ಹಾಸನ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ದಸರಾ ಬಳಿಕ ರಾಜೀನಾಮೆ ನೀಡುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯ ರಾಜ್ಯದಲ್ಲಿ ದಲಿತ ಸಿಎಂ ಕೂಗು ಬೇರೆ ಎದ್ದಿದೆ. ಇದೀಗ ಇಂದು ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕವಾದಂತ ಹೇಳಿಕೆ ನೀಡಿದ್ದು 2028ರಲ್ಲಿ ನನಗೂ ಮುಖ್ಯಮಂತ್ರಿಯಾಗುವ ಇಚ್ಚೆ ಇದೆ ಎಂದು ತಿಳಿಸಿದರು.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಯ ಬಗ್ಗೆ ಚರ್ಚೆ ನಡೆದಿಲ್ಲ. ಆದರೆ 2028ಕ್ಕೆ ಮುಖ್ಯಮಂತ್ರಿಯಾಗುವ ಇಚ್ಚೆ ನನಗೂ ಇದೆ. ಇದನ್ನು ನನ್ನ ಮಗಳು ಕೂಡ ಹೇಳಿರಬಹುದು. ಆದರೆ ಸದ್ಯ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದು ಸಿಎಂ ಬದಲಾವಣೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಇನ್ನು ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ಸಿಎಂ ಆಗಲು ಸಮರ್ಥರು ಎಂದು ಚಿಕ್ಕಮಂಗಳೂರು ಶಾಸಕ ಎಚ್ ಡಿ ತಮ್ಮಯ್ಯ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವಧಿಯ ನಂತರ ಸಿಎಂ ಆಗಲಿ ಎಂದು ಅವರು ಹೇಳಿರಬಹುದು. ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆ ಇಲ್ಲವೆಂದು ಈಗಾಗಲೇ ಹೈಕಮಾಂಡ್ ಕೂಡ ಹೇಳಿದ್ದಾರೆ. ಹಾಗಾಗಿ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.