ಬೆಂಗಳೂರು: ಕಳೆದ ಒಂದು ವರ್ಷದಿಂದ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯಗಳಲ್ಲಿ ತಕರಾರು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುತ್ತಿದ್ದು, ಬಾಕಿ ಪ್ರಕರಣಗಳನ್ನೂ ಮುಂದಿನ ಆರು ತಿಂಗಳಲ್ಲಿ ವಿಲೇಗೊಳಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸಮಯದ ಗಡುವು ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಎಸಿ ಕೋರ್ಟ್ ಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
“ಕಳೆದ ವರ್ಷ ನಾನು ಕಂದಾಯ ಇಲಾಖೆ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಎಸಿ ನ್ಯಾಯಾಲಯಗಳಲ್ಲಿ 73,682 ತಕರಾರು ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 33,207 ಪ್ರಕರಣಗಳನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಇತ್ಯರ್ಥಗೊಳಿಸಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ರೈತರು -ಸಾರ್ವಜನಿಕರು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದಕ್ಕೆ ಬ್ರೇಕ್ ಹಾಕಿರುವುದು, ಹಲವು ರೈತರಿಗೆ ನ್ಯಾಯ ಒದಗಿಸಿ ನೆಮ್ಮದಿ ನೀಡಿರುವುದು ಸಾರ್ಥಕದ ಕೆಲಸ” ಎಂದು ಮೆಚ್ಚುಗೆ ಸೂಚಿಸಿದರು.
“ಎಸಿ ಕೋರ್ಟ್ನಲ್ಲಿರುವ ತಕರಾರು ಪ್ರಕರಣಗಳನ್ನು ಆರು ತಿಂಗಳ ಒಳಗೆ ವಿಲೇವಾರಿಗೊಳಿಸಬೇಕು ಎಂಬುದು ಕಾನೂನು. ಆದರೆ, ನಾನು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪ್ರಗತಿ ಪರಿಶೀಲನೆ ನಡೆಸಿದಾಗ, ಐದು ವರ್ಷದ ಹಳೆಯ ಪ್ರಕರಣಗಳೂ ಇತ್ಯರ್ಥಗೊಳ್ಳದೆ ಬಾಕಿ ಉಳಿದಿರುವುದು ಗಮನಕ್ಕೆ ಬಂದಿತ್ತು. ರೈತರು ಇದರ ನೇರ ಪರಿಣಾಮ ಅನುಭವಿಸಬೇಕಿತ್ತು. ಇದೇ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಅಭಿಯಾನದ ಮಾದರಿಯಲ್ಲಿ ಎಸಿ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಇತ್ಯರ್ಥಕ್ಕೆ ವೇಗ ನೀಡಲಾಯಿತು.
ಸಾಗಿಬಂದ ಹಾದಿ ಸಣ್ಣದಿದ್ದು, ಕ್ರಮಿಸಬೇಕಾದ ದೂರ ಇನ್ನೂ ಸಾಕಷ್ಟಿದೆ. ಕನಿಷ್ಟ 40 ಸಾವಿರ ತಕರಾರು ಪ್ರಕರಣಗಳು ಇನ್ನೂ ಬಾಕಿ ಇವೆ. ಮುಂದಿನ ಆರು ತಿಂಗಳಲ್ಲಿ ಈ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು. ಹಲವು ಅಧಿಕಾರಿಗಳು ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವರು ಇನ್ನೂ ಟ್ರ್ಯಾಕ್ಗೆ ಬಂದಿಲ್ಲ. ಎಲ್ಲಾ ಅಧಿಕಾರಿಗಳು ಒಟ್ಟಾಗಿ ಕೈಜೋಡಿಸಿದರೆ ಬಾಕಿ ಪ್ರಕರಣಗಳಿಗೂ ಮುಕ್ತಿ ನೀಡುವುದು, ರೈತರಿಗೆ ನ್ಯಾಯ ಒದಗಿಸುವುದು ಕಷ್ಟದ ಮಾತಲ್ಲ” ಎಂದು ಅವರು ತಿಳಿಸಿದರು.
“ಕಳೆದ ಒಂದು ವರ್ಷದಲ್ಲಿ ಒಂಬತ್ತು ಬಾರಿ ಉಪ ವಿಭಾಗಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗಿದೆ. ಮುಂದಿನ ತಿಂಗಳ ಮೊದಲ ವಾರವೂ ಮತ್ತೊಂದು ಸಭೆ ನಡೆಸಲಾಗುವುದು. ಆ ವೇಳೆಗೆ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಎಷ್ಟು ಪ್ರಕರಣಗಳನ್ನು ವಿಲೇಗೊಳಿಸಿದ್ದೀರಿ? ಎಂದು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಹೀಗಾಗಿ ತಮ್ಮ ಕೆಲಸಗಳಿಗೆ ಮತ್ತಷ್ಟು ವೇಗ ನೀಡಿ” ಎಂದು ತಾಕೀತು ಮಾಡಿದರು.
ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ
ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರೈತರಿಗೆ ಶೀಘ್ರ ನ್ಯಾಯ ಒದಗಿಸುವ ಸಲುವಾಗಿ, ರೆಗ್ಯುಲರ್ ಕೋರ್ಟ್ ಗಳ ಜೊತೆ ತುಮಕೂರು ಮಂಡ್ಯ ಮೈಸೂರು ರಾಮನಗರ ಬೆಂಗಳೂರು ಗ್ರಾಮಾಂತರ, ಕುಂದಾಪುರ ಸೇರಿ 11 ಜಿಲ್ಲೆಗಳಲ್ಲಿ 20ಕ್ಕೂ ಅಧಿಕ ವಿಶೇಷ ನ್ಯಾಯಾಲಯಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಪ್ರಕರಣಗಳ ವಿಲೇವಾರಿಗೆ ವೇಗ ತುಂಬಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಉಡುಪಿ:ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
Good News: ದಸರಾ ಹಬ್ಬದ ಪ್ರಯುಕ್ತ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸಂಚಾರ
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಮಹತ್ವದ ಮಾಹಿತಿ: ಈ ಹಂತ ಅನುಸರಿಸಿ, ‘ಆನ್ ಲೈನ್’ನಲ್ಲೇ ‘ಇ-ಖಾತಾ’ ವೀಕ್ಷಿಸಿ