ಬೆಂಗಳೂರು : ತಿರುಪತಿಯ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಸೇರಿದಂತೆ ಪ್ರಾಣಿಗಳ ಕೊಬ್ಬು ಬಳಕೆ ಆರೋಪದ ವಿಚಾರವಾಗಿ, ಇದೀಗ ರಾಜ್ಯದಲ್ಲಿ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ನಂದಿನಿ ತುಪ್ಪ ಹೊರತುಪಡಿಸಿ, ಉಳಿದ ತುಪ್ಪಗಳ ಸ್ಯಾಂಪಲ್ ಪರಿಶೀಲಿಸಿ ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಹೌದು ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಯಲ್ಲಿ ದನದ ಮಾಂಸ, ಮೀನಿನ ಎಣ್ಣೆ, ಹಂದಿಯ ಕೊಬ್ಬು ಬಳಕೆಯ ವಿಚಾರವಾಗಿ ಇದೀಗ ಸಚಿವ ದಿನೇಶ್ ಗುಂಡೂರಾವ್ ಅವರು, ನಂದಿನಿ ತುಪ್ಪ ಹೊರತುಪಡಿಸಿ, ರಾಜ್ಯದಲ್ಲಿ ಮಾರಾಟವಾಗುತ್ತಿರುವ ಉಳಿದ ತುಪ್ಪದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅದರ ಗುಣಮಟ್ಟ ಕಾಪಾಡಲು ಪರಿಶೀಲನೆ ಮಾಡಬೇಕು. ಪ್ರಸಾದಗಳ ಸ್ಯಾಂಪಲ್ ಪರಿಶೀಲನೆ ಅಲ್ಲ, ನೇರವಾಗಿ ತುಪ್ಪದ ಪರಿಶೀಲನೆ ಮಾಡಬೇಕು ಎಂದರು.
ಪ್ರಸಾದದ ಪರಿಶೀಲನೆ ನಾವು ಮಾಡುತ್ತಿಲ್ಲ. ಬೇರೆ ಪದಾರ್ಥಗಳಲ್ಲಿ ಕಲಬೆರಕೆ ಆಗುವ ಸಾಧ್ಯತೆ ಕಡಿಮೆ. ಆದರೆ ಆಂಧ್ರ ಮುಖ್ಯಮಂತ್ರಿ ತುಪ್ಪದಲ್ಲಿ ಬೇರೆ ಬೇರೆ ಕೊಬ್ಬಿನಾಂಶ ಇತ್ತೆಂದು ಹೇಳಿರುವುದು ಆತಂಕಕಾರಿಯಾದ ವಿಚಾರ. ಒಬ್ಬ ಸಿಎಂ ಹೇಳಿದ ಮೇಲೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ದೇವರ ಬಗ್ಗೆ ಶ್ರದ್ಧೆ ಇರೋರಿಗೆ ಈ ವಿಚಾರ ಬಹಳ ಆಘಾತಕಾರಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಪರಿಶೀಲನೆ ಮಾಡಿ ಎಂದು ಹೇಳಿದ್ದೇವೆ ಎಂದರು.
ರಾಜ್ಯದಲ್ಲಿ ಬಳಸುತ್ತಿರುವ ತುಪ್ಪದ ಬಗ್ಗೆ ತಪಾಸಣೆ ಮಾಡಲು ನಮ್ಮ ಆಹಾರ ಸುರಕ್ಷತಾ ಆಯುಕ್ತರಿಗೆ ಹೇಳಿದ್ದೇನೆ. ಈಗಾಗಲೇ ಸ್ಯಾಂಪಲ್ ಕಲೆಕ್ಟ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ತಿರುಪತಿಯಲ್ಲಿ ಆದ ರೀತಿ ಕೊಬ್ಬಿನ ಅಂಶಗಳು ಇಲ್ಲಿ ಬಳಕೆಯಾಗುತ್ತಿರುವ ತುಪ್ಪದಲ್ಲಿ ಇದೆಯಾ ಎಂದು ನೋಡುತ್ತಿದ್ದೇವೆ. ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತದೆ. ಎಲ್ಲಾ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲಿಸಲು ಹೇಳಿದ್ದೇನೆ ಎಂದರು.