ಧಾರವಾಡ : ಖಾತೆಯಲ್ಲಿ ಸಾಕಷ್ಟು ಹಣ ಇರದೇ ಇದ್ದರೂ. ಚೆಕ್ ಮಾನ್ಯ ಮಾಡಿದ ಬ್ಯಾಂಕ್ ಆಪ್ ಮಹಾರಾಷ್ಟ್ರಗೆ ಗ್ರಾಹಕರ ಆಯೋಗ ರೂ.1,40,000/- ದಂಡ ವಿಧಿಸಿದೆ.
ಧಾರವಾಡದ ಕೊಟ್ಟಣದ ಓಣಿ ನಿವಾಸಿ ಸುಮನ್ ಅತ್ತಿಗೇರಿ ಎಂಬುವವರು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರದ ಗ್ರಾಹಕಳಾಗಿದ್ದು, ಆ ಬ್ಯಾಂಕಿನಲ್ಲಿ ತನ್ನ ಉಳಿತಾಯ ಖಾತೆಯನ್ನು ಹೊಂದಿ ತನ್ನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತಾಳೆ. ಹೀಗಿರುವಾಗ ತನ್ನ ಪತಿಯ ಆರೋಗ್ಯದ ಖರ್ಚಿನ ಸಲುವಾಗಿ ಹಾಗೂ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಸಕಾಲಧನ ಸಹಕಾರಿ ಸಂಘದಿಂದ ರೂ.80,000/- ಸಾಲ ಪಡೆದಿದ್ದು, ಆ ಮೊತ್ತವನ್ನು ಸಹಕಾರಿ ಸಂಘದವರು ತನ್ನ ಖಾತೆಗೆ ದಿನಾಂಕ:22/05/2024ರಂದು ವರ್ಗಾವಣೆ ಮಾಡಿರುತ್ತಾರೆ. ತಾನು ಆ ಹಣವನ್ನು ನಗಧೀಕರಣ ಮಾಡಿಕೊಳ್ಳಲು ದಿ:23/05/2024ರಂದು ಸದರಿ ಎದುರುದಾರ ಬ್ಯಾಂಕಿಗೆ ಹೋದಾಗ ತನ್ನ ಖಾತೆಯಲ್ಲಿ ಯಾವುದೇ ಹಣ ಜಮಾ ಇರುವುದಿಲ್ಲ ಅಂತಾ ತಿಳಿಸಿರುತ್ತಾರೆ. ತದ ನಂತರ ತನ್ನ ಬ್ಯಾಂಕ್ ಪಾಸಬುಕ್‍ನಲ್ಲಿ ಹಣ ಜಮೆ ಆದ ಕುರಿತು ಎದುರುದಾರರ ಗಮನಕ್ಕೆ ತಂದರೂ ಸಹ ಅವರು ತನಗೆ ಹಣ ನಗಧೀಕರಣ ಮಾಡಿಕೊಳ್ಳಲು ಅವಕಾಶ ನೀಡದೇ ಸತಾಯಿಸಿರುತ್ತಾರೆ. ಈ ಬಗ್ಗೆ ಶಾಖಾ ವ್ಯವಸ್ಥಾಪಕರಿಗೆ ದಿ:24/05/2024ರಂದು ತನಗೆ ಖಾತೆಯಲ್ಲಿನ ಹಣ ಪಡೆದುಕೊಳ್ಳಲು ಅನುಮತಿಸಬೇಕು ಅಂತಾ ಪತ್ರ ಬರೆದರೂ ಏನೂ ಪ್ರಯೋಜನ ಆಗಿಲ್ಲ. ಎದುರುದಾರ ಬ್ಯಾಂಕಿನವರು ತನಗೆ ತನ್ನ ಹಣ ವಿತ್ ಡ್ರಾ ಮಾಡಿಕೊಳ್ಳಲು ನಿರಾಕರಿಸಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರಳು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:28/06/2024 ರಂದು ದೂರು ಸಲ್ಲಿಸಿದ್ದರು.
ದೂರುದಾರಳು ಈ ಪ್ರಕರಣ ದಾಖಲಿಸುವ ಪೂರ್ವದಲ್ಲಿ ಎದುರುದಾರ ಬ್ಯಾಂಕಿಗೆ ನೋಟಿಸು ಕೊಟ್ಟಿದ್ದರು. ಅದಕ್ಕೆ ಪ್ರತಿ ಉತ್ತರವಾಗಿ ಬ್ಯಾಂಕಿನವರು ಸದರಿ ದೂರುದಾರಳು ತನ್ನ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಇದ್ದರೂ ಓರ್ವ ಶಿವಕುಮಾರ ಗಂಗಾಧರ ಹಿರೇಮಠ ಎಂಬುವವರಿಗೆ ರೂ.2 ಲಕ್ಷಗಳ ಚೆಕ್ಕನ್ನು ಕೊಟ್ಟಿದ್ದರು. ಆ ಚೆಕ್ಕನ್ನು ಬ್ಯಾಂಕ್ ಮಾನ್ಯಮಾಡಿ ಹಣ ಸಂದಾಯ ಮಾಡಿರುವುದಾಗಿ ಹೇಳಿ, ದೂರುದಾರಳೇ ಚೆಕ್ ಹಣವನ್ನು ಬ್ಯಾಂಕಿಗೆ ಭರಿಸ ಬೇಕು ಅಂತಾ ಆಕ್ಷೇಪಿಸಿದ್ದರು. ಇಲ್ಲದೇ ಇದ್ದಲ್ಲಿ ದೂರುದಾರಳ ವಿರುದ್ಧ ಮಾನಹಾನಿ ಮತ್ತು ಮಾನಸಿಕ ಹಿಂಸೆ ಪ್ರಕರಣ ದಾಖಲಿಸಿರುವುದಾಗಿ ಎದುರುದಾರ ಬ್ಯಾಂಕಿನವರು ನೋಟಿಸಿನಲ್ಲಿ ತಿಳಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರಳ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಇದ್ದರೂ ಸಹ ರೂ.2 ಲಕ್ಷಗಳ ಚೆಕ್ಕನ್ನು ಎದುರುದಾರ ಬ್ಯಾಂಕ್ ಮಾನ್ಯ ಮಾಡಿರುವುದಾಗಿ ಹೇಳಿದ್ದು ಇರುತ್ತದೆ. ಆದರೆ ರಿಸರ್ವ ಬ್ಯಾಂಕ್ ಆಪ್ ಇಂಡಿಯಾ ಮಾರ್ಗಸೂಚಿಗಳಂತೆ ಹಾಗೂ ಬ್ಯಾಂಕಿಂಗ್ ನಿಯಮಾವಳಿಗಳಂತೆ ಯಾವುದೇ ವ್ಯಕ್ತಿಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಬೇರೊಬ್ಬ ವ್ಯಕ್ತಿ/ಸಂಸ್ಥೆಗೆ ಚೆಕ್ಕನ್ನು ನೀಡಿದ್ದರೇ, ಆ ಚೆಕ್ಕನ್ನು ನಗಧೀಕರಿಸುವ ಬ್ಯಾಂಕ್/ಹಣಕಾಸು ಸಂಸ್ಥೆ ಮೊದಲು ಆತನ ಖಾತೆಯಲ್ಲಿ ಸಾಕಷ್ಟು ಹಣ ಜಮೆ ಇದೆಯೋ ಇಲ್ಲವೋ ಅಂತಾ ಪರಿಶೀಲಿಸಿ ನಂತರ ಆ ಚೆಕ್ಕನ್ನು ಮಾನ್ಯ ಮಾಡಲಾಗುತ್ತದೆ. ಒಂದು ವೇಳೆ ಚೆಕ್ಕು ನೀಡಿದ ವ್ಯಕ್ತಿಯ ಖಾತೆಯಲ್ಲಿ ಸಾಕಷ್ಟು ಹಣ ಜಮಾ ಇಲ್ಲದೇ ಹೋದರೆ ಆ ಚೆಕ್ಕನ್ನು ಸಾಕಷ್ಟು ಹಣ ಇಲ್ಲ ಎಂಬ ಹಿಂಬರಹದೊಂದಿಗೆ ಅಮಾನ್ಯ ಮಾಡಲಾಗುತ್ತದೆ. ಆದರೆ ದೂರುದಾರಳ ಪ್ರಕರಣದಲ್ಲಿ ಅವಳ ಖಾತೆಯಲ್ಲಿ ಸಾಕಷ್ಟು ಹಣಇರದೇ ಹೋದರೂ ಅವಳ ಚೆಕ್ಕನ್ನು ಮಾನ್ಯ ಮಾಡಿ ಎದುರುದಾರ ಬ್ಯಾಂಕಿನವರು ಕರ್ತವ್ಯ ಲೋಪ ಎಸಗಿರುತ್ತಾರೆ. ಅಲ್ಲದೇ ಅವಳು ಬೇರೊಂದು ಸಹಕಾರಿ ಸಂಘದಿಂದ ಪಡೆದ ಸಾಲದ ಹಣ ರೂ.80,000/-ಗಳನ್ನು ಅವಳಿಗೆ ವಿತ್‍ಡ್ರಾ ಮಾಡಿಕೊಡಲು ನಿರಾಕರಿಸಿ ಸೇವಾ ನ್ಯೂನ್ಯತೆ ಎಸಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರಳು ಸಹಕಾರಿ ಸಂಘದಿಂದ ಪಡೆದ ಹಣ ರೂ.80,000/- ಗಳನ್ನು ಅದರ ಮೇಲೆ ವಾರ್ಷಿಕ ಶೆ8% ರಂತೆ ಬಡ್ಡಿ ಲೆಕ್ಕ ಹಾಕಿ ದಿ:22/05/2024 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ದೂರುದಾರಳಿಗೆ ಸಂದಾಯ ಮಾಡಲು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರಕ್ಕೆ ಆಯೋಗ ಆದೇಶಿಸಿರುತ್ತದೆ ಜೊತೆಗೆ ಪಿರ್ಯಾದಿದಾರಳಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ.50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರ ಬ್ಯಾಂಕಿಗೆ ಸೂಚಿಸಿದೆ.