ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಹಾಲಕ್ಷ್ಮೀಯ ಸ್ನೇಹಿತ ಅಶ್ರಫ್ ಮೇಲೆ ನನಗೆ ಅನುಮಾನ ಇದೆ ಎಂದು ಮಹಾಲಕ್ಷ್ಮಿ ಪತಿ ಹೇಮಂತ್ ದಾಸ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೊಲೆಯಾದ ಮಹಾಲಕ್ಷ್ಮಿ ಪತಿ ಹೇಮಂತ್ ದಾಸ್, ನನಗೆ ಮಹಾಲಕ್ಷ್ಮೀ ಸ್ನೇಹಿತ ಅಶ್ರಫ್ ಮೇಲೆ ಅನುಮಾನ ಇದೆ. ಅಶ್ರಫ್ ಉತ್ತರಾಖಂಡ ಮೂಲದವನು. ಈ ಹಿಂದೆ ನಾನು ನೆಲಮಂಗಲದಲ್ಲಿ ಅಶ್ರಫ್ ವಿರುದ್ಧ ದೂರು ಕೊಟ್ಟಿದ್ದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ನಗರದ ವೈಯ್ಯಾಲಿ ಕಾವಲ್ ನ ಪೈಪ್ ಲೈನ್ ನ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಾಲಕ್ಷ್ಮೀ (26) ಎಂಬ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಳೆದ 19 ದಿನಗಳ ಹಿಂದೆಯೇ ಆಕೆಯನ್ನು ಹತ್ಯೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫ್ರೀಜ್ ನಲ್ಲಿ ಮಹಿಳೆಯ ತಲೆ,ಕಾಲು ಕೈಗಳನ್ನು ತುಂಡು ತುಂಡಾಗಿ ಕತ್ತರಿಸಿ ಇಡಲಾಗಿತ್ತು.
ಹಂತಕ ಮಹಿಳೆಯ ದೇಹವನ್ನು ಬರೋಬ್ಬರಿ 50 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ, ಆ ತುಂಡುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಹೋಗಿದ್ದಾರೆ. ಆಕೆಯ ದೇಹದ ತುಂಡುಗಳಿಂದ ಬಂದ ರಕ್ತ ಫ್ರಿಡ್ಜ್ ನಿಂದ ಸೋರಿಕೆಯಾಗಿ ಮನೆಯ ತುಂಬೆಲ್ಲಾ ಹರಡಿತ್ತು. ಶುಕ್ರವಾರದಂದು ಆಕೆಯಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಬಳಿಕ ಬಾಗಿಲು ತೆರೆದು ನೋಡಿದಾಗ ಮಹಿಳೆಯ ದೇಹ ಫ್ರಿಜ್ ನಲ್ಲಿಟ್ಟಿರುವುದು ಬೆಳಕಿಗೆ ಬಂದಿದೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ 8 ತಂಡವನ್ನು ರಚಿಸಿದ್ದು, ವಿವಿಧ ಆಯಾಮಗಳಿಂದ ತನಿಖೆಗೆ ಮುಂದಾಗಿದ್ದಾರೆ.