ಬೆಂಗಳೂರು: “ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ ಜತೆ ಮತ್ತೆ ಚರ್ಚೆ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರವಾಗಿ ಸಮುದಾಯದ ನಾಯಕರುಗಳ ಜತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಮಾಹಿತಿ ನೀಡಿದರು.
“ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಈ ವಿಚಾರ ನ್ಯಾಯಾಲಯದಲ್ಲಿ ಇರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.
“ಈಗ ಚುನಾವಣಾ ನೀತಿ ಸಂಹಿತೆ ಇದೆ. ಇದಾದ ನಂತರ ಸಭೆ ಕರೆದು ಮಾತನಾಡುತ್ತೇವೆ ಎಂದು ಸಮುದಾಯದ ಮುಖಂಡರುಗಳಿಗೆ ಗೌರವಯುತವಾಗಿ ಹೇಳಿದ್ದೇವೆ ಅವರ ಭಾವನೆ, ಕಳಕಳಿ ನಮಗೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ನಾವು ಅವರ ವಿಚಾರವನ್ನು ಪರಿಗಣಿಸುತ್ತೇವೆ” ಎಂದು ತಿಳಿಸಿದರು.
ತಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಸಮುದಾಯದವರು ಹೇಳಿರುವ ಬಗ್ಗೆ ಕೇಳಿದಾಗ, “ಹೋರಾಟ ಮಾಡುವವರಿಗೆ ನಾವು ಏನು ಹೇಳಲು ಆಗುತ್ತದೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ನಮ್ಮ ವಿರುದ್ಧ ದಾಖಲೆ ಹುಡುಕುತ್ತಿದ್ದಾರೆ:
ಕುಮಾರಸ್ವಾಮಿ ಅವರು ಎಸ್ಐಟಿಯನ್ನು ಶಿವಕುಮಾರ್ ತನಿಖಾ ಸಂಸ್ಥೆ ಎಂದು ಟೀಕಿಸಿರುವ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರಿಗೆ ನನ್ನನ್ನು ಸ್ಮರಿಸುತ್ತಿರಬೇಕು. ಇಲ್ಲದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ. ಅವರು ಹಾಗೂ ಅವರ ಸಹೋದರರು ನನ್ನ ಸ್ಮರಿಸುತ್ತಲೇ ಇರುತ್ತಾರೆ. ಅವರು ನನ್ನ ದಾಖಲೆಗಳನ್ನು ಹುಡುಕುತ್ತಿದ್ದಾರೆ. ನನ್ನ ಎಲ್ಲಾ ದಾಖಲೆಗಳು ಇಡಿ ಸಿಬಿಐ ಬಳಿ ಇವೆ. ಹೊಸದಾಗಿ ಹುಡುಕುವುದೇನಿಲ್ಲ. ಅವರು ನನಗೆ ಕೇಳಿದ್ದರೆ ನಾನೇ ಅವರಿಗೆ ನನ್ನ ದಾಖಲೆಗಳನ್ನು ಒದಗಿಸುತ್ತಿದ್ದೆ. ನಾವು ಇನ್ನು ಅವರ ಸುದ್ದಿಗೆ ಹೋಗಿಲ್ಲ. ಉಳಿದ ವಿಚಾರ ಆನಂತರ ಮಾತನಾಡೋಣ” ಎಂದು ತಿಳಿಸಿದರು.
ಇಡಿ ದಾಖಲೆ ಕೇಳುತ್ತಿರಬಹುದು:
ಮೂಡಾ ಪ್ರಕರಣದಲ್ಲಿ ಹಣಕಾಸು ವ್ಯವಹಾರ ಇಲ್ಲವಾದರೂ ಇಡಿ ದಾಳಿ ಬಗ್ಗೆ ಕೇಳಿದಾಗ, “ಇಡಿ ಅವರು ಮಾಹಿತಿ ಸಂಗ್ರಹಿಸುತ್ತಿರಬಹುದು. ಅದನ್ನು ದಾಳಿ ಎಂದು ಹೇಗೆ ಹೇಳುತ್ತೀರಿ. ಅವರು ದಾಖಲೆ ಕೇಳಬಹುದು, ಇವರು ಕೊಡಬಹುದು. ದಾಖಲೆ ಪರಿಶೀಲನೆ ಮಾಡಬಹುದು. ಅದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾಧ್ಯ? ದಾಖಲೆಗಳನ್ನು ಹೊಸದಾಗಿ ತಿದ್ದಲು ಸಾಧ್ಯವೇ? ಪ್ರಕರಣದ ಎಲ್ಲಾ ದಾಖಲೆಗಳು ಸಾರ್ವಜನಿಕವಾಗಿವೆ. ನಾವು ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ವಾಸ್ತವಾಂಶ ಜನರ ಮುಂದಿಡುತ್ತೇವೆ” ಎಂದರು.
ಈ ಹಿಂದೆ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಅನೇಕ ಬಾರಿ ಹೇಳಿದ್ದೀರಿ ಎಂದು ಕೇಳಿದಾಗ, “ಈ ಪ್ರಕರಣ ನ್ಯಾಯಾಲಯದಲ್ಲಿದೆ, ಅವರು ಮೂಡಾ ಕಚೇರಿಗೆ ಭೇಟಿ ನೀಡಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ಇಡಿ ಅವರು ದಾಖಲೆಗಳನ್ನು ಕೇಳಿದ್ದರು, ಇವರು ದಾಖಲೆ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ದಾಖಲೆ ನೀಡುವುದು ತಡವಾಗಿರಬಹುದು, ಇದಕ್ಕಾಗಿ ಇಡಿ ಅವರೇ ಕಚೇರಿಗೆ ಹೋಗಿರಬಹುದು” ಎಂದರು.
ನೈಸ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಅವರ ವಿಚಾರವಾಗಿ ಕೇಳಿದಾಗ, “ನೈಸ್ ವ್ಯಾಪ್ತಿಯಲ್ಲಿ ಅವರ ಆಸ್ತಿ ಎಷ್ಟಿದೆ ಎಂದು ಮೊದಲು ಅವರು ಬಹಿರಂಗಪಡಿಸಲಿ. ಸಮಯ ಬಂದಾಗ ನಾನು ಅದನ್ನು ಹೇಳುತ್ತೇನೆ” ಎಂದು ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಬಗ್ಗೆ ಕೇಳಿದಾಗ, “ನಾನೇ ಅಭ್ಯರ್ಥಿ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹಸ್ತದ ಗುರುತೇ ಅಭ್ಯರ್ಥಿ” ಎಂದು ತಿಳಿಸಿದರು.
ED ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್: ಆರ್.ಅಶೋಕ್
ಆನ್ ಲೈನ್ ಸ್ಕ್ಯಾಮ್ ವಿರುದ್ಧ ಜಾಗೃತಿ: ಕೇಂದ್ರ ಸರ್ಕಾರದೊಂದಿಗೆ ಜಂಟಿ ಉಪಕ್ರಮವನ್ನು ಪ್ರಾರಂಭಿಸಿದ ‘ಮೆಟಾ’