ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಇ-ಖಾತಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಸಿಲಿಕಾನ್ ಸಿಟಿಯಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರಿಗೆ ಇ-ಖಾತಾ ತಂತ್ತಾಂಶ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈಗ ಕುಳಿತಲ್ಲೇ ಬೆಂಗಳೂರಿನ ಆಸ್ತಿ ಮಾಲೀಕರು ತಮ್ಮ ಡ್ರಾಫ್ಟ್ ಇ-ಖಾತಾವನ್ನು ವೀಕ್ಷಿಸಬಹುದಾಗಿದೆ. ಅದು ಹೇಗೆ ಅಂತ ಮುಂದೆ ಓದಿ.
ಈ ಕುರಿತಂತೆ ಬಿಬಿಎಂಪಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಿಬಿಎಂಪಿ ಇ-ಆಸ್ತಿ ವ್ಯವಸ್ಥೆಯಲ್ಲಿ ನಿಮ್ಮ ಡ್ರಾಫ್ಟ್ ಇ-ಖಾತಾ ಅನ್ನು ಆನ್ ಲೈನ್ ನಲ್ಲಿ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ನೀವು ಕುಳಿತಲ್ಲೇ ನಿಮ್ಮ ಡ್ರಾಫ್ಟ್ ಇ-ಖಾತಾ ನೋಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ, ವೀಕ್ಷಿಸಿ ಎಂದು ತಿಳಿಸಿದೆ.
ಈ ಹಂತ ಅನುಸರಿಸಿ, ಕುಳಿತಲ್ಲೇ ‘ಆನ್ ಲೈನ್’ ಮೂಲಕ ನಿಮ್ಮ ‘ಇ-ಖಾತಾ’ ವೀಕ್ಷಿಸಿ
(1) ಎಲ್ಲಾ ಕರಡು ಇ-ಖಾತಾಗಳನ್ನು(ಸುಮಾರು 22 ಲಕ್ಷ) ವಾರ್ಡ್ ವಾರು BBMPeAasthi.karnataka.gov.in ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
(2) ನಿಮ್ಮ ಸ್ವತ್ತಿನ ಆಸ್ತಿ ತೆರಿಗೆಯ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ನೀವು ತಿಳಿದುಕೊಳ್ಳಬಹುದು.
(3) ಆನ್‌ಲೈನ್‌ನಲ್ಲಿ ಒಮ್ಮೆ ನೀವು ನಿಮ್ಮ ವಾರ್ಡ್ ಗೆ ಭೇಟಿ ನೀಡಿದರೆ, ಆ ವಾರ್ಡ್ ನ ಎಲ್ಲಾ ಡ್ರಾಫ್ಟ್ ಇ-ಖಾತಾ ಪಟ್ಟಿಮಾಡಲಾಗಿದ್ದು, ಇದು ನಿಮಗೆ ಲಭ್ಯವಿರುತ್ತದೆ.
(4) ಮೊದಲಬಾರಿಗೆ ಡಿಜಿಟಲೀಕರಣಗೊಂಡಿರುವುದರಿಂದ ಇ-ಪ್ರಾಪರ್ಟಿ ಐಡಿಯನ್ನು ಈಗ ರಚಿಸಲಾಗಿದೆ. ಆದ್ದರಿಂದ ಮಾಲೀಕರ ಹೆಸರನ್ನು ಹೊರತುಪಡಿಸಿ, ಆಸ್ತಿಯನ್ನು ಹುಡುಕಲು ಬೇರೆ ಆಯ್ಕೆ ಇರುವುದಿಲ್ಲ.
(5) ಆದ್ದರಿಂದ “ಹೆಸರು ಹುಡುಕಾಟ”ವನ್ನು ನೀಡಲಾಗಿದ್ದು, ಆಸ್ತಿಗಳನ್ನು ವಾರ್ಡ್ ವಾರು ಪಟ್ಟಿಯಲ್ಲಿ ವರ್ಣಮಾಲೆಯಂತೆ ಪಟ್ಟಿ ಮಾಡಲಾಗಿದೆ(ಇಂಗ್ಲಿಷ್ ವರ್ಣಮಾಲೆಯಂತೆ).
ಬಿಬಿಎಂಪಿಯು ನಿರಂತರವಾಗಿ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಇ-ಖಾತಾ ನಾಗರೀಕರಿಗೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ತಲುಪಲು ಪ್ರಯತ್ನಿಸುತ್ತಿದೆ. ಯಾವುದೇ ಪಾಲಿಕೆ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ಭೇಟಿ ಮಾಡದೆಯೇ ಪ್ರಕ್ರಿಯೆಯನ್ನು ಎಲ್ಲರಿಗೂ ಸಾಧ್ಯವಾದಷ್ಟು ಸುಗಮಗೊಳಿಸಲಾಗುತ್ತಿದೆ.
ಗಮನಿಸಿ:
ಪ್ರತಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಜೊತೆಗೆ ಶೀಘ್ರದಲ್ಲೇ ಇ-ಖಾತಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದೆ.