ಬೆಂಗಳೂರು: ವಿಪಕ್ಷ ನಾಯಕರಾದ ಆರ್ ಅಶೋಕ್ ಅವರ ಇತ್ತೀಚಿನ ಪತ್ರಿಕಾ ಹೇಳಿಕೆ ಓದಿ ನಿಜಕ್ಕೂ ಆಘಾತವಾಯಿತು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹಾಗೂ ಈ ಹಿಂದೆ ಕಂದಾಯ ಇಲಾಖೆಯ ಸಚಿವರಾಗಿಯೂ ಇದ್ದವರಿಗೆ ಜಿಎಸ್ಟಿ ಕಮಿಟಿ ಹಾಗೂ ಹಣಕಾಸು ಆಯೋಗದ ನಡುವಿನ ವ್ಯತ್ಯಾಸವೂ ತಿಳಿಯದಿರುವುದು ಅಚ್ಚರಿಯ ವಿಚಾರ. ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸುವ ಬರದಲ್ಲಿ ನನ್ನ ವಿರುದ್ಧವೂ ಕೀಳುಮಟ್ಟದ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಾದ ನಡೆ ಅಲ್ಲ ಎಂಬುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ವಾಗ್ಧಾಳಿ ನಡೆಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆಯಲ್ಲಿ “ಜಿಎಸ್ಟಿ ಸಭೆಗೆ ಹೋಗುವ ಪ್ರತಿನಿಧಿ ಕಡಲೆಕಾಯಿ ತಿನ್ನುತ್ತಾರಾ?” ಎಂದು ಪ್ರಶ್ನಿಸಿರುವ ಆರ್. ಅಶೋಕ್ ಅವರೇ ಜಿಎಸ್ಟಿ ಕಮಿಟಿ ಹಾಗೂ ಹಣಕಾಸು ಆಯೋಗ ಇವೆರಡೂ ಬೇರೆ ಬೇರೆ ಎಂಬ ಕುರಿತು ಕಡಲೆಕಾಯಿ ಬೆಳೆಯುವ ನಮ್ಮ ನಾಡಿನ ಸಾಮಾನ್ಯ ರೈತನಿಗೆ ಇರುವಷ್ಟೂ ಕನಿಷ್ಠ ಜ್ಞಾನ ವಿಪಕ್ಷ ನಾಯಕನಾದ ತಮಗೆ ಇಲ್ಲದಿರುವುದು ಈ ನಾಡಿನ ದೌರ್ಭಾಗ್ಯ ಎಂದಿದ್ದಾರೆ.
ಮೊದಲು ತಾವು ಜಿಎಸ್ಟಿ ಎಂದರೆ ಏನು..? ಜಿಎಸ್ಟಿ ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳೇನು ಎಂಬ ಕುರಿತು ತಿಳಿದುಕೊಳ್ಳಿ. ಜಿಎಸ್ಟಿ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, “ಸರಕು ಮತ್ತು ಸೇವಾ ತೆರಿಗೆಯು (Goods and Service Tax – GST) ಒಂದು ಏಕರೂಪದ ಅಪ್ರತ್ಯೇಕ್ಷ ತೆರಿಗೆಯಾಗಿರುತ್ತದೆ. (Single Uniform Indirect Tax) ಇದು ಪ್ರಸ್ತುತ ಕೇಂದ್ರ ಹಾಗೂ ರಾಜ್ಯಗಳ ಅಪ್ರತ್ಯೇಕ್ಷ ತೆರಿಗೆಗಳಾದ VAT, CNVAT, ಮುಂತಾದವುಗಳ ಬದಲಿಗೆ ಜಿಎಸ್ಟಿ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಈ ಜಿಎಸ್ಟಿ ತೆರಿಗೆ ವ್ಯವಸ್ಥೆಯು ಕೇಂದ್ರ ಸರಕು ಮತ್ತು ಸೇವಾ ತೆರಿಗೆ, ರಾಜ್ಯ ಸರಕು ಮತ್ತು ಸೇವಾ ತೆರಿಗೆ ಹಾಗೂ ಸಮಗ್ರ ಸರಕು ಮತ್ತು ಸೇವಾ ತೆರಿಗೆಯನ್ನು ಒಳಗೊಂಡಿರುತ್ತದೆ.
ಇನ್ನೂ ಜಿಎಸ್ಟಿ ಸಭೆಯಲ್ಲಿ ಯಾವ ಸರಕು ಅಥವಾ ಸೇವಾ ವಿಚಾರಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು, ಅದರ ಮೇಲಿನ ತೆರಿಗೆ ಮೌಲ್ಯ ಯಾವ ಪ್ರಮಾಣದಲ್ಲಿರಬೇಕು? ಎಂದು ಚರ್ಚಿಸಲಾಗುತ್ತೆಯೇ ವಿನಃ ಆ ಸಭೆಯಲ್ಲಿ ಎದ್ದು ನಿಂತು ನಮಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ, ಹೀಗಾಗಿ ನಮ್ಮ ಪಾಲನ್ನು ಹೆಚ್ಚಿಸಿ ಎಂದು ಹಕ್ಕೊತ್ತಾಯ ಮಾಡಲಾಗದು..? ಹಣಕಾಸು ಆಯೋಗವು ಏನು ಮಾಡುತ್ತದೆ ಎಂಬುದನ್ನೂ ಅರಿಯಿರಿ ಅಶೋಕ್ ಅವರೇ. ದೇಶದ ವಿವಿಧ ರಾಜ್ಯಗಳ ಜನರಿಂದ ಸಂಗ್ರಹಿಸುವ ಕೇಂದ್ರ ತೆರಿಗೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಎಷ್ಟೆಷ್ಟು ಹಂಚಿಕೊಳ್ಳಬೇಕು ಮತ್ತು ವಿವಿಧ ರಾಜ್ಯಗಳಿಗೆ ಎಷ್ಟು ನೀಡಬೇಕು ಎಂಬುದನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆ ಹಣಕಾಸು ಆಯೋಗ.
ಜಿಎಸ್ಟಿ ವ್ಯವಸ್ಥೆ ಜಾರಿಯಾದ ನಂತರ ರಾಜ್ಯಗಳ ತೆರಿಗೆ ಸ್ವಾಯತ್ತತೆಗೆ ಭಾರೀ ಪೆಟ್ಟು ಬಿದ್ದಿದೆ ಎಂಬುದು ನಿಜ. ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮದೇ ಸ್ವಂತ ತೆರಿಗೆ ಆದಾಯವನ್ನು ಹೊಂದಿದ್ದವು. ಆ ಆದಾಯದ ಮೂಲಕ ಹಲವಾರು ಪ್ರಗತಿಪರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು. ತಮ್ಮ ರಾಜ್ಯದಲ್ಲಿ ಯಾವ ಸರಕು ಅಥವಾ ಸೇವೆಗೆ ಎಷ್ಟು ತೆರಿಗೆ ವಿಧಿಸಬಹುದು ಎಂಬುದನ್ನು ಆಯಾ ರಾಜ್ಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ಮಾಡುತ್ತಿದ್ದವು. ಆದರೆ, ಕೇಂದ್ರ ಸರ್ಕಾರ ಜಿಎಸ್ಟಿ ಹೆಸರಿನಲ್ಲಿ ಅವೆಲ್ಲವನ್ನೂ ತನ್ನ ಹಿಡಿತದಲ್ಲಿರುವ ಜಿಎಸ್ಟಿ ಮಂಡಳಿ ನಿರ್ಧಾರ ಮಾಡುವ ಹಾಗೆ ಮಾಡಿದ ಮೇಲೆ, ರಾಜ್ಯಗಳ ಈ ಹಕ್ಕು ಕಿತ್ತುಕೊಂಡಿತು. ಪರಿಣಾಮ ರಾಜ್ಯಗಳ ಪಾಲಿಗೆ ಭಾರೀ ನಷ್ಟವಾಗುತ್ತಿದೆ.
ಕೇಂದ್ರದ ತೆರಿಗೆಗೆ ಕರ್ನಾಟಕದ ಕೊಡುಗೆ ಹಾಗೂ ಕೇಂದ್ರ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಇನ್ನೊಮ್ಮೆ ಗಮನಿಸಿ, ಪ್ರತಿ ವರ್ಷ ಕೇಂದ್ರದ ಒಟ್ಟು ತೆರಿಗೆ ಆದಾಯಕ್ಕೆ ಕರ್ನಾಟಕದ ಪಾಲು ಸುಮಾರು 4 ಲಕ್ಷ ಕೋಟಿ ರೂಪಾಯಿ. ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ.5 ರಷ್ಟಿದ್ದರೂ ರಾಷ್ಟ್ರೀಯ ಜಿಡಿಪಿಗೆ ನಮ್ಮ ಕೊಡುಗೆ ಶೇ.8.4. ಒಟ್ಟಾರೆ ದೇಶಕ್ಕೆ ಜಿಎಸ್ಟಿ ಕೊಡುಗೆಯಲ್ಲಿ ರಾಜ್ಯವು 2 ನೇ ಸ್ಥಾನದಲ್ಲಿದೆ. ಆದರೆ, ನಾವು ಕೊಡುವ ಒಂದು ರೂಪಾಯಿಗೆ ಪ್ರತಿಯಾಗಿ ನಮ್ಮ ರಾಜ್ಯ ಪಡೆಯುತ್ತಿರುವ ಪಾಲು ಕೇವಲ 15 ಪೈಸೆ ಮಾತ್ರ.
ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.713 ಎಂದು ನಿಗದಿಪಡಿಸಿತ್ತು. 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.647ಕ್ಕೆ ಇಳಿಸಿತು. ಇದರಿಂದ 2021-26 ರವರೆಗಿನ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ರೂ ₹62,275 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯವನ್ನು ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ ರೂ.5,495 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು. ಇದನ್ನು ಕೂಡಾ ಕೇಂದ್ರ ಸರ್ಕಾರ ನೀಡದೆ ಅನ್ಯಾಯ ಎಸಗಿದೆ. ಈ ಎಲ್ಲ ನಷ್ಟಗಳನ್ನು ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರೂ.79,770 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ.
ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ.17.93, ಬಿಹಾರಕ್ಕೆ 10.05, ರಾಜಸ್ತಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡುತ್ತಿರುವ ಹಣಕಾಸು ಆಯೋಗ ಪ್ರಗತಿಯ ಹಾದಿಯಲ್ಲಿರುವ ಕರ್ನಾಕಕ್ಕೆ ಈ ಪ್ರಮಾಣವನ್ನು ಕೇವಲ ಶೇ.3.64 ಮಾತ್ರ ನಿಗದಿಪಡಿಸಿರುವುದು ಏಕೆ. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ. ಅಭಿವೃದ್ದಿಯತ್ತ ಮುಖ ಮಾಡಿರುವ ರಾಜ್ಯವನ್ನು ಶಿಕ್ಷಿಸಿ ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸುವ ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಬೇಕೆಂದು ನಾವು ಒತ್ತಾಯಿಸುತ್ತಲೇ ಬಂದಿದ್ದರೂ ಕೇಂದ್ರ ಸರ್ಕಾರ ಕಿವುಡಾಗಿದೆ. ಕರ್ನಾಟಕವನ್ನು ಕಡೆಗಣಿಸುವಂತಹ ಅನ್ಯಾಯವನ್ನು ನಾವೇನು ಮಾಡಿದ್ದೇವೆ ಎಂಬುದು ಪ್ರಮುಖ ಪ್ರಶ್ನೆ.
ಜಿಎಸ್ಟಿ ತೆರಿಗೆ ಪಾಲಿನ ಮೋಸ ಒಂದೆಡೆಯಾದರೆ, ರಾಜ್ಯಕ್ಕೆ ನೀಡಬೇಕಾದ ಬರ ಪರಿಹಾರದಲ್ಲೂ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ಸರಿಯಲ್ಲ. ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ನೀಡಬೇಕಾದ ಕೇಂದ್ರ ತೀರಾ ಶೋಷಣೆಯ ದಾರಿ ಹಿಡಿದಿತ್ತು. ಕೊನೆಗೆ ಭಾರತೀಯ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿ ಪರಿಹಾರ ಪಡೆಯಬೇಕಾದ ಸನ್ನಿವೇಶ ಎದುರಾಯಿತು.
ಇದಲ್ಲದೆ, ರಾಜ್ಯದ ಮಹತ್ವದ ನೀರಾವರಿ ಯೋಜನೆಗಳಾದ ಕಳಸಾ ಬಂಡೂರಿ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಸರ್ಕಾರ ಈವರೆಗೆ ಅನುಮತಿ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ನಲ್ಲಿ ಘೋಷಿಸಿದ್ದ 5200 ಕೋಟಿ ರೂಪಾಯಿ ಹಣದಲ್ಲಿ ಬಿಡಿಗಾಸೂ ಬಂದಿಲ್ಲ. ಕೇಂದ್ರದ ಇಂತಹ ಅನ್ಯಾಯದ ವಿರುದ್ಧ ಮಲತಾಯಿ ಧೋರಣೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ನಾಯಕರು ನಿರಂತರವಾಗಿ ಧ್ವನಿ ಎತ್ತುತ್ತಲೇ ಇದ್ದಾರೆ.
ಆದರೆ, ಈ ಬಗ್ಗೆ ಸಂಸತ್ನಲ್ಲಿ ದನಿ ಎತ್ತಿದೆ ಒಬ್ಬೇ ಒಬ್ಬ ಬಿಜೆಪಿ ಸಂಸದರನ್ನು ಈ ನಾಡು ಕಂಡಿಲ್ಲ. ಬಿಜೆಪಿಯ 27 ಸಂಸದರಿದ್ದರೂ ಉಪಯೋಗವಾಗಲಿಲ್ಲ. ಸ್ವತಃ ಹಣಕಾಸು ಸಚಿವೆಯನ್ನು ಇದೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿದ್ದಿರಿ. ಆದರೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ನಿಂತಿಲ್ಲ.
ಇಂತಹ ಪ್ರಶ್ನೆಗಳನ್ನು ಹಾಗೂ ತೆರಿಗೆ ಹಂಚಿಕೆ ತಾರತಮ್ಯದ ಕುರಿತು ರಾಜ್ಯದ ಹಕ್ಕೊತ್ತಾಯಗಳನ್ನೇ ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ 16ನೇ ಹಣಕಾಸು ಆಯೋಗದ ಎದುರು ಇಡಲಾಗಿತ್ತು. ಸಿಎಂ ಸಿದ್ದರಾಮಯ್ಯ ನವರು ಈ ಎಲ್ಲಾ ಪ್ರಶ್ನೆಗಳನ್ನು ಬಲವಾಗಿ ಆಯೋಗದ ಮುಂದಿಟ್ಟಿದ್ದರು. ಆದರೆ, ಈ ಯಾವ ಬೆಳವಣಿಗೆಗಳ ಬಗ್ಗೆಯೂ ತಿಳಿಯದೆ, ಕನಿಷ್ಠ ಜಿಎಸ್ಟಿ ಹಾಗೂ ಹಣಕಾಸು ಆಯೋಗದ ನಡುವಿನ ವ್ಯತ್ಯಾಸವೂ ಅರಿಯದೆ ಆರ್, ಅಶೋಕ್ ಅವರು ಹೀಗೊಂದು ಹೇಳಿಕೆ ನೀಡಿರುವುದು ಶೋಚನೀಯ ಮತ್ತು ದುರಂತ ಸಂಗತಿ.
ವಿಪಕ್ಷ ನಾಯಕರ ಇಂತಹ ಅಪ್ರಬುದ್ಧ ಹೇಳಿಕೆಗೆ ಸರ್ಕಾರದ ಜವಾಬ್ದಾರಿಯು ಸ್ಥಾನದಲ್ಲಿರುವ ನಾನು ಉತ್ತರಿಸಲೇಬೇಕಾಗಿರುವ ಅನಿವಾರ್ಯವೂ ಮತ್ತೊಂದು ದುರಂತ…!
ಈ ವಿಚಾರದಲ್ಲಿ ನಾವು ಸತ್ಯವನ್ನು ಮುಂದಿಟ್ಟಿದ್ದೇವೆ. ಯಾವ ಪಕ್ಷದ ಸರ್ಕಾರ ಏನು ಮಾಡಿತು ಎಂಬುದನ್ನೂ ಪಕ್ಕಕ್ಕಿಡೋಣ. ಕೇವಲ ಕರ್ನಾಟಕಕ್ಕೆ ಆದ ಅನ್ಯಾಯ ಎಂದು ಮಾತ್ರ ಇಟ್ಟುಕೊಂಡು ಚರ್ಚೆ ಮಾಡೋಣ. ಏಕೆಂದರೆ ಯಾವ ಪಕ್ಷ ಎಂಬ ಚರ್ಚೆ ಬಂದರೆ ನಿಮಗೆ ಮುಜುಗರವಾಗಬಹುದು. ದಯವಿಟ್ಟು ಈಗಲಾದರೂ ಕರ್ನಾಟಕದ ಪರ ನಿಲ್ಲಿ ಎಂದು ನಾನು ಸರ್ಕಾರದ ಪರವಾಗಿ ಮಾನ್ಯ ವಿಪಕ್ಷ ನಾಯಕರಲ್ಲಿ ಆಗ್ರಹಿಸಿದ್ದಾರೆ.
BIG UPDATE: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು
ಗೃಹಲಕ್ಷ್ಮಿ’ ಫಲಾನುಭವಿಗಳ ಖಾತೆಗೆ 1 ತಿಂಗಳ ಹಣ ಜಮೆಯ ವಿಚಾರ : ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್