ಬೆಂಗಳೂರು; ಮಾರ್ಚ್ 2025ರಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳ ನೋಂದಣಿ ಮಾಹಿತಿಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ನಲ್ಲಿ ಅಪ್ ಲೋಡ್ ಮಾಡುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ದಿನಾಂಕ: 21-09-2023 ರನ್ವಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ವತಿಯಿಂದ 2023-24ನೇ ಸಾಲಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಪರೀಕ್ಷೆ-1, ಪರೀಕ್ಷೆ-2 ಮತ್ತು ಪರೀಕ್ಷೆ -3 ಎಂಬ ಹೆಸರಿನಲ್ಲಿ ನಡೆಸಲಾಗುತ್ತಿದೆ.
ಮಾರ್ಚ್-2025 ರಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆ – 1 ಕ್ಕೆ ಅರ್ಹ ಅಭ್ಯರ್ಥಿಗಳ ನೋಂದಣಿ ಮಾಹಿತಿಗಳನ್ನು ಮಂಡಲಿಯ ಜಾಲತಾಣದ (https://kseab.karnataka.gov.in)) ಶಾಲಾ ಲಾಗಿನ್ನಲ್ಲಿ ಪಡೆಯಲು ಯೋಜಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ (ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ ಪುನರಾವರ್ತಿತ ಶಾಲಾ ಹಾಗೂ ಖಾಸಗಿ ಅಭ್ಯರ್ಥಿಗಳು) ಮಾರ್ಚ್-2025 ರ ಎಸ್.ಎಸ್.ಎಲ್.ಸಿ. ಪರೀಕ್ಷೆ – 1 ನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ವಿವರಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡುವಂತೆ ಈ ಮೂಲಕ ಆದೇಶಿಸಿದೆ.
1) ಈ ನೋಂದಣಿ ಕಾರ್ಯಕ್ಕೆ ದಿನಾಂಕ: 18-10-2024 ರಿಂದ 11-11-2024 ರವರೆಗೆ ಮಾಹಿತಿಯನ್ನು ಅಪ್ಲೋಡ್ ಮಾಡಲು ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ.
2) ಮಾಹಿತಿಗಳನ್ನು ಅಪ್ಲೋಡ್ ಮಾಡಲು ಬಳಸಬೇಕಾದ ಫಾರಂನ್ನು ಮಂಡಲಿಯ ಜಾಲತಾಣ https://kseab.karnataka.gov.in ರಲ್ಲಿನ ಶಾಲಾ ಲಾಗಿನ್ ಮೂಲಕ ತಲುಪಬಹುದಾಗಿದೆ.
3) ಮುಖ್ಯಶಿಕ್ಷಕರು ಮಂಡಲಿಯ ಶಾಲಾ ಲಾಗಿನ್ನಲ್ಲಿ ಮಂಡಲಿಯ ವತಿಯಿಂದ ಈಗಾಗಲೇ ನೀಡಿರುವ Username and Password ಬಳಸಿ ಲಾಗಿನ್ ಆದ ಕೂಡಲೇ Password Update ಮಾಡಿಕೊಳ್ಳಲು Screen ತೆರೆದುಕೊಳ್ಳುತ್ತದೆ. Registered Mobile Numberಗೆ ಬರುವ OTP ನಮೂದಿಸಿ, ಹೊಸ Password update ಮಾಡಿಕೊಳ್ಳುವುದು. ಇದರ ನಂತರವೇ ನೋಂದಣಿ ಕಾರ್ಯ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ.
4) ಮಾರ್ಚ್-2025 ರ ಪರೀಕ್ಷೆ -1 ಕ್ಕೆ ಈ ಕೆಳಕಂಡ ಅಭ್ಯರ್ಥಿಗಳನ್ನು ನೋಂದಾಯಿಸಬೇಕಾಗಿರುತ್ತದೆ.
ಶಾಲಾ ವಿದ್ಯಾರ್ಥಿಗಳ (CCERF) ಪೂರ್ಣ ಮಾಹಿತಿ ಹಾಗೂ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಬೇಕು.
ಖಾಸಗಿ ವಿದ್ಯಾರ್ಥಿಗಳ (CCEPF) ಪೂರ್ಣ ಮಾಹಿತಿ ಹಾಗೂ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಬೇಕು.
ಮಾರ್ಚ್-2023ರ ಮುಖ್ಯ ಪರೀಕ್ಷೆಯಿಂದ 2024 ಪರೀಕ್ಷೆ-3 ರವರೆಗಿನ (CCERR /CCEPR) ಪುನರಾವರ್ತಿತ ಶಾಲಾ ಅಭ್ಯರ್ಥಿಗಳ ಹಾಗೂ ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನು ನಮೂದಿಸಿದರೆ ಡೇಟಾ Auto Fetch ಆಗುತ್ತದೆ. ಪೋಷಕರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಬೇಕು.
5) ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಶಾಲಾ ವಿದ್ಯಾರ್ಥಿಗಳ ಬಹುತೇಕ ಮಾಹಿತಿಗಳನ್ನು SATS ನ ಡೇಟಾಬೇಸ್ನಿಂದ ಪಡೆಯುತ್ತಿರುವುದರಿಂದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಪ್ರವರ್ಗ, ಧರ್ಮ, ಲಿಂಗ ಮತ್ತು ಮಾಧ್ಯಮ ಇವುಗಳಲ್ಲಿ ಯಾವುದೇ ತಿದ್ದುಪಡಿಗಳು ಇದ್ದಲ್ಲಿ ಮಂಡಲಿಯ ಜಾಲತಾಣದಲ್ಲಿ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಮೊದಲು SATS ಡೇಟಾಬೇಸ್ನಲ್ಲಿ ತಿದ್ದುಪಡಿ ಮಾಡಿ ನಂತರ ಮಂಡಲಿಯ ಶಾಲಾ ಲಾಗಿನ್ನಲ್ಲಿ ಪರೀಕ್ಷಾ ನೋಂದಣಿ ಮಾಡುವುದು.
6) ಆನ್ಲೈನ್ ನೋಂದಣಿ ಪ್ರಾರಂಭಿಸುವ ಮೊದಲು ಶಾಲೆಯ ಪ್ರತಿ ವಿದ್ಯಾರ್ಥಿಯ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಭಾವಚಿತ್ರ (20-80kb) ಹಾಗೂ ಸಹಿಯನ್ನು (20-50kb) jpeg format ನಲ್ಲಿ ಅವರ ಎಸ್.ಎ.ಟಿ.ಎಸ್. ಸಂಖ್ಯೆಯ ಅನುಕ್ರಮದಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು.
ಉದಾ:- ಅಭ್ಯರ್ಥಿಯ SATS ಸಂಖ್ಯೆಯು 012345678 ಆಗಿದ್ದಲ್ಲಿ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ P012345678 ಎಂದೂ, ಸಹಿಯನ್ನು ಸ್ಕ್ಯಾನ್ ಮಾಡಿ 5012345678 ಎಂದು soft copy ಗಳನ್ನು ಸೇವ್ ಮಾಡಿಟ್ಟುಕೊಳ್ಳುವುದು. ಇದೇ ರೀತಿ ಖಾಸಗಿ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಸಹಿಗಳನ್ನು ಆ ಅಭ್ಯರ್ಥಿಗಳ ಪೂರ್ಣ ಹೆಸರಿನೊಂದಿಗೆ ಸೇವ್ ಮಾಡಿಟ್ಟುಕೊಳ್ಳಬಹುದಾಗಿದೆ.
7) ಶಾಲಾ ವಿದ್ಯಾರ್ಥಿಗಳ (CCERF) ನೋಂದಣಿ ಪ್ರಾರಂಭಿಸುವ ಮೊದಲು ಶಾಲೆಯಲ್ಲಿ ಬೋಧಿಸಲಾಗುವ ಭಾಷಾ ಸಂಯೋಜನೆಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಶಾಲೆಯಲ್ಲಿ ಬೋಧಿಸಲ್ಪಡುತ್ತಿರುವ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಭಾಷಾ ಸಂಯೋಜನೆಗಳನ್ನು ಆಯ್ಕೆ ಮಾಡಿದ ನಂತರವಷ್ಟೇ ಶಾಲಾ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಅನುವಾಗುವಂತೆ ವ್ಯವಸ್ಥೆ ಮಾಡಲಾಗಿದೆ. 8) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿರುವ ವಿದ್ಯಾರ್ಥಿಗಳ Aadhar linked ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಹಿಂದುಳಿದ ವರ್ಗಕ್ಕೆ (OBC) (OBC) ಸೇರಿದ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಪಡೆಯಬೇಕಾದಲ್ಲಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ RD NUMBER ನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. RD NUMBER ನಮೂದಿಸಿದ ನಂತರ ಮುಖ್ಯ ಶಿಕ್ಷಕರು ವಿದ್ಯಾರ್ಥಿಯ ಪವರ್ಗದ ಮಾಹಿತಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ
9) ವಿದ್ಯಾರ್ಥಿಗಳ ಮಾಹಿತಿಗಳನ್ನು ಆನ್ಲೈನ್ನಲ್ಲಿ ನೋಂದಾಯಿಸಿದ ನಂತರ ಪ್ರತಿ ವಿದ್ಯಾರ್ಥಿಯ ಮಾಹಿತಿಗಳನ್ನು ವೈಯಕ್ತಿಕವಾಗಿ ಮತ್ತು ಶಾಲೆಯ ಕ್ರೋಢೀಕೃತ ಮಾಹಿತಿಯನ್ನು ನಾಮಿನಲ್ ರೋಲ್ನಲ್ಲಿ ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
10) ಉಲ್ಲೇಖ(1) ರಲ್ಲಿ ನಿಗದಿಪಡಿಸಿರುವಂತೆ ಹೊಸ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕವನ್ನು (ರೂ.236/-) ಶಾಲಾ ಹಂತದಲ್ಲಿಯೇ ಸಂಗ್ರಹಿಸಬೇಕಾಗಿರುವುದರಿಂದ, ಈ ಶುಲ್ಕವನ್ನೂ ಸಹ ಪರೀಕ್ಷಾ ಶುಲ್ಕದ ಜೊತೆಯಲ್ಲಿಯೇ ಮಂಡಲಿಗೆ ಭರಿಸುವಂತೆ ಆನ್ಲೈನ್ನಲ್ಲಿಯೇ ಚಲನ್ ಸೃಜಿಸಲಾಗುವುದು.
11) ಮುಖ್ಯ ಶಿಕ್ಷಕರು ಆನ್ಲೈನ್ನಲ್ಲಿ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಗಣಕೀಕರಿಸಿದ ನಂತರ ವಿದ್ಯಾರ್ಥಿಗಳ ಶುಲ್ಕವನ್ನು ಮಂಡಲಿಗೆ ಪಾವತಿಸಲು ನೋಂದಣಿಗೆ ನಿಗದಿಪಡಿಸಲಾದ ಕೊನೆಯ ದಿನಾಂಕದ ನಂತರ ಮಂಡಲಿಯ ಶಾಲಾ ಲಾಗಿನ್ನಲ್ಲಿ ಸೃಜಿಸಲಾಗುವ ಆನ್ಲೈನ್ ಚಲನ್ನ್ನು ಡೌನ್ಲೋಡ್ ಮಾಡಿ ಮುದ್ರಿಸಿಕೊಂಡು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ (ಈ ಹಿಂದಿನ ಕಾರ್ಪೋರೇಷನ್ ಬ್ಯಾಂಕ್) ರಾಜ್ಯದ ಯಾವುದೇ ಶಾಖೆಯಲ್ಲಿ ಶುಲ್ಕ ಪಾವತಿಸುವುದು. ಶಾಲಾ ಲಾಗಿನ್ನಲ್ಲಿ ಸೃಜಿಸಲಾಗುವ ಚಲನ್ನ್ನು ಬಳಸಿಯೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ನೆಫ್ಟ್ ಚಲನ್ ಬಳಸಿ ಶುಲ್ಕ ಪಾವತಿಸಬಾರದು, ಪಾವತಿಸಿದಲ್ಲಿ ಅಂತಹ ಶುಲ್ಕ ಪಾವತಿಯನ್ನು ಪರಿಗಣಿಸಲಾಗುವುದಿಲ್ಲ.
12) ಪುಸ್ತುತ ಆನ್ಲೈನ್ ಮೂಲಕ ಭರ್ತಿ ಮಾಡಲಾದ ವಿದ್ಯಾರ್ಥಿಗಳ ವಿವರಗಳು ಅಂಕಪಟ್ಟಿ ಹಾಗೂ ವರ್ಗಾವಣೆ ಪತ್ರಗಳಲ್ಲಿ ನಮೂದಾಗುವುದರಿಂದ ಯಾವುದೇ ತಪ್ಪುಗಳು ಆಗದಂತೆ ಎಚ್ಚರ ವಹಿಸಲು ಸೂಚಿಸಿದೆ. ನಿಗದಿತ ದಿನಾಂಕದ ನಂತರ ನೋಂದಣಿ ಮಾಹಿತಿಗಳನ್ನು ಫ್ರೀಜ್ ಮಾಡುವುದರಿಂದ ಅದರ ನಂತರ ವಿದ್ಯಾರ್ಥಿಗಳ ವಿವರಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ. 13) ಸದರಿ ಪರೀಕ್ಷಾ ನೋಂದಣಿಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ Screenshot ಸಹಿತ User Manual ಹಾಗೂ FAQ ಗಳನ್ನು ಮಂಡಲಿಯ ಜಾಲತಾಣದ ಶಾಲಾ ಲಾಗಿನ್ನಲ್ಲಿ ಒದಗಿಸಲಾಗಿದ್ದು, ಅವುಗಳ ಸದುಪಯೋಗ ಪಡೆಯಬಹುದಾಗಿದೆ. ಅಲ್ಲದೇ, ದಿನಾಂಕ: 18-10-2024 ರಿಂದ 11-11-2024 ರವರೆಗೆ ಕಛೇರಿ ಕೆಲಸದ ದಿನಗಳಂದು ಮುಖ್ಯಶಿಕ್ಷಕರು ಮಂಡಲಿಯ ಸಹಾಯವಾಣಿ ಸಂಖ್ಯೆ: 080-23310075 ಕ್ಕೆ ಕರೆ ಮಾಡಿ ಪರೀಕ್ಷಾ ನೋಂದಣಿಗೆ ಸಂಬಂಧಿಸಿದ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು. ಮಂಡಲಿಯ ವತಿಯಿಂದ ಮುಖ್ಯಶಿಕ್ಷಕರಿಗೆ ನೀಡಲಾಗಿರುವ Username ಗೆ ಸಂಬಂಧಿಸಿದ Password ಗೌಪ್ಯವಾಗಿಟ್ಟುಕೊಳ್ಳುವುದು.