ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಾರಕ್ಕೆ 6 ದಿನ ಮೊಟ್ಟೆ ವಿತರಣೆ ಮಾಡಲಾಗುತ್ತದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ 1 ರಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆಅವರಲ್ಲಿರುವ ಅಪೌಷ್ಟಿಕತೆ ನಿವಾರಿಸಲು, ರಕ್ತ ಹೀನತೆ ತಡೆಗಟ್ಟಲು, ಬಹು ಪೋಷಕಾಂಶಗಳ ನ್ಯೂನತೆಯನ್ನು ಹೋಗಲಾಡಿಸಲು, ಆರೋಗ್ಯಕರ ದೈಹಿಕ, ಮಾನಸಿಕ ಬೆಳವಣಿಗೆಯನ್ನು ಹೆಚ್ಚಿಸಲು, ನಿರಂತರ ಕಲಿಕೆಯನ್ನು ಪ್ರೋತ್ಸಾಹಿಸಲು ಮತ್ತು ಶಾಲಾ ತರಗತಿ ದಾಖಲಾತಿಯನ್ನು ಹೆಚ್ಚಿಸಲು ಮಧ್ಯಾಹ್ನ ಬಿಸಿಯೂಟ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸಲಾಗುತ್ತಿದೆ.
ಪೂರಕ ಪೌಷ್ಟಿಕ ಆಹಾರವಾಗಿ ಬಿಸಿಹಾಲು, ಮೊಟ್ಟೆ ಬಾಳೆಹಣು/ಶೇಂಗಾ ಚಿಕ್ಕಿಯನ್ನು ಹಾಗೂ ರಾಗಿ ಮಾಲ್ಟ್ ವಿತರಿಸುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮುನ್ನಡೆಸಿಕೊಂಡು ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಜೀಂ ಪ್ರೇಮ್ ಜಿ ಪೌಂಡೇಶನ್ ರವರ ಸಹಯೋಗದಲ್ಲಿ ವಾರದ 6 ದಿನಗಳಿಗೆ ಮೊಟ್ಟೆ ವಿತರಣೆ ಕಾರ್ಯಕ್ರಮವನ್ನು ದಿನಾಂಕ : 20.07.2024 ರಂದು ಉದ್ಘಾಟಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ದಿನಾಂಕ : 25.09.2024 ರಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮತ್ತು ಎಲ್ಲಾ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ 2 ದಿನಗಳಿಗೆ ಮೊಟ್ಟೆ ಒದಗಿಸುತ್ತಿರುವುದರೊಂದಿಗೆ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ವಾರದ ಉಳಿದ 4 ದಿನಗಳಿಗೆ ಮೊಟ್ಟೆ, ವಿತರಣೆಯನ್ನು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಅರಕೇರಾ.ಕೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಾನ್ಯ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರು ಒಟ್ಟು 06 ದಿನಗಳಿಗೆ ಪೂರಕ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ವಿತರಿಸುವ ಮೂಲಕ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆಂದು ಈ ಮೂಲಕ ತಿಳಿಸಲಾಗಿದೆ.