ಮಂಡ್ಯ : ಶಿಂಷಾ ನದಿಗೆ ಅಡ್ಡಲಾಗಿ ಐದು ಕಡೆ ಹೊಸದಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಕಬ್ಬಾರೆ, ನೀಲಕಂಠನಹಳ್ಳಿ ಹಾಗೂ ಕೆ.ಕೋಡಿಹಳ್ಳಿ ಗ್ರಾಮಗಳ ಏತ ನೀರಾವರಿ ಯೋಜನೆಗಳನ್ನು ಮಂಗಳವಾರ ಅಧಿಕಾರಿಗಳ ಜೊತೆಗೂಡಿ ವೀಕ್ಷಣೆ ಮಾಡಿ ಸಮರ್ಪಕವಾಗಿ ಮಾಹಿತಿ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ಶಿಂಷಾ ನದಿಯಿಂದ ಹಲವು ಕಡೆ ಏತ ನೀರಾವರಿ ಯೋಜನೆಯನ್ನು ನಿರ್ಮಾಣ ಮಾಡಿ ಸರಿಯಾಗಿ ಕಾರ್ಯಾರಂಭ ಮಾಡದೇ ನಿರ್ಲಕ್ಷ ಮಾಡಲಾಗಿತ್ತು. ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿ ಮೋಟಾರ್, ಪೈಪ್ ಹಾಗೂ ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೀಗಾಗಿ ಹಳೆಯ ಯಂತ್ರಗಳನ್ನು ತೆರವುಗೊಳಿಸಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇನ್ನು ಶಿಂಷಾ ನದಿಗೆ ಅಡ್ಡಲಾಗಿ ಹೊಸದಾಗಿ ಐದು ಕಡೆ ಚೆಕ್ ಡ್ಯಾಂ ನಿರ್ಮಾಣ ಮಾಡಲು ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಇದರಿಂದ ಆತಗೂರು ಹಾಗೂ ಕಸಬಾ ಹೋಬಳಿಯ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೊಳ್ಳಲಾಗಿದ್ದು, ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮದ್ದೂರು ತಾಲೂಕಿನ ಕೊನೆ ಭಾಗಕ್ಕೆ ಕೆ.ಆರ್.ಎಸ್ ಅಣೆಕಟ್ಟೆಯಿಂದ ಸರಾಗವಾಗಿ ನೀರು ಹರಿಯುವಂತೆ ನಾಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ರಘುರಾಮನ್, ಇಇ ಬಾಬಾ ಕೃಷ್ಣಾದೇವ್, ಎಇಇ ಗೋಪಿನಾಥ್, ಎಇ ರವಿ ಜಾವೀದ್, ಸಣ್ಣ ನೀರಾವರಿ ಇಲಾಖೆಯ ಜೆಇಗಳಾದ ಕೋಡಿಗೌಡ, ಕಿರಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಗ್ರಾಪಂ ಸದಸ್ಯರಾದ ಪ್ರೀತಂ, ರಾಘವೇಂದ್ರ, ಮಾದೇಶ್, ಹನುಮೇಗೌಡ ಮುಖಂಡರಾದ ರವೀಂದ್ರ ಕುಮಾರ್, ರಾಜು, ಪ್ರದೀಪ್, ಅಪ್ಪೇಗೌಡ, ವೆಂಕಟೇಶ್, ಜಗದೀಶ್, ಶಂಕರ್, ನೀಲಯ್ಯ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BIG BREAKING: ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ವಾಪಾಸ್ ನೀಡಿದ್ದ 14 ಮುಡಾ ನಿವೇಶನಗಳ ಖಾತೆ ರದ್ದು