ ಕುಟುಂಬದವರೇ ಬಿಜೆಪಿ ಅಭ್ಯರ್ಥಿ ಆಗಿದ್ದರು
ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಅನ್ನೋದು ದೆಹಲಿ ಮಟ್ಟದಲ್ಲಿ ಇದೆ. ಮೂರು ಉಪ ಚುನಾವಣೆ ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಪಡೆ ಇದೆ. ಗೆಲ್ಲುವ ದೃಷ್ಟಿಯಿಂದ ಬಿಜೆಪಿಗೆ ಬೆಂ.ಗ್ರಾಮಾಂತರ ಕ್ಷೇತ್ರ ಬಿಟ್ಟು ಕೊಟ್ಟೆವು. ನಮ್ಮ ಕುಟುಂಬದವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ಆ ರೀತಿ ಬಿಜೆಪಿ ನಾಯಕರು ಔದಾರ್ಯ ತೋರಲಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಶಾಸಕ ಮಂಜುನಾಥ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಇನ್ನಿತರರು ಸಚಿವರ ಜತೆಯಲ್ಲಿ ಇದ್ದರು.
SHOCKING NEWS: ಗಾಝಾದ ಯಜಿದಿ ಒತ್ತೆಯಾಳುಗಳಿಗೆ ‘ಕೊಂದ ಶಿಶು’ಗಳನ್ನು ಬೇಯಿಸಿ, ತಿನ್ನಿಸಿದ ‘ISIS’
Rain Alert : ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆ : ಈ 13 ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ