ಶಿವಮೊಗ್ಗ: ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿಗಳು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ನಡೆಸುತ್ತಿರುವಂತ ಅನಿರ್ಧಿಷ್ಟಾವಧಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಜಿಲ್ಲೆಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಯ ಪಿಡಿಓ, ಕಾರ್ಯದರ್ಶಿಗಳು, ನೀರುಗಂಟಿಗಳು ಸೇರಿದಂತೆ ವಿವಿಧ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಬೇಡಿಕೆಗಳೇನು?
ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ಮತ್ತು ಪಿಡಿಒಗಳ ಒಕ್ಕೂಟ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದಮಟ್ಟದಲ್ಲಿ ನೂರಿತ ತಜ್ಞರ ಸಮಿತಿಯನ್ನು ರಚಿಸಿ, ವಿವಿಧ ರಾಜ್ಯಗಳ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಆಶಯಗಳನ್ನು ಈಡೇರಿಸುವಂತೆ ತಕ್ಷಣ ತಜ್ಞರ ಸಮಿತಿಯನ್ನು ರಚಿಸಬೇಕು.
ಸಂವಿಧಾನದ ಪ್ರಕರಣ 243ಜಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 58(4) ರನ್ವಯ ಗ್ರಾಮ ಪಂಚಾಯತ್‌ಗಳು ಸ್ವಯಂ ಸರ್ಕಾರಗಳಾಗಿ ಕಾರ್ಯ ನಿರ್ವಹಿಸಲು ಅಧಿನಿಯಮದ ಪ್ರಕರಣ 58 ಹಾಗೂ 1ನೇ ಅನುಸೂಚಿಯಲ್ಲಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರಕರಣ 2(28ಸಿ) ರನ್ವಯ ಜವಾಬ್ದಾರಿ ನಕ್ಷೆ ರಚಿಸಬೇಕು. ಜವಾಬ್ದಾರಿ ನಕ್ಷೆಗೆ ಅನುಗುಣವಾಗಿ ಅಧಿಕಾರ, ಹಣಕಾಸು, ಮಾನವ ಸಂಪನ್ಮೂಲ ಹಾಗೂ ಜವಾಬ್ದಾರಿ ನಿರ್ವಹಿಸು ಸ್ವಾತಂತ್ರ್ಯವನ್ನು ಗ್ರಾಮ ಪಂಚಾಯತ್‌ಗಳಿಗೆ ವರ್ಗಾಯಿಸಬೇಕು ಹಾಗೂ ನೇಮಕವಾಗಿರುವ/ ವರ್ಗಾವಣೆಯಾಗಿರುವ ಬಂದಿರುವ ನೌಕರರು ಪಂಚಾಯತ್‌ಗಳಿಗೆ ಉತ್ತರದಾಯಿತ್ವ ಹಾಗೆ ಕ್ರಮ ಕೈಗೊಳ್ಳಬೇಕು.
ಗ್ರಾಮ ಪಂಚಾಯತ್‌ಗಳು ಸ್ವಯಂ ಸರ್ಕಾರಗಳಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಂತಾಗಲು ವಿವಿಧ ಹುದ್ದೆಗಳ ಜವಾಬ್ದಾರಿ ನಕ್ಷೆಯನ್ನು ರಚಿಸಬೇಕು.
ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವಂತಾಗಲು ಪಿಡಿಒ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಂತಾಗಲು ಕಛೇರಿ ಕಾರ್ಯ ನಿರ್ವಹಣಾ ಕೈಪಿಡಿಯನ್ನು ರಚಿಸಬೇಕು.
ಕೆಡಿಪಿ ಸಭೆಗಳನ್ನು ಶಾಸನಬದ್ಧಗೊಳಿಸಬೇಕು. ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ನಿಯಮಗಳನ್ನು ರೂಪಿಸಬೇಕು.
ಗ್ರಾಪಂ ಅಧ್ಯಕ್ಷರ ಗೌರವಧನವನ್ನು ಮಾಸಿಕ 15 ಸಾವಿರ ರೂ.ಗೆ ಉಪಾಧ್ಯಕ್ಷರ ಗೌರವಧನವನ್ನು ಮಾಸಿಕ 12 ಸಾವಿರ ರೂ.ಗೆ ಹಾಗೂ ಸದಸ್ಯರ ಗೌರವಧನವನ್ನು ಮಾಸಿಕ 10 ಸಾವಿರ ರೂ.ಗೆ ಹೆಚ್ಚಿಸಬೇಕು.
ಗ್ರಾಮ ಪಂಚಾಯತ್‌ಗಳ ಕುಡಿಯುವ ನೀರಿನ ಯೋಜನೆಯ ವಿದ್ಯುತ್ ಬಿಲ್‌ಗಳನ್ನು ಕಮರ್ಷಿಯಲ್ ಎಂದು ಪರಿಗಣಿಸಿ ವಿದ್ಯುತ್ ಕಂಪನಿಗಳು ಪೂರೈಸುತ್ತಿದ್ದು, ಇದು ಹೊರೆಯಾಗುತ್ತಿದೆ. ಇದರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗಳಿಗೆ ಉಚಿತವಾಗಿ ವಿದ್ಯುತ್ ಒದಗಿಸಬೇಕು.
ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಪ್ರತ್ಯೇಕ ಲಾಂಛನವನ್ನು ರಚಿಸಬೇಕು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆಗಳೇನು?
-ರಾಜ್ಯದ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ಹುದ್ದೆಯನ್ನು ಗೆಜೆಟ್ ಗ್ರೂಪ್ ಬಿ ದರ್ಜೆಗೆ ಏರಿಸಬೇಕು
-ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡಬೇಕು.
-ಪಿಡಿಒಗಳ ವರ್ಗಾವಣೆ ನಿಯಮಾವಳಿಗಳನ್ನು ಬದಲಾಯಿಸುವ ಮುನ್ನ ಕ್ಷೇಮಾಭಿವೃದ್ಧಿ ಸಂಘದ ಸಲಹೆಯನ್ನು ಪಡೆಯಬೇಕು.
-ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಲು ಕ್ರಮ ಕೈಗೊಳ್ಳಬೇಕು.
ಕರ ವಸೂಲಿಗಾರ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ನೀರಗಂಟಿ, ಡಿ ದರ್ಜೆ ನೌಕರ, ಸ್ವಚ್ಛತಾಗಾರ ವೃಂದದ ಬೇಡಿಕೆಗಳೇನು?
-ಗ್ರಾಮ ಪಂಚಾಯಿತಿಯ ಪಂಚ ನೌಕರರಿಗೆ ವೇತನಶ್ರೇಣಿ, ಸೇವಾ ಹಿರಿತನವನ್ನು ನಿಗದಿ ಮಾಡಿ ಪಂಚಾಯತ್ ರಾಜ್ ಇಲಾಖೆಯಿಂದಲೇ ನೇರವಾಗಿ ವೇತನ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.
-ಇಎಸ್‌ಐ ಪಿಎಫ್ ಜಾರಿ ಮಾಡಬೇಕು.
-ಗ್ರಾಮ ಪಂಚಾಯತ್ ನೌಕರರಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಜಾರಿ ಮಾಡಬೇಕು.
-ಕಾರ್ಯದರ್ಶಿ ಗ್ರೇಡ್ 2 ಮತ್ತು ಎಸ್‌ಡಿಎಎಂ ಹುದ್ದೆಗಳಿಗೆ ಸರ್ಕಾರದಿಂದ ನೇರವಾಗಿ ನೇಮಕಾತಿ ಮಾಡಲಾಗುತ್ತಿದೆ. ಅದರ ಬದಲು ಈ ಹುದ್ದೆಗಳಿಗೆ ಕರ ವಸೂಲಿಗಾರ, -ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ವೃಂದದಿಂದ ಬಡ್ತಿ ನೀಡಬೇಕು.
-ಗ್ರಾಮ ಪಂಚಾಯತ್ ನೌಕರರಿಗೆ ನಿವೃತ್ತಿಯ ನಂತರ 60 ತಿಂಗಳ ವೇತನವನ್ನು ಉಪಧನವಾಗಿ ನೀಡಬೇಕು.
ಗ್ರೇಡ್ 1 ಕಾರ್ಯದರ್ಶಿಗಳ ಬೇಡಿಕೆಗಳೇನು?
ಗ್ರೇಡ್ 1 ಕಾರ್ಯದರ್ಶಿಗಳ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಪ್ರಕಟ ಮಾಡಿ, ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡಬೇಕು
ಗ್ರೇಡ್ 1 ಕಾರ್ಯದರ್ಶಿ ವೃಂದದಿಂದ ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡಲು ಈಗಿರುವ ಅನುಪಾತ ಶೇ.35 ರಿಂದ ಶೇ.60 ಕ್ಕೆ ಹೆಚ್ಚಿಸಬೇಕು.
ಗ್ರೇಡ್ 2 ಕಾರ್ಯದರ್ಶಿಗಳ ಬೇಡಿಕೆಗಳೇನು?
ಗ್ರೇಡ್ 2 ಕಾರ್ಯದರ್ಶಿಗಳು ಕಳೆದ 12 ರಿಂದ 14 ವರ್ಷದಿಂದ ಅದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರಿಗೆ ಒಂದೇ ಬಾರಿ ನೇರ ಬಡ್ತಿ ನೀಡಬೇಕು.
ಗ್ರೇಡ್ 1 ಕಾರ್ಯದರ್ಶಿ ಹುದ್ದೆಗೆ ರಾಜ್ಯ ಮಟ್ಟದಲ್ಲಿ ಜೇಷ್ಠತಾ ಪಟ್ಟಿ ಮಾಡುವ ಆದೇಶವನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲೇ ಜೇಷ್ಠತಾ ಪಟ್ಟಿ ಮಾಡಬೇಕು.
ಗ್ರೇಡ್ 2 ಕಾರ್ಯದರ್ಶಿ ಹುದ್ದೆಯಿಂದ ಗ್ರೇಡ್ 1 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡುವ ಅನುಪಾತವನ್ನು ಶೇ. 33 ರಿಂದ ಶೇ. 80 ಕ್ಕೆ ಏರಿಸಬೇಕು.
ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯತಗಳನ್ನು ಗ್ರೇಡ್ 1 ಗ್ರಾಮ ಪಂಚಾಯತ ಎಂದು ಮೇಲ್ದರ್ಜೆಗೆ ಏರಿಸಬೇಕು.
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಬೇಡಿಕೆಗಳೇನು?
ಗ್ರೇಡ್ 2 ಗ್ರಾಮ ಪಂಚಾಯಿತಿಗಳಿಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಸೃಜಿಸಬೇಕು. ಗ್ರೇಡ್ 1 ಗ್ರಾಮ ಪಂಚಾಯತ್‌ಗಳಿಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಸೃಜಿಸಿ ಪ್ರಸ್ತುತ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಕಾರ್ಯ ನಿರ್ವಹಿಸುತ್ತಿರುವವರಿಗೆ ಬಡ್ತಿ ನೀಡಬೇಕು.
ಮುಂಬಡ್ತಿ ಮತ್ತು ನೇರ ನೇಮಕಾತಿ ಮೂಲಕ ಆಯ್ಕೆಯಾಗಿ ಸುಮಾರು 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಒಂದೇ ಬಾರಿಗೆ ಶೇ. 100 ರಷ್ಟು ಬಡ್ತಿ ನೀಡಿ ಗ್ರೇಡ್ 1 ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಬೇಕು.
ಪಂಚಾಯತ್ ರಾಜ್ ಇಲಾಖೆಯ ಪತ್ರಾಂಕಿತ ಅಧಿಕಾರಿಗಳ ಬೇಡಿಕೆಗಳೇನು?
ಬೇರೆ ಇಲಾಖೆಯ ಅಧಿಕಾರಿಗಳನ್ನು ಪ್ರಭಾರ ನೀಡುವ ಬದಲು ಇಲಾಖೆಯ ಅಧಿಕಾರಿಗಳಿಗೇ ಹೆಚ್ಚುವರಿ ಪ್ರಭಾರ ಮತ್ತು ಕಿರಿಯ ಅಧಿಕಾರಿಗಳಿಗೆ ಸ್ವತಂತ್ರ ಪ್ರಭಾರ ಹುದ್ದೆಗಳನ್ನು ನೀಡಬೇಕು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯ ಶೇ. 33 ರಷ್ಟು ಹುದ್ದೆಗಳನ್ನು ಮೀಸಲಿರಿಸಿ, ಸುಮಾರು 15 ರಿಂದ 20 ವರ್ಷಗಳಿಂದ ಕಾರ್ಯ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಿಗೆ ಆ ಹುದ್ದೆಗಳನ್ನು ನೀಡಬೇಕು.
ಇಲಾಖೆಯ ಸಮಗ್ರ ವೃಂದ ಮತ್ತು ನೇಮಕಾತಿ ನೀಯಮಗಳನ್ನು ಕೂಡಲೇ ಪರಿಷ್ಕರಿಸಬೇಕು.
ಕಾರ್ಯ ನಿರ್ವಾಹಕ ಅಧಿಕಾರಿ, ಉಪ ವಿಭಾಗಾಧಿಕಾರಿ ಹುದ್ದೆಯ ವೇತನ ಶ್ರೇಣಿಯಲ್ಲಿನ ತಾರತಮ್ಯವನ್ನು ಸರಿಪಡಿಸಬೇಕು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಕುವೆಂಪು ವಿವಿ’ಯಿಂದ ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ
ಉಡುಪಿ:ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
Good News: ದಸರಾ ಹಬ್ಬದ ಪ್ರಯುಕ್ತ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸಂಚಾರ