ಬೆಂಗಳೂರು: ರಾಜ್ಯ ಸರ್ಕಾರದಿಂದ ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಲಾಗಿದೆ. ಅದೇ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಖಾಲಿ ಇರುವಂತ 5,267 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕ 103ರಲ್ಲಿ “ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ವಿವಿಧ ವಿಷಯಗಳ ಶಿಕ್ಷಕರು / ಉಪನ್ಯಾಸಕರುಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು” ಎಂದು ಘೋಷಿಸಲಾಗಿರುತ್ತದೆ ಎಂದಿದ್ದಾರೆ.
ಅದರಂತೆ, ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಂಜೂರಾಗಿ ವಸ್ತುತ ಖಾಲಿ ಇರುವ ಒಟ್ಟು 6584 ಶಿಕ್ಷಕರ ಹುದ್ದೆಗಳ ವೈಕಿ ಶೇ. 80 ರಷ್ಟು ಅಂದರೆ ಒಟ್ಟು 5267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿ ಹುದ್ದೆಗಳ ವಿವರಗಳೊಂದಿಗೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಮೇಲೆ ಓದಲಾದ ಕ್ರಮಾಂಕ (2)ರಲ್ಲಿ ಸರ್ಕಾರಕ್ಕೆ ವುಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು, ಈ ಕೆಳಕಂಡಂತೆ ಆದೇಶಿಸಿದ್ದಾರೆ.
ವಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 103ರಲ್ಲಿ ಘೋಷಿಸಿರುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಂಜೂರಾಗಿ ಪ್ರಸ್ತುತ ಖಾಲಿ ಇರುವ ಒಟ್ಟು 6584 ಶಿಕ್ಷಕರ ಹುದ್ದೆಗಳ ಪೈಕಿ ಶೇ. 80 ರಷ್ಟು ಅಂದರೆ ಈ ಕೆಳಗೆ ವಿವರಿಸಲಾದಂತ ಒಟ್ಟು 5267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರದ ಅನುಮತಿ ನೀಡಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ ಹುದ್ದೆಗಳ ಭರ್ತಿ ವಿವರ ಹೀಗಿದೆ..
- ಪಿಜಿಟಿ 1 ರಿಂದ 5ನೇ ತರಗತಿ ಶಿಕ್ಷಕರು – 4,424 ಹುದ್ದೆಗಳು
- ಜಿಪಿಟಿ 6 ರಿಂದ 8ನೇ ತರಗತಿ ಶಿಕ್ಷಕರು – 78 ಹುದ್ದೆ
- ಪಿಇಟಿ ( ಗ್ರೇಡ್-2) ಶಿಕ್ಷಕರು – 380 ಹುದ್ದೆಗಳು
- ಎಸ್ ಇಸಿ ಎಎಂ ಶಿಕ್ಷಕರು – 121 ಹುದ್ದೆಗಳು
- ಎಸ್ಇಸಿ ಪಿಇಟಿ ಶಿಕ್ಷಕರು – 216 ಹುದ್ದೆಗಳು
- ಎಸ್ಇಸಿ ಎಸ್ ಪಿಎಲ್ ಶಿಕ್ಷಕರು – 48
ಒಟ್ಟು ಹುದ್ದೆಗಳ ಸಂಖ್ಯೆ 5,267
ಮುಂದುವರೆದು, ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ಪೂರ್ವ ಪುಕ್ರಿಯೆಗಳು ಮುಕ್ತಾಯಗೊಂಡ ನಂತರ ಮತ್ತು ನೇಮಕಾತಿ ಆದೇಶ ನೀಡುವ ಮೊದಲು ಸದರಿ ಹುದ್ದೆಗಳಿಗೆ ತಗಲಬಹುದಾದ ಆರ್ಥಿಕ ಆಯವ್ಯಯವನ್ನು ಅಂದಾಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಸದರಿ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ: ಆಇ 389 ವೆಚ್ಚ-8/2024, ದಿನಾಂಕ: 03.10.2024ರಲ್ಲಿ ನೀಡಿರುವ ಅಭಿಪ್ರಾಯದನ್ವಯ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು