ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಹೊಸ ಕಾನೂನು ಜಾರಿಗೆ ಬರಲಿದ್ದು, ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಮಹತ್ವದ ಕ್ರಮ ಕೈಗೊಂಡಿರುವ ಸರ್ಕಾರ, ಕ್ಯೂಆರ್ ಕೋಡ್ ಮತ್ತು ಚಿಪ್ ಹೊಂದಿದ ಸ್ಮಾರ್ಟ್ ಡಿಎಲ್ ಮತ್ತು ಆರ್‌ಸಿಗಳನ್ನು 2025ರ ಜನವರಿಯಿಂದ ವಿತರಿಸಲು ಮುಂದಾಗಿದೆ.
ಹೌದು, ಈಗಾಗಲೇ ನಿಮ್ಮ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳಲ್ಲಿ ಚಿಪ್ ಇದೆ. ಇನ್ಮುಂದೆ ಹೊಸ ಡಿಎಲ್‌ಗಳಲ್ಲಿ ಕ್ಯೂಆರ್ ಕೋಡ್ ಕೂಡಾ ಇರಲಿದೆ. 2025 ರ ಜನವರಿಯಿಂದ ಈ ಯೋಜನೆ ಜಾರಿಗೆ ಬರಲಿದೆ. ದೇಶಾದ್ಯಂತ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳು ಒಂದೇ ರೀತಿ ಇರಬೇಕು ಅನ್ನೋದು ಸರ್ಕಾರದ ಚಿಂತನೆ. ವಾಹನ ಚಾಲನಾ ಪರವಾನಗಿ ಹಾಗೂ ವಾಹನಗಳ ನೋಂದಣಿ ಪ್ರಮಾಣ ಪತ್ರದಲ್ಲಿ ಇರುವ ಎಲ್ಲಾ ರೀತಿಯ ಲೋಪ ದೋಷಗಳನ್ನ ನಿವಾರಣೆ ಮಾಡಬೇಕು ಅನ್ನೋದು ಸರ್ಕಾರದ ನಿಲುವು. ಇದಕ್ಕಾಗಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಒಂದಷ್ಟು ನಿಯಮಾವಳಿಗಳನ್ನ ರೂಪಿಸಿದೆ. ಈ ನಿಯಮಾವಳಿಗಳ ಪ್ರಕಾರವೇ ಎಲ್ಲ ರಾಜ್ಯಗಳಲ್ಲೂ ಹೊಸ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಡಿಎಲ್‌ನ ಮುಂಭಾಗದಲ್ಲಿ ಕಾರ್ಡ್ ಮಾಲೀಕರ ಹೆಸರು, ಫೋಟೋ, ಅಡ್ರೆಸ್, ಹುಟ್ಟಿದ ದಿನಾಂಕ, ರಕ್ತದ ಗುಂಪು ಸೇರಿದಂತೆ ಹಲವು ವಿವರಗಳು ಇರುತ್ತವೆ. ಡಿಎಲ್‌ನ ಹಿಂಭಾಗದಲ್ಲಿ ನಿಮ್ಮ ಮೊಬೈಲ್ ನಂಬರ್, ಯಾವೆಲ್ಲಾ ಮಾದರಿಯ ವಾಹನ ಚಲಾಯಿಸಲು ಅನುಮತಿ ಇದೆ ಅನ್ನೋ ವಿವರ ಇರುತ್ತೆ. ಇನ್ನು ಈ ಎಲ್ಲಾ ವಿಷಯಗಳೂ ಚಿಪ್‌ಗಳಲ್ಲಿ ಇರುವ ಜೊತೆಯಲ್ಲೇ ಕ್ಯೂ ಆರ್ ಕೋಡ್‌ನಲ್ಲೂ ಇರಲಿದೆ. ಅಷ್ಟೇ ಅಲ್ಲ, ತುರ್ತು ಸಂಪರ್ಕ ಸಂಖ್ಯೆ ಕೂಡಾ ಇರುತ್ತೆ.
ಡಿಎಲ್ ಮತ್ತು ಆರ್.ಸಿ. ಸ್ಮಾರ್ಟ್ ಕಾರ್ಡ್ ಟೆಂಡರ್ ಕರೆಯಲಾಗಿದ್ದು, ಪರಿಶೀಲನೆ ಹಂತದಲ್ಲಿದೆ. ಇನ್ನೆರಡು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಂಡು ಅನುಮೋದನೆ ದೊರೆತಲ್ಲಿ 60 ದಿನದಲ್ಲಿ ಸ್ಮಾರ್ಟ್ ಡಿಎಲ್ ಮತ್ತು ಆರ್.ಸಿ. ಕಾರ್ಡ್ ಗಳ ವಿತರಣೆ ಆರಂಭವಾಗಲಿದೆ. ಎಲ್ಲಾ ರಾಜ್ಯಗಳ ಡಿಎಲ್ ಗಳು ಮತ್ತು ಆರ್.ಸಿ.ಗಳು ಒಂದೇ ರೀತಿ ಇರಲಿದ್ದು, ಕ್ಯೂಆರ್ ಕೋಡ್ ನಿಂದಾಗಿ ಸಂಚಾರ ಪೊಲೀಸರು ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು ಸುಲಭವಾಗಿ ವಾಹನ ಚಾಲಕರು, ಮಾಲೀಕರ ವಿವರ ಪರಿಶೀಲಿಸಬಹುದಾಗಿದೆ. ಡಿಎಲ್ ನಲ್ಲಿ ಕಾರ್ಡ್ ದಾರರ ಹೆಸರು, ಫೋಟೋ, ವಿಳಾಸ, ಸಿಂಧುತ್ವ ಅವಧಿ, ಜನ್ಮ ದಿನಾಂಕ, ರಕ್ತದ ಗುಂಪು ಮೊಬೈಲ್ ಸಂಖ್ಯೆ, ತುರ್ತು ಸಂಪರ್ಕ ಸಂಖ್ಯೆ ಸೇರಿ 25ಕ್ಕೂ ಹೆಚ್ಚು ಮಾಹಿತಿ ಇರುತ್ತದೆ.
ಹೊಸ ಆರ್‌ಸಿ ಕಾರ್ಡ್ ಮುಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆ, ನೋಂದಣಿ ಆದ ದಿನಾಂಕ, ಕಾರ್ಡ್ ಅಂತ್ಯ ಆಗುವ ದಿನಾಂಕ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ ಜೊತೆಯಲ್ಲೇ ವಾಹನಗಳ ಟ್ರ್ಯಾಕಿಂಗ್ ಸಿಸ್ಟಂ ಕೂಡಾ ಅಳವಡಿಕೆ ಮಾಡಲಾಗಿರುತ್ತೆ. ಇನ್ನು ಆರ್‌ಸಿ ಕಾರ್ಡ್‌ನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳನ್ನು ನಮೂದು ಮಾಡಲಾಗಿರುತ್ತದೆ.