ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ಎನ್ನುವಂತೆ ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ಕುರಿತು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ರಾಕೇಶ್ ಕುಮಾರ್.ಕೆ ತಿದ್ದುಪಡಿ ಅಧಿಸೂಚನೆ ಹೊರಡಿಸಿದ್ದಾರೆ. ಆಯೋಗವು 2023-24ನೇ ಸಾಲಿನಲ್ಲಿ ಉಲ್ಲೇಖ(01)ರ ಅಧಿಸೂಚನೆಯಲ್ಲಿ ವಿವಿಧ ಇಲಾಖೆಗಳಲ್ಲಿನ ಗ್ರೂಪ್-ಸಿ ವೃಂದದ 60 (ಉಳಿಕೆ ಮೂಲ ವೃಂದದ) ಹುದ್ದೆಗಳಿಗೆ ಅಧಿಸೂಚನೆ ಜಾರಿ ಮಾಡಲಾಗಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ಅರ್ಹತೆ- 35 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ- 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- 40 ವರ್ಷಗಳು ಎಂದು ನಿಗದಿಪಡಿಸಲಾಗಿತ್ತು ಎಂದಿದ್ದಾರೆ.
ಪ್ರಸ್ತುತ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೆನ 2024, ದಿನಾಂಕ:10,09,2024ರಲ್ಲಿ, ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿರುತ್ತದೆ. ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ -ಸಿ ಮತ್ತು ಗ್ರೂಪ್-1 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ, ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಆನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದ್ದಾರೆ.
ಮೇಲ್ಕಂಡ ಸರ್ಕಾರದ ಆದೇಶದನ್ವಯ ಸದರಿ ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದ, ವಯೋಮಿತಿಯನ್ನು ಕೆಳಕಂಡಂತೆ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದ್ದಾರೆ.
ಹೀಗಿದೆ ಪರಿಷ್ಕೃತ ವಯೋಮಿತಿ ಸಡಿಲಿಕೆ ವಿವರ
- ಸಾಮಾನ್ಯ ಅರ್ಹತೆ- ಗರಿಷ್ಠ 38 ವರ್ಷಗಳು
-
ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ ಗರಿಷ್ಠ 41 ವರ್ಷಗಳು
-
ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷಗಳು
ಸರ್ಕಾರದ ಮೇಲ್ಕಂಡ ಆದೇಶದ ಹಿನ್ನೆಲೆಯಲ್ಲಿ ದಿ:15-03-2024ರ ಅಧಿಸೂಚನೆಯಲ್ಲಿನ ವಿವಿಧ ಗ್ರೂಪ್-ಸಿ ವೃಂದದ ಹುದ್ದೆಗಳಿಗೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (Ole time measure) ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿ ಅರ್ಹ ಅಭ್ಯರ್ಥಿಗಳು ದಿನಾಂಕ:15-10-2024 ರಿಂದ 30-10-2024 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ವಿಸ್ತರಿತ ಕೊನೆಯ ದಿನಾಂಕವಾದ 30-10-2024ಕ್ಕೆ ಮೀಸಲಾತಿಗಳ ಮುಂದೆ ನಮೂದಿಸಿರುವ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ:-
1.ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
2.ದಯೋಮಿತಿಯನ್ನು ಹೊರತುಪಡಿಸಿ ಉಳಿದಂತೆ ಉಲ್ಲೇಖಿತ ಅಧಿಸೂಚನೆಗಳಲ್ಲಿ ತಿಳಿಸಲಾಗಿರುವ ಮಾಹಿತಿ/ವಿವರಗಳನ್ನು ಯಥಾವತ್ತಾಗಿ ಅನ್ವಯಿಸಿಕೊಳ್ಳತಕ್ಕದ್ದು ಹಾಗೂ ಹೆಚ್ಚಿನ ವಿವರಗಳಿಗಾಗಿ ಸದರಿ ಅಧಿಸೂಚನೆಗಳನ್ನು ಓದಿಕೊಳ್ಳತಕ್ಕದ್ದು ಎಂದು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮನಕಲಕುವ ಘಟನೆ : ಪತ್ನಿ ಸಾವಿನಿಂದ ನೊಂದು ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ!
BIG NEWS: ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ರೆಡಿ, ಮೂರು ಕ್ಷೇತ್ರ ಗೆಲುವು: ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ