ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 117 ಕೋಟಿ ರೂ. ಅವ್ಯವಹಾರ ಆಗಿದ್ದು, ಇದರ ನೈತಿಕ ಹೊಣೆ ಹೊತ್ತು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಒತ್ತಾಯಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಅವ್ಯವಹಾರದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ನಡೆಸಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಕೂಡಲೇ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ರಾಜೀನಾಮೆ ಪಡೆಯಬೇಕು ಎಂದು ತಿಳಿಸಿದರು.
ಇದೇ 24ರಂದು ಇದರ ಕುರಿತು ನಾವು ಲೋಕಾಯುಕ್ತರಿಗೆ ದೂರು ಕೊಡಲಿದ್ದೇವೆ. ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಮಾನ್ಯ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಹಗರಣ ನಡೆದಿದೆ. ರೋಗಿಗಳಿಗೆ ಆರೋಗ್ಯ ಸೇವೆಗೆ ರಾಜ್ಯದ ಹಾವೇರಿ, ಗುಲ್ಬರ್ಗ, ಕೊಪ್ಪಳ, ಯಾದಗಿರಿ, ಬೆಂಗಳೂರು, ಮೈಸೂರು ಮೊದಲಾದ 18 ವೈದ್ಯಕೀಯ ಕಾಲೇಜುಗಳಿಗೆ 114 ಮಾಡ್ಯುಲರ್ ಆಪರೇಷನ್ ಥಿಯೇಟರ್ ಉಪಕರಣಗಳನ್ನು ಖರೀದಿಸಿದ್ದು, 176.70 ಕೋಟಿ ಖರ್ಚು ಮಾಡಿದ್ದಾರೆ ಎಂದರು.
ಟೆಂಡರ್ ಕರೆಯಲು ಕಂಪೆನಿ ಹೆಸರನ್ನು ಬದಲಿಸಿದ್ದು, ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ವೈದ್ಯಕೀಯ ಶಿಕ್ಷಣ ಸಚಿವ, ವೈದ್ಯಕೀಯ ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಈ ಹಗರಣದಲ್ಲಿ ಭಾಗವಹಿಸಿದ ದಟ್ಟವಾದ ಸುದ್ದಿ ಇದೆ. ಸರಕಾರವು ಶೇ 60 ಮತ್ತು ಸಂಬಂಧಿತ ಸಂಸ್ಥೆಯು ಆಂತರಿಕ ಸಂಪನ್ಮೂಲದಿಂದ ಶೇ 40 ಹಣ ಭರಿಸುತ್ತಿವೆ ಎಂದು ವಿವರಿಸಿದರು.
ಸರಕಾರಕ್ಕೆ 117 ಕೋಟಿ ನಷ್ಟವಾಗಿದೆ. ಡಾ.ಶರಣಪ್ರಕಾಶ್ ಪಾಟೀಲ್, ಅಧಿಕಾರಿಗಳು, ದಿನೇಶ್ ಗುಂಡೂರಾವ್, ಉಪಕರಣ ಸರಬರಾಜು ಮಾಡಿದ ಸಂಸ್ಥೆಗೆ ಇದರ ಲಾಭ ಆಗಿರುವ ಸಾಧ್ಯತೆ ಇದೆ. ಹಿಂದೆ 50 ಉಪಕರಣ ಪೂರೈಕೆ ಮಾಡಿದ ಕೇರಳ ವೈದ್ಯಕೀಯ ಸೇವಾ ನಿಗಮದ ಎಂ.ಎಸ್.ಕ್ರಿಯೇಟಿವ್ ಹೆಲ್ತ್ ಟೆಕ್ ಪ್ರೈವೆಟ್ ಲಿಮಿಡೆಟ್ ಸಂಸ್ಥೆ ಇದೇ ಮಾಡ್ಯುಲರ್ ಥಿಯೇಟರ್ ಉಪಕರಣಕ್ಕೆ ಪ್ರತಿಯೊಂದಕ್ಕೆ 49.70 ಲಕ್ಷದ (ಸುಮಾರು 50 ಲಕ್ಷ) ಟೆಂಡರ್‍ಗೆ ಹಾಕಿದ್ದರು. 3 ವರ್ಷ ವಾರಂಟಿ ಎಂದು ತಿಳಿಸಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಿಮ್ಸ್ ಆಸ್ಪತ್ರೆಯ ಟ್ರಾಮಾ ಸೆಂಟರ್‍ಗೆ ಮಾಡ್ಯುಲರ್ ಥಿಯೇಟರ್‍ಗೆ 1.10 ಕೋಟಿಯಂತೆ ಶಿವೋನ್ ಇಂಡಿಯ ಕಂಪೆನಿಗೆ (50 ಲಕ್ಷದ ಎಂ.ಎಸ್.ಕ್ರಿಯೇಟಿವ್ ಬಿಟ್ಟು) ಕಾರ್ಯಾದೇಶ ಮಾಡಿದೆ ಎಂದು ವಿವರ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯು ಒಂದು ವರ್ಷ ವಾರಂಟಿ ಕೊಡುವ ಎಂ.ಎಸ್.ಲಕ್ಷ್ಮಣ್ಯ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್‍ಗೆ ಪ್ರತಿ ಮಾಡ್ಯುಲರ್ ಆಪರೇಷನ್ ಥಿಯೇಟರ್‍ಗೆ 1 ಕೋಟಿ 29 ಲಕ್ಷದ 69 ಸಾವಿರ ಹಾಗೂ ಜಿಎಸ್‍ಟಿ 23,33,800 ಒಟ್ಟು ಸೇರಿ 1.52 ಕೋಟಿಗೆ ನೀಡಲಾಗಿದೆ. ಕೇರಳದ್ದಾದರೆ ಸುಮಾರು 50 ಲಕ್ಷದಲ್ಲಿ ಖರೀದಿ ಆಗುತ್ತಿತ್ತು ಎಂದು ತಿಳಿಸಿದರು. ಕೇರಳದ ಸಂಸ್ಥೆಗೆ ಹೋಲಿಸಿದರೆ ಸುಮಾರು 3 ಪಟ್ಟು ಹೆಚ್ಚು ದರಕ್ಕೆ ಕೊಟ್ಟಿದ್ದು, ಹಗರಣ ನಡೆಸಲಾಗಿದೆ ಎಂದರು. ಒಂದು ಉಪಕರಣಕ್ಕೆ 1 ಕೋಟಿ ಲಾಭ ಸಿಗುತ್ತಿತ್ತು. 114 ಉಪಕರಣಕ್ಕೆ 117 ಕೋಟಿ ಅವ್ಯವಹಾರ ಆಗಿದೆ ಎಂದು ತಿಳಿಸಿದರು.
ಟೆಂಡರ್‍ನಲ್ಲಿ ಹತ್ತಾರು ಕೋಟಿ ಕಿಕ್ ಬ್ಯಾಕ್ ಸಂದಾಯವಾಗಿದೆ. ಟೆಂಡರ್‍ನಲ್ಲಿ 4 ಕಂಪೆನಿಗಳು ಬಿಡ್ ಸಲ್ಲಿಸಿದ್ದು 3 ಕಂಪೆನಿಗಳನ್ನು ತಿರಸ್ಕರಿಸಿದ್ದಾರೆ. ಯಾವ್ಯಾವ ಕಂಪೆನಿ ಎಷ್ಟು ದರದ ಬಿಡ್ ಸಲ್ಲಿಸಿದ್ದವು ಎಂದು ಕೇಳಿದ್ದು ಮಾಹಿತಿ ಕೊಟ್ಟಿಲ್ಲ ಎಂದು ಆಪಾದಿಸಿದರು. 114 ಉಪಕರಣ ಖರೀದಿಯಲ್ಲಿ 117 ಕೋಟಿ ಮೊತ್ತದ ಭ್ರಷ್ಟಾಚಾರ ಆಗಿದೆ ಎಂದು ಅವರು ಆರೋಪಿಸಿದರು.
ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತಕುಮಾರ್, ರಾಜ್ಯ ವಕ್ತಾರ ಮೋಹನ್ ವಿಶ್ವ, ಕಾನೂನು ಪ್ರಕೋಷ್ಟದ ರಾಜ್ಯ ಸದಸ್ಯ ರಮೇಶ್ ಸುಲ್ತಾನ್‍ಪುರ್, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ವಿಶೇಷ ರೈಲು ಸೇವೆ ವಿಸ್ತರಣೆ | South Western Railway
ಇರಾನ್ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 30 ಕಾರ್ಮಿಕರು ಸಾವು, ಹಲವರಿಗೆ ಗಾಯ | Iran coal mine blast