ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ | ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಘೋಷಿಸಿದೆ.
ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾಗಿರುವ ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಸಂಖ್ಯಾ ವಿವರಗಳನ್ನು ಲಗತ್ತಿಸಿರುವ ಅನುಬಂಧ ದಲ್ಲಿ ತೋರಿಸಲಾಗಿದೆ.
ದಿನಾಂಕ 06-11-2024ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ದಿನಾಂಕ 12-11-2024 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ದಿನಾಂಕ 13-11-2024ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ದಿನಾಂಕ 15-11-2024ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ದಿನಾಂಕ 23-11-2024ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಮರು ಮತದಾನ ಅವಶ್ಯಕತೆ ಇದ್ದರೇ ದಿನಾಂಕ 25-11-2024ರಂದು ನಡೆಸಲು ನಿಗದಿ ಪಡಿಸಲಾಗಿದೆ. ದಿನಾಂಕ 26-11-2024ರಂದು ಬೆಳಿಗ್ಗೆ 8ರಿಂದ ಮತಏಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಲಾಗುತ್ತದೆ. ದಿನಾಂಕ 26-11-2024ರಂದು ಚುನಾವಣೆ ಮುಕ್ತಾಯಗೊಳ್ಳಲಿದೆ.
12ರ ಅಡಿಯಲ್ಲಿ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ 2ರಲ್ಲಿ ಹೊರಡಿಸತಕ್ಕದ್ದು ಹಾಗೂ ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು. ಪ್ರಕಟಿಸಿದ ಅಧಿಸೂಚನೆ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಕಛೇರಿಯ ಸೂಚನಾ ಫಲಕದ ಮೇಲೆ ಹಾಗೂ ಇನ್ನಿತರ ಮುಖ್ಯ ಸ್ಥಳಗಳಲ್ಲೂ ಸಹ ಪ್ರದರ್ಶಿಸತಕ್ಕದ್ದು ಹಾಗೂ ಆಯೋಗಕ್ಕೆ ಅಂದೇ ಇ-ಮೇಲ್ ಮುಖಾಂತರ ಕಳುಹಿಸುವುದು.
ಅಧಿಸೂಚನೆಯ ಪ್ರತಿಯನ್ನು ಅಂದೇ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು ಅದೇ ದಿನದಂದು ಚುನಾವಣಾಧಿಕಾರಿಗಳು ಪ್ರಪತ್ರ-3 ರಲ್ಲಿ ಚುನಾವಣಾ ನೋಟೀಸನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿ, ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು ಹಾಗೂ ಚುನಾವಣಾ ನೋಟೀಸಿನಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ಹೆಸರು, ಕ್ಷೇತ್ರದ ಹೆಸರು, ಸದಸ್ಯ ಸ್ಥಾನಗಳ ಸಂಖ್ಯೆ, ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚನೆಗಳನ್ನು ನೀಡತಕ್ಕದ್ದು.
ದಿನಾಂಕ: 09.11.2024 ರಂದು ಎರಡನೇ ಶನಿವಾರ ನೆಗೋಷಿಯೇಬಲ್ ಇನ್‌ಸ್ಟುಮೆಂಟ್ ಕಾಯ್ದೆಯಡಿಯಲ್ಲಿ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಸದರಿ ದಿನದಂದು ಯಾವುದೇ ನಾಮಪತ್ರವನ್ನು ಸ್ವೀಕರಿಸದಂತೆ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡುವುದು.
ಬೀದರ್ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಇ.ಸಿ.ಐ.ಎಲ್. ಹೈದರಾಬಾದ್ ರವರು ತಯಾರಿಸಿರುವ ಮಲ್ಟಿಚಾಯ್ ವಿದ್ಯುನ್ಮಾನ ಮತ ಯಂತ್ರದ (E.V.M.) ಮೂಲಕ ಚುನಾವಣೆ ನಡೆಸಲು ಆದೇಶಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ: 06.11.2024 ರಿಂದ ದಿನಾಂಕ: 26.11.2024 ರವರೆಗೆ ಜಾರಿಯಲ್ಲಿರುತ್ತದೆ.
ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ/ನಾಮಪತ್ರ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯಿತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ, ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.
ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇಲೆ ತಿಳಿಸಿರುವ ಅವಧಿಯವರೆಗೆ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.
ಪ್ರಕರಣ 308-ಎಸಿ ರಂತೆ ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು.
1. ಚುನಾವಣಾಧಿಕಾರಿಗಳು (ಆರ್.ಒ.) ಚುನಾವಣೆ ನಡೆಯುವ ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ವಿಡಿಯೋಗ್ರಾಫಿಕ್ ಚಿತ್ರೀಕರಣ ಮಾಡಿಸುವುದು.
2. ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ “ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲಿನ ಅವಧಿಯಲ್ಲಿ” ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ
ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ರಿಗೆ ಒಪ್ಪಿಸತಕ್ಕದ್ದು,
3. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟು ಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡತಕ್ಕದ್ದು
4. ಮೇಲ್ಕಂಡ ಪ್ರಕರಣದಂತೆ ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಸೂಕ್ತ ತಂಡವನ್ನು ರಚಿಸಿ ಕ್ರಮಗಳನ್ನು ಕೈಗೊಳ್ಳುವುದು.
ವಿಶೇಷ ಸೂಚನೆ :
1. ಈಗಾಗಲೇ ನೀಡಿರುವ ನಿರ್ದೇಶನಗಳಂತೆ, ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
ಸಹಾಯಕ
2. ಚುನಾವಣೆ ನಡೆಸಲಾಗುವ ಗ್ರಾಮ ಪಂಚಾಯಿತಿಗೆ ಚುನಾವಣಾಧಿಕಾರಿ ಹಾಗೂ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ತರಬೇತಿಯನ್ನು ಹಾಗೂ ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ ಹಾಗೂ ಸುತ್ತೋಲೆ/ನಿರ್ದೇಶನ ಪತ್ರಗಳ ಪ್ರತಿಯನ್ನು ನೀಡುವುದು.
3. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ: ಎಸ್‌ಇಸಿ 10 ಎಂಐಎಸ್‌ಸಿ 2016, ದಿನಾಂಕ: 29.06.2016 ಹಾಗೂ ತಿದ್ದುಪಡಿ ದಿನಾಂಕ: 06.07.2016 ರಂತೆ ಕ್ರಮ ವಹಿಸುವುದು.
4. ಚುನಾವಣೆ ನಡೆಸಲಾಗುತ್ತಿರುವ ಗ್ರಾಮ ಪಂಚಾಯಿತಿ ಸ್ಥಾನಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗಿ (ವೆಚ್ಚ ಬಾರದಂತೆ) ಪ್ರಕಟಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
5. ಕಾಲ ಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು.
6. ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ 248 ಇಜಿಪಿ 2015, ದಿನಾಂಕ: 19.03.2015 ರಂತೆ ಗ್ರಾಮ ಪಂಚಾಯಿತಿ ಚುನಾವಣೆಗಳ ಮತಪತ್ರದಲ್ಲಿ “NOTA” ಅವಕಾಶ ಇರುವುದಿಲ್ಲ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು