ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಬೆಂಗಳೂರಿನ ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ಹೆಲ್ತ್ ಟೂರಿಸಮ್ ಗೆ ಉತ್ತೇಜನ ನೀಡವತ್ರ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಇಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಸಚಿವರು, ಹೆಲ್ತ್ ಟೂರಿಸಮ್ ಬೆಳೆಸಲು ಸರ್ಕಾರದಿಂದ ಆಗಬೇಕಾಗಿರುವ ಕಾರ್ಯಗಳ ಕುರಿತು ಖಾಸಗಿ ವಲಯದ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಹೊರ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರಿಗೆ ಜನರು ಬರುತ್ತಾರೆ. ಇಲ್ಲಿಗೆ ಬರುವ ಜನರಿಗೆ ಇಲ್ಲಿಯ ಅತ್ಯಾದುನಿಕ ಆರೋಗ್ಯ ಸೌಲಭ್ಯಗಳು, ಹಾಗೂ ಚಿಕಿತ್ಸೆ ಬಗ್ಗೆ ಒಂದು ಭರವಸೆ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳ ಗುಣಮಟ್ಟದ ಚಿಕಿತ್ಸೆ ಕುರಿತು ಸರ್ಕಾರ ಸರ್ಟಿಫೈ ಮಾಡುವ ಕ್ರಮಗಳು ಆಗಬೇಕಿದೆ. ಸರ್ಕಾರದಿಂದ ಈ ರೀತಿಯ ಕ್ರಮಗಳನ್ನ ತೆಗೆದುಕೊಂಡಾಗ ಜನರಿಗೆ ವಿಶ್ವಾಸ ಮೂಡಲಿದೆ. ಇದರಿಂದ ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಿಮ್ ಬೆಳೆಯುವುದರ ಜೊತೆಗೆ, ಐಟಿ ಸಿಟಿ ಬೆಂಗಳೂರು, ಹೆಲ್ತ್ ಸಿಟಿಯಾಗಿಯೂ ಹೆಸರು ಗಳಿಸಬಹುದು ಎಂದರು.
ಕೆಲವು ಗುಣಮಟ್ಟದ ಚಿಕಿತ್ಸೆಗಳನ್ನ ಪಡೆಯಲು ಮಾತ್ರ ಜನರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಬರುತ್ತಾರೆ. ಬಗಳೂರಿನಲ್ಲಿ ಉತ್ತಮ ಆಸ್ಪತ್ರೆಗಳಿವೆ. ಇಂದು ವಿದೇಶಗಳಲ್ಲಿ ತಜ್ಞ ವೈದ್ಯರ ಸಮಯಕ್ಕಾಗಿ ತಿಂಗಳು ಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಮ್ ಮೂಲಕ ವಿದೇಶಿಗರನ್ನ ಹೆಚ್ಚು ಆಕರ್ಷಿಸಬಹುದು. ಅಲ್ಲದೇ ಆರೋಗ್ಯ ಸೇವೆಗಳಿಗೆ ಬೆಂಗಳೂರಿಗೆ ಬರುವ ಜನರು ರಾಜ್ಯದ ಇತರ ಪ್ರವಾಸ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಇದರಿಂದ ರಾಜ್ಯದ ಪ್ರವಾಸೋದ್ಯಮ ಅಭಿವೃದ್ದಿಗೂ ಸಹಕಾರಿಯಾಗಲಿದೆ ಎಂದರು.
ಸಭೆಯಲ್ಲಿ ಮಣಿಪಾಲ್ ಆಸ್ಪತ್ರೆ, ನಾರಾಯಣ ಹೃದಯಾಲಾಯ, ಅಪೋಲೋ ಹೆಲ್ತ್ ಕೇರ್ ಸೇರಿದಂತೆ 50 ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.. ಸರ್ಕಾರದ ವತಿಯಿಂದ ಅಧಿಕೃತ ಪೊರ್ಟಲ್ ಒಂದನ್ನ ರಚಿಸಿ, ಆ ಮೂಲಕ ಖಾಸಗಿ ಆಸ್ಪತ್ರೆಗಳ ಗುಣಮಟ್ಟದ ಚಿಕಿತ್ಸೆಗಳ ಕುರಿತು ಸರ್ಕಾರವೇ ಕ್ರೆಡಿಟ್ ಪಾಯಿಂಟ್ಸ್ ಗಳನ್ನ ನೀಡಬಹುದು ಎಂದು ಸಭೆಯಲ್ಲಿ ಹಲವು ಖಾಸಗಿ ವಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಪ್ರತಿ ಚಿಕಿತ್ಸೆಗಳಿಗೆ ಎಷ್ಟು ದರ, ಹಾಗೂ ಗುಣಮಟ್ಟದ ಬಗ್ಗೆ ಸರ್ಕಾರವೇ ಸರ್ಟಿಫೈ ಮಾಡಲಿ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಹೆಲ್ತ್ ಟೂರಿಸಮ್ ಬಗ್ಗೆ ಮೊದಲ ಸುತ್ತಿನ ಸಭೆ ನಡೆಸಲಾಗುತ್ತೆ.. ಈ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯಲಿ.. ಮತ್ತೊಮ್ಮೆ ಸಭೆ ಸೇರಿ ನಿರ್ಣಗಳನ್ನ ಕೈಗೊಳ್ಳೋಣ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿದ್ದ ಆಹ್ವಾನಿತರಿಗೆ ಭರವಸೆ ನೀಡಿದರು
BREAKING : ‘ಮುಡಾ’ ಹಗರಣದಲ್ಲಿ ಸಿಎಂಗೆ ಮತ್ತೆ ಸಂಕಷ್ಟ : ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ‘ಭೂ’ ಅಕ್ರಮ ಆರೋಪ!
ಶೀಘ್ರವೇ ರಾಜ್ಯದ ‘2ನೇ ವಿಮಾನ ನಿಲ್ದಾಣ’ದ ಸ್ಥಳ ಅಂತಿಮ: ಸಚಿವ ಎಂ.ಬಿ ಪಾಟೀಲ್