ಬೆಂಗಳೂರು: ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಮ್ಮೆಲ್ಲರ ನೆಚ್ಚಿನ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಅವರಿಗೆ ಅಭಿನಂದನೆ. ಸಲ್ಲಿಸುತ್ತೇನೆ ಎಂದು ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿದ ಕೇಂದ್ರ ನಾಯಕರಿಗೆ, ರಾಜ್ಯದ ನಾಯಕರಾದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಪ್ರಮುಖವಾಗಿ ನಮ್ಮ ತಂದೆ ತಾಯಿಯ ಆಶೀರ್ವಾದದ ಫಲದಿಂದ ನನಗೆ ಈ ಅವಕಾಶ ಸಿಕ್ಕಿದೆ. ನಮ್ಮ ತಂದೆ ಶಿಗ್ಗಾವಿ ಸವಣೂರಿನಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು, ಅಲ್ಲಿನ ಜನರ ಅಪೇಕ್ಷೆಯಂತೆ ನಮ್ಮ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಿದ್ದಾರೆ. ನಮ್ಮ ತಂದೆಯವರು ಮಾಡಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ. ಶಿಗ್ಗಾವಿ ಸವಣೂರಿನ ಜನತೆಯ ಕಷ್ಟ ಸುಖದಲ್ಲಿ ನಾನು ಸದಾಕಾಲ ಇರುತ್ತೇನೆ ಎಂದು ಹೇಳಿದರು.
ತಮಗೆ ಯಾವ ಮಾನದಂಡದಲ್ಲಿ ಟಿಕೆಟ್ ನೀಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಟಿಕೆಟ್ ಕೇಳಿರಲಿಲ್ಲ, ವರಿಷ್ಠರು ಲೆಕ್ಕಾಚಾರ ಮಾಡಿ ಒಂದು ತೀರ್ಮಾನ ಮಾಡಿದ್ದಾರೆ ಅವರ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ.
ನಾನು 2018 ರಿಂದ ತಂದೆಯ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಮನೆ ಮನೆಗೆ ತೆರಳಿ ತಂದೆಯ ಪರವಾಗಿ ಪ್ರಚಾರ ಮಾಡಿದ್ದೇನೆ. ಎಂಪಿ ಚುನಾವಣೆಯಲ್ಲಿ ಸಂಪೂರ್ಣ ಕ್ಷೇತ್ರ ತಿರುಗಾಡಿ ತಂದೆಯ ಪರವಾಗಿ ಕೆಲಸ ಮಾಡಿದ್ದೇನೆ. ಶಿಗ್ಗಾವಿ ಸವಣೂರು ಕ್ಷೇತ್ರದ ಎಲ್ಲ ಜನರೊಂದಿಗೆ ಸಂಪರ್ಕ ಇದೆ. ತಂದೆಯವರು ಸಚಿವರಿದ್ದಾಗ ಸಿಎಂ ಇದ್ದಾಗ ನಾನು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಎಂದರು.
ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರೆಲ್ಲರೂ ನಮ್ಮೊಂದಿಗಿದ್ದಾರೆ. ಎಲ್ಲರೂ ಸೇರಿಯೇ ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತೇವೆ. ಯಾವುದೇ ಉಪ ಚುನಾವಣೆ ಎದುರಿಸುವುದು ಕಷ್ಟಾನೇ, ಆದರೆ ನಮ್ಮ ತಂದೆಯವರು ಮಾಡಿದ ಕೆಲಸ ಹಾಗೂ ನಾನು ತಂದೆಯವರ ಜೊತೆಗೆ ಕೆಲಸ ಮಾಡಿದ್ದರಿಂದ ಶಿಗ್ಗಾವಿ ಸವಣೂರಿನ ಜನರು ನನಗೆ ಆಶೀರ್ವಾದ ಮಾಡುವ ವಿಶ್ವಾಸ ನನಗಿದೆ ಎಂದು ಹೇಳಿದರು.